ಶಿರಸಿ: ಶಂಕರಾಚಾರ್ಯರ ಬಗ್ಗೆ ಕೇಂದ್ರ ಸಚಿವ ನಾರಾಯಣ ರಾಣೆ ಆಡಿದ ಮಾತಿಗೇಕಿಲ್ಲ ಸಂಸದರ ಪ್ರಶ್ನೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕುಮಾರ ಜೋಶಿ ಸೋಂದಾ ಕೇಳಿದ್ದಾರೆ.
ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿ, ಕೇಂದ್ರ ಸಚಿವ ನಾರಾಯಣ ರಾಣೆ ಅವರು ಶಂಕರಾಚಾರ್ಯರು ಹಿಂದೂ ಸಮಾಜಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಕೇಳುವ ಮೂಲಕ ಬಿಜೆಪಿ ಮುಖವಾಡ ಕಳಚಿ ಬೀಳಲು ಕಾರಣಗಿದ್ದಾರೆ. ಶಂಕರರು ಅದ್ವೈತಿಗಳು. ನಾಲ್ಕು ಪೀಠ ಸ್ಥಾಪನೆ ಮಾಡಿದ್ದಾರೆ. ಅವರ ಅನುಯಾಯಿಗಳಾದ ನಾವು ಪಂಚ ದೇವರನ್ನು ನಿತ್ಯ ಪೂಜಿಸುತ್ತೇವೆ. ಶಂಕರರ ಕೊಡುಗೆ ನಾರಾಯಣರಿಗೆ ತಿಳಿದಿಲ್ಲ. ಅಪೂರ್ಣ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಸರಿಯಲ್ಲ ಎಂದು ಹೇಳಿದ್ದೇ ತಪ್ಪಾಯಿತಾ? ಬಿಜೆಪಿ, ಬೂಟಾಟಿಕೆ ಪ್ರಶ್ನೆ ಮಾಡುವದು ಬೇಡವಾ? ಅದೇ ತಪ್ಪಾಗುತ್ತದಾ ಎಂದೂ ಕೇಳಿದರು.
ಅನಂತಕುಮಾರ ಹೆಗಡೆ ಅವರು ಸಿಎಂ ಅವರ ಮೇಲೆ ನಾಲಗೆ ಹರಿದು ಬಿಟ್ಟಿದ್ದಾರೆ. ತಾವು ಹಿಂದೂ ರಕ್ತ ಹೇಳುತ್ತಾರೆ. ಹಿಂದೂಗಳ ನಂಬಿಕೆಯಾದ ಶಂಕರರ ಬಗ್ಗೆ ಆಡಿದ ಮಾತಿಗೆ ಇವರ ಪ್ರಶ್ನೆ ಏಕಿಲ್ಲ ಎಂದೂ ಕೇಳಿದ ಅವರು, ಸಂಸದರು ಏನು ಹೇಳುತ್ತಾರೆ, ಇವತ್ತು ಇದಕ್ಕೆ ಅನಂತರು ಉತ್ತರ ನೀಡಬೇಕು. ಇಲ್ಲವಾದರೆ ರಾಮ ಮಾತ್ರ ದೇವರಾ? ಎಂದೂ ಹೇಳಬೇಕು ಎಂದರು.
ಸಂಸದ ಹೆಗಡೆ ಅವರು ಹಿಂದು ಹಾಗೂ ಮುಸ್ಲಿಂ ನಡುವೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅಭಿವೃದ್ದಿ ಮಾಡಿ, ಅಥವಾ ಮಾಡಿದ್ದನ್ನು ಮಾತಾಡಲಿ. ಅದು ಬಿಟ್ಟು ರಾಮ ಮಂದಿರದ ಹೆಸರಿನಲ್ಲಿ ರಾಜಕಾರಣ ಮಾಡುವದು ಸರಿಯಲ್ಲ. ನಾವೂ ರಾಮ ಭಕ್ತರೇ ಎಂದರು.
ಈ ವೇಳೆ ಬಾಲಚಂದ್ರ ಹೆಗಡೆ ಬಕ್ಕಳ, ಗುರುಪಾದ ಹೆಗಡೆ ಕಿಬ್ಬಳ್ಳಿ, ಶ್ರೀಧರ ಹೆಗಡೆ ಹಲಸರಿಗೆ, ಅಕ್ಷಯ ಹೆಗಡೆ ಶಿರಸಿ ಇತರರು ಇದ್ದರು.