Advertisement

ಟಿಸಿಗಳಿಗಿಲ್ಲ ಸುರಕ್ಷತಾ ಬೇಲಿ

12:50 PM Jan 31, 2020 | Naveen |

ಸಿರುಗುಪ್ಪ: ನಗರದ ವಿವಿಧ ವಾರ್ಡ್‌ ಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅವೈಜ್ಞಾನಿಕವಾಗಿ ಅಳವಡಿಸಿರುವ ವಿದ್ಯುತ್‌ ಕಂಬಗಳು ಸುರಕ್ಷತಾ ಬೇಲಿ ಇಲ್ಲದ ವಿದ್ಯುತ್‌ ಪರಿವರ್ತಕಗಳು (ಟ್ರಾನ್ಸ್‌ಫಾರ್ಮರ್‌) ಅಪಾಯಕ್ಕೆ ಆಹ್ವಾನಿಸುತ್ತಿವೆ.

Advertisement

ಪ್ರತಿನಿತ್ಯ ಮಹಿಳೆಯರು, ವಿದ್ಯಾರ್ಥಿಗಳು, ಸಾರ್ವಜನಿಕರು ವಿದ್ಯುತ್‌ ಶಾಕ್‌ ಹೊಡೆಯುವ ಭಯದಲ್ಲೇ ಸಂಚರಿಸಬೇಕಾಗಿದೆ. ಈ ಸಮಸ್ಯೆಗಳ ಬಗ್ಗೆ ದೂರು ನೀಡಿದರೂ ಜೆಸ್ಕಾಂ ಅಧಿಕಾರಿಗಳು ಗಮನ ಹರಿಸುತ್ತಿಲ್ಲವೆಂಬುದು ನಗರ ನಿವಾಸಿಗಳ ಆರೋಪವಾಗಿದೆ. ನಗರದಲ್ಲಿ ಅಳವಡಿಸಲಾಗಿರುವ ಹಲವು ವಿದ್ಯುತ್‌ ಪರಿವರ್ತಕಗಳ ಸುತ್ತ ಸುರಕ್ಷತೆಗಾಗಿ ಬೇಲಿ ಅಳವಡಿಸಿಲ್ಲ. ಕೆಲವು ಕಡೆ ಪರಿವರ್ತಕಗಳು ನೆಲದ ಮಟ್ಟದಲ್ಲಿವೆ, ಕೆಲವು ಕಡೆ ಪರಿವರ್ತಕಗಳ ಸುತ್ತ ಗಿಡಗಂಟೆಗಳು ಬೆಳೆದು ನಿಂತಿವೆ. ಪರಿವರ್ತಕಗಳ ಮೇಲೆ ಬಳ್ಳಿ ಬೆಳೆದು ವಿದ್ಯುತ್‌ ಪ್ರವಹಿಸುವ ತಂತಿವರೆಗೆ ತಲುಪಿರುವ ನಿದರ್ಶನಗಳೂ ಇವೆ. ಸಾರ್ವಜನಿಕರು ಈ ಬಗ್ಗೆ ಜೆಸ್ಕಾಂ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆನ್ನುವ ಆರೋಪ ಸಾಮಾನ್ಯವಾಗಿದೆ.

ಬಳ್ಳಾರಿ ಮುಖ್ಯರಸ್ತೆಯಲ್ಲಿ ಹೊಸ ಎಸ್‌ ಬಿಐ ಬ್ಯಾಂಕ್‌, 6ನೇ ವಾರ್ಡ್‌ ಶಾಲೆಯ ಹತ್ತಿರ, ರಾಜೀವ್‌ಗಾಂಧಿ  ನಗರದ ಸರ್ಕಾರಿ ಶಾಲೆಯ ಹತ್ತಿರ, ಆ್ಯಕ್ಸಿಸ್‌ ಬ್ಯಾಂಕ್‌ ಸೇರಿದಂತೆ ಹಲವು ಕಡೆಗಳಲ್ಲಿ ಪರಿವರ್ತಕಗಳಿವೆ. ಆದರೆ ಅವುಗಳ ಸುತ್ತ ಬೇಲಿ ಇಲ್ಲ, ಇವೆಲ್ಲ ಮಕ್ಕಳು, ಮಹಿಳೆಯರು, ಹಿರಿಯರು ಸೇರಿದಂತೆ ಸಾರ್ವಜನಿಕರು ಓಡಾಡುವ ಸ್ಥಳಗಳು, ಬೀದಿ ಜಾನುವಾರುಗಳು ಕೂಡ ಸಂಚರಿಸುತ್ತಿರುತ್ತವೆ. ಯಾವುದಕ್ಕೂ ಸುರಕ್ಷತೆ ಚೌಕಟ್ಟು ಇಲ್ಲದಿರುವುದರಿಂದ ಅಪಾಯದ ಸ್ಥಿತಿಯಲ್ಲಿವೆ.

ಪರಿವರ್ತಕದ ಬಳಿ ಹೋದವರು ವಿದ್ಯುತ್‌ ಪ್ರವಹಿಸಿ ತಂತಿ ತಗುಲಿ ಮೃತಪಟ್ಟ ಉದಾಹರಣೆಗಳಿವೆ. ಜೆಸ್ಕಾಂ ಈ ಬಗ್ಗೆ ಗಮನ ಹರಿಸಬೇಕು. ಪರಿವರ್ತಕಗಳ ಸುತ್ತಲು ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಜೋತಾಡುವ ತಂತಿ ಮತ್ತು ಹಳೇ ಕಂಬಗಳು ಪರಿವರ್ತಕಗಳದ್ದು ಒಂದು ಸಮಸ್ಯೆಯಾದರೆ ಅಲ್ಲಲ್ಲಿ ಜೋತು ಬಿದ್ದಿರುವ ತಂತಿ ಮತ್ತು ಹಳೆ ಕಂಬಗಳದ್ದು ಇನ್ನೊಂದು ಸಮಸ್ಯೆ.

ವಿವಿಧ ವಾರ್ಡ್‌ಗಳು ಸೇರಿದಂತೆ ಮುಖ್ಯರಸ್ತೆಯಲ್ಲಿ ಆಗಾಗ ಜೋರಾಗಿ ಗಾಳಿಬೀಸಿದಾಗ ತಂತಿಗಳು ಜೋತು ಬೀಳುತ್ತವೆ, ಅಲ್ಲದೆ ಗಾಳಿ ಮಳೆಗೆ ವಿದ್ಯುತ್‌ ತಂತಿಗಳು ಒಂದಕ್ಕೊಂದು ತಗುಲಿ ಅನೇಕಬಾರಿ ಅವಘಡಗಳು ಸಂಭವಿಸಿವೆ. ಜನ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆಗಳು ನಡೆದಿವೆ. ಇನ್ನೂ ಕೆಲ ಕಡೆ ಕಟ್ಟಡಗಳಿಗೆ ಅತ್ಯಂತ ಸಮೀಪದಲ್ಲೇ ತಂತಿಗಳು ಹಾದುಹೋಗಿದ್ದು, ಕೈಗೆಟುಕುವಂತಿವೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು, ವಿದ್ಯುತ್‌ ನಿರೋಧಕ ರಬ್ಬರ್‌ ಹೊಂದಿರುವ ತಂತಿಗಳನ್ನು ಜೆಸ್ಕಾಂ ಅಳವಡಿಸಬೇಕೆಂಬುದು ಸ್ಥಳೀಯ ನಿವಾಸಿಗಳ ಒತ್ತಾಯವಾಗಿದೆ.

Advertisement

ನಗರದಲ್ಲಿರುವ ವಿದ್ಯುತ್‌ ಪರಿವರ್ತಗಳತ್ತ ತಂತಿಬೇಲಿ
ಅಳವಡಿಸಬೇಕು. ಇಲ್ಲವಾದರೆ ಮುಂದೆ ಏನಾದರೂ ಅನಾಹುತ ಸಂಭವಿಸಿದರೆ ಜೆಸ್ಕಾಂ ಅಧಿಕಾರಿಗಳೇ ನೇರ ಕಾರಣರಾಗುತ್ತಾರೆ.
ಎಚ್‌.ಬಿ.ಗಂಗಪ್ಪ, ನಿವಾಸಿ

ನಗರದಲ್ಲಿ ಒಟ್ಟು 60 ಕಡೆ ವಿದ್ಯುತ್‌ ಪರಿವರ್ತಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಸುರಕ್ಷತೆ ದೃಷ್ಟಿಯಿಂದ ತಂತಿಬೇಲಿ ಅಳವಡಿಸುವ ಕಾರ್ಯವನ್ನು ಶೀಘ್ರವಾಗಿ ಮಾಡಲಾಗುವುದು.
ಶ್ರೀನಿವಾಸ್‌, ಎಇಇ ಜೆಸ್ಕಾಂ ಇಲಾಖೆ

„ಆರ್‌.ಬಸವರೆಡ್ಡಿ, ಕರೂರು

Advertisement

Udayavani is now on Telegram. Click here to join our channel and stay updated with the latest news.

Next