Advertisement

ನೀರು-ಮಣ್ಣು ಮಿತವಾಗಿ ಬಳಸಿ: ರಾಜೇಂದ್ರ

11:56 AM Mar 09, 2020 | Naveen |

ಸಿರುಗುಪ್ಪ: ನೀರು ಮತ್ತು ಮಣ್ಣಿನ ಬಗ್ಗೆ ತಾತ್ಸಾರ ಮಾಡುವುದು ಸರಿಯಲ್ಲ. ಮಣ್ಣು ಮತ್ತು ನೀರು ಹಾಳಾದರೆ ಸರಿಪಡಿಸುವುದು ಕಷ್ಟದ ಕೆಲಸವಾಗಿದೆ. ಆದ್ದರಿಂದ ಇರುವ ನೀರನ್ನು ಮಿತವಾಗಿ ಬಳಸಿ ಬೆಳೆಗಳನ್ನು ಬೆಳೆದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಧಾರವಾಡದ ವಾಲ್ಮಿ ಸಂಸ್ಥೆಯ ನಿರ್ದೇಶಕ ಡಾ| ರಾಜೇಂದ್ರ ಪೋದ್ದಾರ್‌ ಅಭಿಪ್ರಾಯ ಪಟ್ಟರು.

Advertisement

ನಗರದ ಕೃಷಿ ಸಂಶೋಧನಾ ಕೇಂದ್ರ ಆವರಣದಲ್ಲಿ ಕರ್ನಾಟಕ ರಾಜ್ಯ ಜಲಸಂಪನ್ಮೂಲ ಇಲಾಖೆ ಹಾಗೂ ಧಾರವಾಡ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಮತ್ತು ಮುನಿರಾಬಾದ್‌ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ), ನಗರ ಕೃಷಿ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ನಡೆದ ನೀರು ಬಳಕೆದಾರರ ಸಹಕಾರ ಸಂಘಗಳ ಪುನಶ್ಚೇತನ ಕಾರ್ಯಾಗಾರದಲ್ಲಿ
ಮಾತನಾಡಿದ ಅವರು ವಿಶ್ವದಲ್ಲಿ ಹವಾಮಾನ ವೈಪರೀತ್ಯದಿಂದ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಇದರಿಂದಾಗಿ ಸಮುದ್ರದ ನೀರಿನ ಮಟ್ಟ ಹೆಚ್ಚುತ್ತಿದೆ. ತಾಪಮಾನ ಹೆಚ್ಚಳದಿಂದ ಬೆಳೆ ಉತ್ಪನ್ನ ಕಡಿಮೆಯಾಗುತ್ತಿದೆ. ಆರೋಗ್ಯ ಹಾಳಾಗುತ್ತದೆ, ಪ್ರವಾಹ ಬರುತ್ತದೆ, ಇದರಿಂದಾಗಿ ಜಲಸಂಪನ್ಮೂಲ ವ್ಯವಸ್ಥೆಗೆ ಧಕ್ಕೆ ತಂದಿರುವುದೇ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಜಲ ನೀತಿಯಲ್ಲಿ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲಾಗಿದ್ದು, ಈ ನೀತಿಯ ಪ್ರಕಾರ ನದಿ ಬತ್ತಿಸುವಂತಿಲ್ಲ. ಕುಡಿಯುವ ನೀರಿನ ನಂತರ ಉಳಿದ ನೀರನ್ನು ಕೃಷಿ, ಕೈಗಾರಿಕೆಗೆ ಬಳಸಬೇಕು. ಆದರೆ ಇಂದು ನದಿಗಳು ಬತ್ತುವುದು ಸಾಮಾನ್ಯವಾಗಿದೆ. ನದಿಗಳು ಬತ್ತದಂತೆ ನೋಡಿಕೊಳ್ಳಬೇಕೆಂದು ಹೇಳಿದರು.

ತುಂಗಭದ್ರಾ ಕಾಡಾದ ಕೃಷಿ ಮತ್ತು ಸಹಕಾರ ಭೂ ಅಭಿವೃದ್ಧಿ ಅಧಿಕಾರಿ ಡಾ| ಶ್ರೀನಿವಾಸ್‌ ಚಿಂಥಾಲ್‌ ಮಾತನಾಡಿ, ಈ ಭಾಗದಲ್ಲಿ ನೀರು ಬಳಕೆದಾರರ 160 ಸಹಕಾರಿ ಸಂಘಗಳು ನೋಂದಣಿಗೆ ಬಾಕಿ ಇದ್ದು, ರೈತರು ಸಹಕಾರಿ ಸಂಘಗಳ ಮೂಲಕ ನೋಂದಾಯಿಸಿಕೊಂಡರೆ ಪ್ರಾಧಿಕಾರದ ವತಿಯಿಂದ ಸದಸ್ಯರಿಗೆ ವಾಲ್ಮಿಯಲ್ಲಿ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಉದಯವಾಣಿ ದಿನಪತ್ರಿಕೆಯ ಮುಖ್ಯ ವರದಿಗಾರ ಅಮರೇಗೌಡ ಗೋನವಾರ ಅವರನ್ನುಸನ್ಮಾನಿಸಲಾಯಿತು. ಧಾರವಾಡ ವಾಲ್ಮಿ ಸಮಾಲೋಚಕ ಸುರೇಶ್‌ ಕುಲಕರ್ಣಿ, ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ| ಎಂ.ಎ. ಬಸವಣ್ಣೆಪ್ಪ, ಸಹಾಯಕ ಕೃಷಿ
ನಿರ್ದೇಶಕ ನಜೀರ್‌ ಅಹ್ಮದ್‌, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವಿಶ್ವನಾಥ, ಮಣ್ಣು ವಿಜ್ಞಾನಿ ಡಾ| ಅಶೋಕ್‌ ಕುಮಾರ್‌ಗಡ್ಡಿ, ಸಹಾಯಕ ಪ್ರಾಧ್ಯಾಪಕ ಡಾ| ಪ್ರಭುಲಿಂಗ ತೆವಾರಿ, ಕ್ಷೇತ್ರ ಅಧೀಕ್ಷಕ ಡಾ| ಹನುಮಂತಪ್ಪ, ರೈತ ಮುಖಂಡರಾದ ಎನ್‌. ಮೋಹನ್‌ಕುಮಾರ್‌, ಆರ್‌. ಮಾದವರೆಡ್ಡಿ, ವಾ. ಹುಲುಗಪ್ಪ, ರೌಫ್‌ ಸೇರಿದಂತೆ ತಾಲೂಕಿನ ವಿವಿದ ಗ್ರಾಮಗಳ ಪ್ರಗತಿಪರ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next