ಸಿರುಗುಪ್ಪ: ಬೆಳಗ್ಗೆ ಚುಮುಚುಮು ಚಳಿ, ಮಧ್ಯಾಹ್ನವಾಗುತ್ತಲೇ ಬಿಸಿಲಿನ ಝಳಕ್ಕೆ ಜನರು ದಾಹ ತಣಿಸಿಕೊಳ್ಳಲು ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ಕಲ್ಲಂಗಡಿ ಹಣ್ಣಿಗೆ ಉತ್ತಮ ಬೇಡಿಕೆ ಬಂದಿದೆ. ಈಗಾಗಲೇ ನಗರದೆಲ್ಲೆಡೆ ಸಾಕಷ್ಟು ಕಲ್ಲಂಗಡಿ ಆಮದು ಆಗಿದ್ದು, ಅಷ್ಟೇ ಪ್ರಮಾಣದಲ್ಲಿ ಗ್ರಾಹಕರಿರುವುದು ವ್ಯಾಪಾರಿಗಳಲ್ಲಿ ಸಂತಸ ಇಮ್ಮಡಿಗೊಳಿಸಿದೆ.
ತಾಲೂಕಿನಲ್ಲಿ ಬೆಳಗ್ಗೆ ಚಳಿ ಪ್ರಮಾಣ ಹೆಚ್ಚಿದ್ದರೂ ಮಧ್ಯಾಹ್ನದ ಹೊತ್ತಿಗೆ ತಾಪಮಾನ 30ರಿಂದ 32 ಡಿಗ್ರಿ ಸೆಲ್ಸಿಯಸ್‌ಗೆ ಏರಿ ಜನರು ಹೈರಾಣಾಗುತ್ತಿದ್ದಾರೆ. ಹೀಗಾಗಿ ಬೇಸಿಗೆ ಆರಂಭಕ್ಕೂ ಮುನ್ನವೇ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದ್ದು, ಬಿಸಿಲಿನ ತಾಪದ ದಾಹ ತಣಿಸಲು ಜನರು ಕಲ್ಲಂಗಡಿ ಮೊರೆ ಹೋಗುತ್ತಿದ್ದಾರೆ. ನಗರಕ್ಕೆ ಲೋಡ್‌ಗಟ್ಟಲೇ ಕಲ್ಲಂಗಡಿ ಹಣ್ಣು ಬರುತ್ತಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಕಲ್ಲಂಗಡಿ ಹಣ್ಣಿನ ಅಂಗಡಿಗಳು ತೆರೆದಿವೆ. ಸೀಮಾಂಧ್ರ ಪ್ರದೇಶ ಮತ್ತು ಬೆಂಗಳೂರಿನ ಸುತ್ತಮುತ್ತಲಿನಿಂದ ಕಲ್ಲಂಗಡಿ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿವೆ. ಕಲ್ಲಂಗಡಿ ಹಣ್ಣು ಒಂದು ಕೆಜಿ ಲೆಕ್ಕದಲ್ಲಿ ಮಾರಾಟವಾಗುತ್ತಿದ್ದು, ಒಂದು ಕೆಜಿಗೆ ರೂ. 35ರಿಂದ 40ರವರೆಗೆ ಇದೆ. ಒಂದು ಪ್ಲೇಟ್ ಅಥವಾ ಹಣ್ಣಿನ ಒಂದು ಪೀಸ್ ರೂ. 10ಕ್ಕೆ ಮಾರಾಟವಾಗುತ್ತಿದೆ. ಒಟ್ಟಾರೆ ಒಂದು ತಿಂಗಳಿಗೆ 2ರಿಂದ 3 ಲಾರಿ ಲೋಡ್ ಕಲ್ಲಂಗಡಿ ಹಣ್ಣುಗಳು ಮಾರಾಟಮಾಡುತ್ತಿರುವುದಾಗಿ ಕಲ್ಲಂಗಂಡಿ ಹಣ್ಣಿನ ವ್ಯಾಪಾರಿಗಳು ತಿಳಿಸಿದ್ದಾರೆ.
ಬೇಸಿಗೆ ದಿನಗಳಲ್ಲಿ ಉಷ್ಣಾಂಶ ಹೆಚ್ಚಿರುವುದರಿಂದ ಮನುಷ್ಯನ ದೇಹ, ದೇಹದ ನೀರಿನ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ. ಜೊತೆಗೆ ಮನುಷ್ಯನ ದೇಹದಲ್ಲಿನ ನೀರಿನ ಪ್ರಮಾಣ ಬಿಸಿಲಿನ ಝಳಕ್ಕೆ ಕಡಿಮೆಯಾಗುವುದರಿಂದ ನಿರ್ಜಲೀಕರಣ, ಅಜೀರ್ಣದಂಥ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇಂಥ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಕಲ್ಲಂಗಡಿ ಸಹಾಯ ಮಾಡುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಸಿ ಇದ್ದು, ಮಾನವ ದೇಹಕ್ಕೆ ಹೆಚ್ಚಿನ ಪೌಷ್ಠಿಕಾಂಶ ಸಿಗುತ್ತದೆ. ಬಿಸಿಲಿನಲ್ಲಿ ದಾಹ ನೀಗಿಸುವ ಜೊತೆಗೆ ದೇಹದ ಆರೋಗ್ಯ ಕಾಪಾಡುವಲ್ಲಿ ಕಲ್ಲಂಗಡಿ ಹಣ್ಣು ಮುಖ್ಯವಾಗಿದೆ.
ಎಳನೀರಿನ ಮಾರಾಟವು ಜೋರಾಗಿ ನಡೆದಿದ್ದು, ರೂ.35ಕ್ಕೆ ಒಂದು ಎಳೆನೀರು ಮಾರಾಟವಾಗುತ್ತಿದೆ. ಪ್ರತಿದಿನ ನಗರದಲ್ಲಿರುವ ಎಳೆನೀರು ವ್ಯಾಪಾರಿಗಳು ಸುಮಾರು 500ರಿಂದ 700ಕ್ಕೂ ಹೆಚ್ಚು ಎಳೆನೀರು ಮಾರಾಟ ಮಾಡುತ್ತಿದ್ದಾರೆ. ರಾಸಾಯನಿಕ ಮಿಶ್ರಿತ ತಂಪುಪಾನೀಯ ಕುಡಿದು ಆರೋಗ್ಯ ಹಾಳುಮಾಡಿಕೊಳ್ಳುವ ಬದಲು ರೈತರ ನೈಸರ್ಗಿಕ ಉತ್ಪನ್ನಗಳನ್ನು ಸೇವಿಸಿ, ರೈತರಿಗೂ ಪ್ರೋತ್ಸಾಹ ನೀಡಲು ಬೇಸಿಗೆ ಒಳ್ಳೆಯ ಸಮಯವಾಗಿದೆ.
ದಾಹ ತಣಿಸಲು ಕಲ್ಲಂಗಡಿ ಅಷ್ಟೇ ಅಲ್ಲದೇ ಎಳೆನೀರು, ಕಬ್ಬಿನ ಹಾಲು, ನಿಂಬೆರಸ, ಹಣ್ಣಿನ ರಸಕ್ಕೂ ಬೇಡಿಕೆ ಹೆಚ್ಚಾಗಿದೆ. ಒಂದು ಎಳೆನೀರು ರೂ. 35, ಒಂದು ಲೋಟ ಕಬ್ಬಿನ ಹಾಲಿಗೆ ರೂ. 10, ನಿಂಬೆ ಷರಬತ್ತು ಮತ್ತು ಸೋಡಾಕ್ಕೆ ರೂ.10 ಬೆಲೆ ಇದೆ. ಬಿಸಿಲು ಹೆಚ್ಚಿದಂತೆ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚು, ಮಾರ್ಚ್, ಏಪ್ರಿಲ್‌ನಲ್ಲಿ ಮಾರಾಟ ಜೋರಾಗಿರುತ್ತದೆ. ಈಗ ಇನ್ನೂ ಪೂರ್ಣಪ್ರಮಾಣದ ಬೇಸಿಗೆ ಆರಂಭವಾಗಿಲ್ಲ. ಆದರೆ ವ್ಯಾಪಾರ ಜೋರಾಗಲಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಲಿದೆ.
ವ್ಯಾಪಾರಿ
ಒಟ್ಟಾರೆ ಬೇಸಿಗೆ ಮುನ್ನವೇ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಲಕ್ಷಣಗಳು ಕಾಣುತ್ತಿವೆ.ಜನರ ದಾಹ ನೀಗಿಸಿಕೊಳ್ಳಲು ರಾಸಾಯನಿಕ ತಂಪುಪಾನಿಯ ಸೇವಿಸುವ ಬದಲು ನೈಸರ್ಗಿಕವಾಗಿರುವ ಕಲ್ಲಂಗಡಿ ಹಣ್ಣು ಮತ್ತು ಎಳೆನೀರು ಸೇವಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ. ರೈತರಿಗೂ ವ್ಯಾಪಾರವಾಗುತ್ತದೆ.
ಡಾ| ಬಸವರಾಜ, ವೈದ್ಯರು
ಆರ್. ಬಸವರೆಡ್ಡಿ ಕರೂರು