ಸಿರುಗುಪ್ಪ: ಎಲ್ಲೆಡೆ ಕೊರೊನಾ ರೋಗದ ಭೀತಿಯಿಂದ ಜನರು ತತ್ತರಿಸುತ್ತಿದ್ದು, ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿರುವ ಹಳೇ ಶೌಚಾಲಯದ ಸ್ವತ್ಛತೆಗೆ ಇಲ್ಲಿನ ಅಧಿಕಾರಿಗಳು ಸೂಕ್ತ ಗಮನ ಹರಿಸದ ಕಾರಣ ದುರ್ನಾತ ಗಾಳಿಯಲ್ಲಿ ತೇಲಿ ಬಂದು ಪ್ರಯಾಣಿಕರ ಮೂಗಿಗೆ ರಾಚುತ್ತಿದೆ.
ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು, ಪ್ರಯಾಣ ಮಾಡಲು ಇಲ್ಲಿ ಬಂದು ಹೋಗುತ್ತಿರುತ್ತಾರೆ. ರಾಜ್ಯದ ಬೇರೆ ಬೇರೆ ಸ್ಥಳಗಳಿಗೆ ಈ ಮೂಲಕ ಹಾದುಹೋಗುವ ಬಸ್‌ಗಳು ಸಹ ಇಲ್ಲಿ ಕೆಲ ಕಾಲ ಬಂದು ನಿಂತು ಹೊರಡುತ್ತವೆ. ಈ ರೀತಿ ಇಲ್ಲಿಗೆ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಇದೆ.
ಇಲ್ಲಿ ಬಸ್ ಪ್ರಯಾಣ ಮಾಡುವ ಪ್ರಯಾಣಿಕರ ಪೈಕಿ ಹಲವರು ಮಲಮೂತ್ರ ವಿಸರ್ಜನೆಗಾಗಿ ನಿಗದಿತ ಶುಲ್ಕ ಪಾವತಿಸಿ ಶೌಚಾಲಯ ಬಳಸಿಕೊಳ್ಳುತ್ತಾರೆ. ಆದರೆ ಈ ಶೌಚಾಲಯವನ್ನು ಸೂಕ್ತವಾಗಿ ಸ್ವಚ್ಛಗೊಳಿಸಿ ಸುವ್ಯವಸ್ಥಿತವಾಗಿ ನೋಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಇಲ್ಲಿನ ಇಲಾಖಾ ಅಧಿಕಾರಿಗಳು ಮಾಡದಿರುವ ಕಾರಣ ಈ ಶೌಚಾಲಯದೊಳಗೆ ವಿಪರೀತ ದುರ್ನಾತ ತುಂಬಿಕೊಂಡು ಅದರ ದುರ್ಗಂಧ ಗಾಳಿಯಲ್ಲಿ ತೇಲಿಬಂದು ಪ್ರಯಾಣಿಕರು ಮತ್ತು ಸಾರ್ವಜನಿಕರು ಮೂಗು ಮುಚ್ಚಿಕೊಳ್ಳುವಂಥ ವಾತಾವರಣ ಸೃಷ್ಟಿಸಿದೆ.
ಒಂದೆಡೆ ಸ್ವಚ್ಛ ಭಾರತ ಲಾಂಛನದ ಘೋಷಣೆಯ ವಾಕ್ಯವನ್ನು ಬರೆಯಲಾಗಿದೆ, ಆದರೆ ಇದಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ಇಲ್ಲಿನ ಶೌಚಾಲಯ ಶುಚಿತ್ವವಿಲ್ಲದೆ ಕೆಟ್ಟವಾಸನೆ ಹರಡುತ್ತಿದೆ. ಈಗಾಗಲೇ ಕೊರೊನಾ ವೈರಸ್ ರೋಗದ ಭೀತಿಯಿಂದ ಮುಖಕ್ಕೆ ಮಾಸ್ಕ್ಹಾ ಕಿಕೊಂಡು ಮೂಗು ಮುಚ್ಚಿಕೊಂಡು ಒಡಾಡುತ್ತಿರುವ ಇಲ್ಲಿನ ಜನರು ಬಸ್‌ನಿಲ್ದಾಣದಲ್ಲಿನ ಶೌಚಾಲಯದ ದುರ್ನಾತಕ್ಕೆ ಬಟ್ಟೆಯಿಂದ ಮೂಗು ಮುಚ್ಚಿಕೊಂಡು ಬಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೂಗು ಮುಚ್ಚಿಕೊಂಡು ಈ ದುರ್ನಾತ ಮೂಗಿಗೆ ಬಡಿಯುತ್ತಿರುವುದರಿಂದ ಇಲ್ಲಿ ಅಶುಚಿತ್ವ ಎದ್ದು ಕಾಣುತ್ತಿದೆ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಪ್ರಯಾಣಿಕರಿಗೆ ಕೊರೊನಾ ವೈರಸ್ ರೋಗದ ಜೊತೆಗೆ ಬೇರೆ ಬೇರೆ ರೀತಿಯ ಖಾಯಿಲೆಗಳು ಬರುವ ಸಾಧ್ಯತೆ ಇದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇಲ್ಲಿನ ಶೌಚಾಲಯದ ಶುಚಿತ್ವಕ್ಕೆ ಆದ್ಯತೆ ನೀಡಿ ಅನುಕೂಲ ಮಾಡಿಕೊಡಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಬಸ್ ನಿಲ್ದಾಣದಲ್ಲಿರುವ ಹಳೆ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲ ಎನ್ನುವ ದೂರುಗಳು ಸಾರ್ವಜನಿಕರಿಂದ ಕೇಳಿಬಂದಿದ್ದು, ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಕೆ.ಎಂ. ತಿರುಮಲೇಶ,
ಸಿರುಗುಪ್ಪ ಸಾರಿಗೆ ಡಿಪೋ ಅಧಿಕಾರಿ
ಆರ್.ಬಸವರೆಡ್ಡಿ ಕರೂರು