ಶಿರಸಿ: ತಾಲೂಕಿನ ಮಂಜುಗುಣಿಯಲ್ಲಿ ನಡೆದ ಶ್ರೀ ವೆಂಕಟರಮಣ ದೇವರ ರಥೋತ್ಸವ ಸಂದರ್ಭದಲ್ಲಿ ಕಳೆದು ಹೋದ ಬಂಗಾರದ ಸರ ಮರಳಿ ಮಾಲಕರಿಗೆ ತಲುಪಿಸಿದ ಪ್ರಾಮಾಣಿಕ ಘಟನೆ ನಡೆದಿದೆ.
ಸಿದ್ದಾಪುರದ ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ ಲೋಕೇಶ ಚಂದ್ರು ನೇತ್ರಕರ್ ಅವರು ತಮಗೆ ಸಿಕ್ಕಿದ್ದ ಸುಮಾರು 1.50 ಲಕ್ಷ ರೂ. ಬೆಲೆಯ ಬಂಗಾರದ ಸರವನ್ನು ಸರದ ಮಾಲಕಿ ನಾಗರತ್ನ ಮಂಜುನಾಥ ಗೌಡಾ ಎಂಬುವರಿಗೆ ಮರಳಿಸುವ ಮೂಲಕ ಮಾನವಿಯತೆ ಮೆರೆದವರಾಗಿದ್ದಾರೆ.
ನಾಗರತ್ನ ಮಂಜುನಾಥ ಗೌಡ ಎಂಬುವರು ತಮ್ಮ ಕುಟುಂಬದವರೊಂದಿಗೆ ರಾತ್ರಿ 10ಗಂಟೆಯ ಸುಮಾರಿಗೆ ಮಂಜುಗುಣಿಯ ರಥೋತ್ಸವ ಕ್ಕೆ ತೆರಳಿ ಅಲ್ಲಿ ದೇವರಿಗೆ ಹಣ್ಣು ಕಾಯಿ ಸಮರ್ಪಿಸಿ ಹೊರಗೆ ಬಂದು ಇನ್ನೇನು ರಥ ಹತ್ತುವ ಆತುರದಲ್ಲಿದ್ದರು.
ಈ ಸಂದರ್ಭದಲ್ಲಿ ಅವರಿಗೆ ಕೊರಳಲ್ಲಿದ್ದ ಬಂಗಾರದ ಸರ ಕಾಣೆಯಾಗಿರುವುದು ಕಂಡು ಬಂತು. ಅವರು ಕೂಡಲೇ ರಥ ಹತ್ತಿರವಿದ್ದ ಮಂಜುಗುಣಿ ದೇವಸ್ಥಾನದ ಟ್ರಸ್ಟಿ ಶ್ರೀರಾಮ ಹೆಗಡೆ ಬರಸುಗುಣಿ ಹತ್ತಿರ ಸರ ಕಾಣೆಯಾದ ಬಗ್ಗೆ ವಿಚಾರಿಸಿದ್ದಾರೆ.ಅವರು ನಿಮ್ಮ ಕುಲದೇವರಾದ ವೆಂಕಟರಮಣ ದೇವರಿಗೆ ಹರಕೆ ಹೊತ್ತು, ಸರ ಸಿಗಬಹುದೆಂದು ಹೇಳಿದರು. ಅದರಂತೆ ನಾಗರತ್ನ ದೇವರ ಬಳಿ ಹೋಗಿ ಹರಕೆ ಹೊತ್ತು ಹದಿನೈದು ನಿಮಿಷದ ನಂತರ ಪುನಃ ಶ್ರೀರಾಮ ಹೆಗಡೆಯವರ ಬಳಿ ಬಂದಾಗ ಕಾಣೆಯಾದ ಸರ ಅವರ ಕೈಯಲ್ಕಿತ್ತು.
ಬ್ಯಾಂಕ್ ಆಪ್ ಬರೋಡಾ ಶಾಖಾ ಉಪ ಪ್ರಭಂಧಕರಾಗಿರುವ ಲೋಕೇಶ ಎಂಬುವರು ತಮಗೆ ದೇವಸ್ಥಾನದ ಗರ್ಭಗುಡಿಯ ಎದುರಿರುವ ಗರುಡ ಕಂಬದ ಕೆಳಗೆ ಸಿಕ್ಕಿದ್ದ ಬಂಗಾರದ ಸರವನ್ನು ಟ್ರಸ್ಟಿ ಶ್ರೀರಾಮ ಹೆಗಡೆ ಹತ್ತಿರ ನೀಡಿ ದಯವಿಟ್ಟು ಕಳೆದುಕೊಂಡವರನ್ನು ವಿಚಾರಿಸಿ ನೀಡಿ ಎಂದು ಹೊರಟು ಹೋಗಿದ್ದರು. ಸಾರ್ವಜನಿಕರ ಎದುರು ನಾಗರತ್ನ ಅವರಿಗೆ ಸರ ಹಸ್ತಾಂತರಿಸಲಾಯಿತು.