ಸಿರುಗುಪ್ಪ: ತಾಲೂಕಿನ ಗಡಿಗ್ರಾಮ ಸೀಮಾಂಧ್ರ ಪ್ರದೇಶದ ದೇವರಗುಡ್ಡದ ಮಾಳ ಮಲ್ಲೇಶ್ವರ ಜಾತ್ರೆಯಲ್ಲಿ ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಬೆಳಗಿನ ವರೆಗೆ ನಡೆದ ಬಡಿದಾಟದ ಜಾತ್ರೆಯಲ್ಲಿ ಒಟ್ಟು 70 ಜನರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾದ ಘಟನೆ ನಡೆದಿದೆ.
ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗುವಾಗ ಉರಿಯುವ ಬೆಂಕಿಯ ಪಂಜುಗಳನ್ನು ತೂರಿದ ವೇಳೆ ನೂಕುನುಗ್ಗಲು ಉಂಟಾಗಿದ್ದರಿಂದ 70ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಈ ಜಾತ್ರೆಯಲ್ಲಿ ಭಕ್ತರಿಗೆ ಯಾವುದೇ ಗಾಯಗಳಾಗಬಾರದು,ಗಲಾಟೆಗಳಾಗಬಾರದು ಎನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿ ರಂಜಿತ್ ಬಾಷಾ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಾಧವ್ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದ್ದರು.
5ಡ್ರೋಣ್ ಕ್ಯಾಮರಾಗಳು, ನೂರು ಕಡೆ ಸಿಸಿ ಕ್ಯಾಮೆರ,ಒಂದು ಸಾವಿರ ಪೋಲಿಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು.
ಆದರೂ ಉತ್ಸವ ಮೂರ್ತಿಗಳನ್ನು ವಶಪಡಿಸಿಕೊಳ್ಳಲು 11 ಗ್ರಾಮಗಳ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಕೈಯಲ್ಲಿ ಬಡಿಗೆ ಹಿಡಿದು ಹೊಡೆದಾಡುವ ಸಂದರ್ಭದಲ್ಲಿ ಬೆಂಕಿಯ ಪಂಜುಗಳನ್ನು ತೂರಿದ್ದರಿಂದ ಹೆಚ್ಚಿನ ಜನರಿಗೆ ಗಾಯಗಳಾಗಲು ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕರ್ನೂಲ್ ಎಸ್.ಪಿ. ಈ ಜಾತ್ರೆಯಲ್ಲಿ ಒಟ್ಟು 70 ಜನರಿಗೆ ಗಾಯಗಳಾಗಿದ್ದು, ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಆದೋನಿ ಸರ್ಕಾರಿ ಆಸ್ಪತ್ರೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.