ಶಿರಸಿ: ಪಾಶ್ಚಾತ್ಯ ರಾಷ್ಟ್ರದಿಂದ ಆಮದಾಗುವ ಅಡಿಕೆ ನಿರ್ಬಂಧಿಸಲು ಸಂಸದರು ವಿಫಲರಾಗಿದ್ದಾರೆ. ಭಾರತದ ಅಡಿಕೆಗಳು ಇದ್ದಾಗ ಅದರ ಪರವಾಗಿ ಧ್ವನಿ ಎತ್ತದೇ ಇರುವುದು ಬೆಳೆಗಾರರಿಗೆ ಮಾಡುವ ಮೋಸ ಎಂದು ಶಾಸಕ ಭೀಮಣ್ಣ ನಾಯ್ಕ ದೂರಿದರು.
ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಅಡಿಕೆ ಬೆಳೆಗಾರ ಪ್ರದೇಶದ ಸಂಸದರು ಈ ಬಗ್ಗೆ ಪ್ರಧಾನಿ, ವಾಣಿಜ್ಯ, ವಿದೇಶಾಂಗ, ಕೃಷಿ ಸಚಿವರ ಗಮನಕ್ಕೆ ತರಬೇಕು. ಸ್ವಾರ್ಥ ರಾಜಕಾರಣ ಕೈ ಬಿಡಬೇಕು. ಕಾಂಗ್ರೆಸ್ ಸಂಸದರ ಬಳಿಯೂ ಈ ಬಗ್ಗೆ ಮಾತನಾಡಲು ಹೇಳಿದ್ದೇವೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಬಳಿಯೂ ಹೋರಾಟ ಮಾಡಲು ಭೇಟಿಯಾಗಿ ಚರ್ಚಿಸುತ್ತೇವೆ ಎಂದರು.
ಮಲೆನಾಡಿನ ಅಡಿಕೆ ಬೆಳೆಯೂ ಗುಣಮಟ್ಟದಿಂದ ಕೂಡಿದ್ದು, ಇಲ್ಲಿಯ ಅಡಿಕೆ ಜೊತೆ ಕಳಪೆ ಅಡಿಕೆಯ ಯಾರೂ ಮಿಶ್ರಣ ಮಾಡಬಾರದು. ಈ ಬಗ್ಗೆ ಎಪಿಎಂಸಿ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಅಡಿಕೆ ಬೆಳೆಗಾರರಿಗೆ ಎದುರಾದ ಸಂಕಷ್ಟ ದೂರ ಮಾಡಬೇಕು. ವಾಡಿಕೆಗಿಂತ ಅಧಿಕ ಮಳೆ ಬಿದ್ದಿರುವುದರಿಂದ ಕೊಳೆ ರೋಗ ಹೆಚ್ಚಾಗಿರುವ ಜೊತೆಗೆ ಎಲೆ ಚುಕ್ಕೆ ರೋಗವು ವ್ಯಾಪಕವಾಗುತ್ತಿದೆ. ಈಗ ಕೊಳೆ ರೋಗದಿಂದ ಮರ ಕೂಡ ಸಾಯುತ್ತಿದೆ. ಉತ್ತರ ಕನ್ನಡದಲ್ಲಿ ಈಗಾಗಲೇ ಶೇ.60ಕ್ಕೂ ಅಧಿಕ ಬೆಳೆ ಹಾನಿಯಾಗಿದೆ ಎಂದರು.
ಬೆಳೆಗಾರರಿಗೆ ಪರಿಹಾರ ಕೊಡಲು ಸಿಎಂ ಜೊತೆ ಚರ್ಚಿಸಿದ್ದೇನೆ:
ಮಲೆನಾಡಿನಲ್ಲಿ ಅಡಿಕೆ ನಂಬಿದ ಕುಟುಂಬಗಳೇ ಹೆಚ್ಚು. ಅಡಿಕೆ ಬೆಳೆಗಾರರ ಜೊತೆ ಅದನ್ನು ನಂಬಿದ ಕಾರ್ಮಿಕ ಕುಟುಂಬದವರೂ ಇದ್ದಾರೆ. ಇದರಿಂದ ಎಲ್ಲರಿಗೂ ನಷ್ಟ. ಸಾಲ, ಬದುಕು, ಶಿಕ್ಷಣ, ಆರೋಗ್ಯದ ಸಮಸ್ಯೆಯಾಗುತ್ತಿದೆ. ಕೊಳೆ ರೋಗಕ್ಕೆ ಸಂಬಂಧಿಸಿ ಅಡಿಕೆ ಬೆಳೆಗಾರರಿಗೆ ಪರಿಹಾರ ಕೊಡಲು ಈಗಾಗಲೇ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿದ್ದೇನೆ. ಸಿದ್ದರಾಮಯ್ಯ ಈ ಮೊದಲು ಸಿಎಂ ಆಗಿದ್ದಾಗಲೂ ಕೊಳೆ ರೋಗ ಪರಿಹಾರ ಕೊಟ್ಟಿದ್ದರು. ಅದೇ ಮಾನದಂಡದಂತೆ ಈಗ ಕೊಡಬೇಕು ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಶಾಂತಾರಾಮ ಹೆಗಡೆ ಶೀಗೇಹಳ್ಳಿ, ಹಿರಿಯ ನಾಯಕ, ಶಾಸಕ ಆರ್.ವಿ. ದೇಶಪಾಂಡೆ ಸಂಬಂಧಪಟ್ಟವರ ಸಂಪರ್ಕಿಸಿ ಹೊರ ದೇಶದ ಅಡಿಕೆ ಆಮದು ನಿರ್ಬಂಧ ಹೇರಿದ್ದರಿಂದ ಅಡಿಕೆ ದರ ಏರಿ ಮಾರುಕಟ್ಟೆ ಸ್ಥಿರತೆಗೆ ಕಾರಣವಾಗಿತ್ತು ಎಂದು ನೆನಪಿಸಿದರು. ಪ್ರಮುಖರಾದ ಎಸ್.ಕೆ.ಭಾಗವತ್, ಜಗದೀಶ ಗೌಡ, ವೆಂಕಟೇಶ ಹೆಗಡೆ ಹೊಸಬಾಳೆ, ಪ್ರದೀಪ ಶೆಟ್ಟಿ, ಜ್ಯೋತಿ ಗೌಡ, ಪ್ರಸನ್ನ ಶೆಟ್ಟಿ ಇತರರಿದ್ದರು.