Advertisement

Siruguppa: ಶಿಥಿಲಗೊಂಡ ಶಾಲಾ ಕೊಠಡಿ… ವಿದ್ಯಾರ್ಥಿಳಿಗೆ ಬಯಲೇ ಪಾಠಶಾಲೆ

11:54 AM Aug 18, 2024 | Team Udayavani |

ಸಿರುಗುಪ್ಪ: ತಾಲೂಕಿನ ಬೀರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಭೈರಗಾಮದಿನ್ನೆ ಗ್ರಾಮದಲ್ಲಿ ಮಳೆ ಬಂದರೆ ಶಾಲೆಯ ವಿದ್ಯಾರ್ಥಿಗಳಿಗೆ ದೇವಸ್ಥಾನದ ಆವರಣವೇ ಬಯಲು ಪಾಠಶಾಲೆ, ಹೆಚ್ಚಿನ ಮಳೆ ಬಂದರಂತೂ ವಿದ್ಯಾರ್ಥಿಗಳು ಬಯಲಲ್ಲಿ ಕುಳಿತುಕೊಳ್ಳಲು ಆಗದೆ ಶಾಲೆಯಲ್ಲಿ ನಿಂತುಕೊಳ್ಳಲು ಸಾಧ್ಯವಾಗದೆ ಮನೆ ದಾರಿ ಹಿಡಿಯುವುದು ಅನಿವಾರ್ಯವಾಗಿದೆ.

Advertisement

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 130 ವಿದ್ಯಾರ್ಥಿಗಳು ಒಂದರಿಂದ ಐದನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಐದು ತರಗತಿಗಳ ವಿದ್ಯಾರ್ಥಿಗಳಿಗಾಗಿ ಈ ಹಿಂದೆ ಕಟ್ಟಲಾಗಿರುವ ಮೂರು ಕಟ್ಟಡಗಳು ಮಳೆಬಂದರೆ ಸಾಕು ಕ್ಲಾಸ್‌ರೂಂನಲ್ಲಿ ಮಳೆ ನೀರು ತೊಟ್ಟಿಕ್ಕುತ್ತಿದ್ದು, ವಿದ್ಯಾರ್ಥಿಗಳು ಈ ಕೊಠಡಿಗಳಲ್ಲಿ ಕುಳಿತು ಪಾಠ ಪ್ರವಚನ ಕೇಳಲು ಸಾಧ್ಯವಿಲ್ಲ.

ಇದರಿಂದಾಗಿ ಶಾಲೆಯ ಮುಂದಿರುವ ದೇವಸ್ಥಾನದ ಆವರಣವೇ ಇಲ್ಲಿನ ವಿದ್ಯಾರ್ಥಿಗಳಿಗೆ ಬಯಲು ಪಾಠಶಾಲೆಯಾಗಿ ಪರಿವರ್ತನೆಯಾಗುತ್ತದೆ. ಹೆಚ್ಚಿನ ಮಳೆ ಬಂದರಂತೂ ಬಯಲಲ್ಲಿ ನಿಲ್ಲಲು ಆಗದೆ ಶಾಲೆಯ ಒಳಗೆ ಹೋಗಲು ಸಾಧ್ಯವಾಗದೆ ವಿದ್ಯಾರ್ಥಿಗಳು ಮನೆ ದಾರಿ ಹಿಡಿಯುವುದು ಮಾಮೂಲಾಗಿದೆ.

ವಿದ್ಯಾರ್ಥಿಗಳು ಕುಳಿತುಕೊಂಡು ಪಾಠ ಪ್ರವಚನ ಕೇಳಲು ಈ ಗ್ರಾಮದಲ್ಲಿ ಉತ್ತಮವಾದ ಸಮುದಾಯ ಭವನ ಇಲ್ಲದ ಕಾರಣ ಶಿಕ್ಷಕರು ಅನಿವಾರ್ಯವಾಗಿ ಬಯಲು ಜಾಗದಲ್ಲಿಯೇ ವಿದ್ಯಾರ್ಥಿಗಳನ್ನು ಕೂಡಿಸುತ್ತಿದ್ದಾರೆ.

Advertisement

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯೋಜನೆಯಡಿ ೦೫ ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಲು ಅನುದಾನ ಬಿಡುಗಡೆಯಾಗಿದೆ. ಆದರೆ ಸದ್ಯ ಇರುವ ಶಾಲೆಯ ಹಿಂದಿನ ಬಯಲು ಜಾಗ ತಮ್ಮದೆಂದು ಗ್ರಾಮಸ್ಥರೊಬ್ಬರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಹೊಸ ಕೊಠಡಿಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲವೆಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಸದ್ಯ ಇರುವ ಮೂರು ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಕೆ.ಕೆ.ಆರ್.ಡಿ.ಬಿ. ಯೋಜನೆಯಡಿ ಈ 5 ಹೊಸ ಶಾಲಾ ಕಟ್ಟಡಗಳನ್ನು ನಿರ್ಮಿಸಲು ಅನುದಾನವಿದೆ, ಆಧರೆ 5 ಕೊಠಡಿಗಳ ನಿರ್ಮಾಣಕ್ಕೆ ಬೇಕಾದ ಖಾಲಿ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಆಸ್ತಿಯೆಂದು ನ್ಯಾಯಾಲಯಕ್ಕೆ ಹೋಗಿರುವುದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉತ್ತಮವಾದ ಸ್ಥಳದಲ್ಲಿ ಪಾಠ ಪ್ರವಚನ ಮಾಡಿಸಲು ಕ್ರಮ ತೆಗೆದುಕೊಳ್ಳುವುದಾಗಿ ಬಿ.ಇ.ಒ. ಹೆಚ್.ಗರ‍್ರಪ್ಪ ತಿಳಿಸಿದ್ದಾರೆ.

ಕೊಠಡಿಗಳು ಶಿಥಿಲಾವಸ್ತೆಯಲ್ಲಿರುವುದರಿಂದ ಅನಿವಾರ್ಯವಾಗಿ ದೇವಸ್ಥಾನದ ಬಯಲು ಜಾಗದಲ್ಲಿ ಒಂದರಿಂದ ನಾಲ್ಕನೆ ತರಗತಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡುತ್ತಿದ್ದೇವೆ, 5ನೇ ತರಗತಿ ವಿದ್ಯಾರ್ಥಿಗಳನ್ನು ಸೋರುತ್ತಿರುವ ಕೊಠಡಿಯಲ್ಲಿಯೇ ನೀರು ಬೀಳದ ಜಾಗದಲ್ಲಿ ಕೂಡಿಸಿ ಪಾಠ ಮಾಡುತ್ತಿದ್ದೇವೆಂದು ಮುಖ್ಯಗುರು ದೊಡ್ಡಪ್ಪ ಕೋರೆ ತಿಳಿಸಿದ್ದಾರೆ.

ನಮ್ಮೂರಿನ ಶಾಲೆಯ ಬಗ್ಗೆ ಜಿಲ್ಲಾಧಿಕಾರಿಗಳಿಂದ ಹಿಡಿದು ಗ್ರಾಮ ಪಂಚಾಯಿತಿ ಅಧಿಕಾರಿಗಳ ವರೆಗೆ ಮಾಹಿತಿಯನ್ನು ನೀಡಿದ್ದೇವೆ. ಆದರೆ ಇಲ್ಲಿಯವರೆಗೂ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿಲ್ಲವೆಂದು ಗ್ರಾಮಸ್ಥ ಮಂಜುನಾಥ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next