ಶಿರಸಿ: ಜನ್ಮಜಾತ ದೋಷದಿಂದ ಹುಟ್ಟಿದ ಆಕಳ ಕರುವಿಗೆ ಶಸ್ತ್ರ ಚಿಕಿತ್ಸೆ ಮೂಲಕ ಜೀವ ಅಪಾಯದಿಂದ ರಕ್ಷಿಸಿದ ಘಟನೆ ನಡೆದಿದೆ.
ತಾಲೂಕಿನ ಮತ್ತಿಘಟ್ಟದ ಡಿ.ಆರ್.ಭಟ್ಟರ ಮನೆಯ ಗೀರ್ ತಳಿಯ ಆಕಳಿಗೆ ಜನಿಸಿದ ಜರ್ಸಿ ಕರುವಿಗೆ ಹಣೆಯ ಮೇಲೆ ಮಿತಿ ಮೀರಿ ಬೆಳೆದ ಚರ್ಮದ ಪಾಕೆಟ್ ಇದ್ದು, ಕರುವಿನ ದೈನಂದಿನ ಚಟುವಟಿಕೆಗೆ ಇದು ತೊಂದರೆ ನೀಡುತ್ತಿತ್ತು.
ಆದಕ್ಕಾಗಿ ಶಿರಸಿ ನಗರದ ಸಮರ್ಪಣದಲ್ಲಿ ಒಂದೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಹೆಚ್ಚುವರಿ ಚರ್ಮವನ್ನು ಕತ್ತರಿಸಿ, ಕರುವಿನ ಹಣೆಯ ಭಾಗದಲ್ಲಿ ಬೇರ್ಪಟ್ಟ ಮಾಂಸ ಹಾಗೂ ಚರ್ಮವನ್ನು ಹೊಲಿಗೆ ಹಾಕಿ ಜೋಡಿಸಿದರು.
ಡಾ. ಪಿ.ಎಸ್ .ಹೆಗಡೆ ಹಾಗೂ ಡಾ.ಸುಬ್ರಾ ಭಟ್ಟರವರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದರು. ವಿವೇಕ ಭಟ್ಟ ಹಾಗೂ ನಾಗಶ್ರೀ ಗೌಡ ಸಹಕರಿಸಿದರು.
ಡಾ. ಪಿ.ಎಸ್.ಹೆಗಡೆ ಮಾಹಿತಿ ನೀಡಿ, ಇದು ಜನ್ಮಜಾತ ವೈಪರಿತ್ಯ. ಕರುವಿನ ಬೆಳವಣಿಗೆಯ ಹಂತದಲ್ಲಿ ಚರ್ಮ ಸರಿಯಾಗಿ ಬೆಸೆಯದೇ ಉದ್ದವಾಗಿ ಬೆಳೆದು ಈ ಸ್ಥಿತಿ ಉಂಟಾಗಿದ್ದು, ತುದಿ ತೆರೆದುಕೊಂಡಿದ್ದರ ಪರಿಣಾಮವಾಗಿ ಸೊಂಕಿತ ದ್ರವ ಪ್ಯಾಕೆಟ್ನನೊಳಗೆ ತುಂಬಿ ಕರುವಿನ ಜೀವಕ್ಕೆ ಅಪಾಯವೊಡ್ಡಬಹುದು ಆದ್ದರಿಂದ ಮೂರು ದಿನದ ಕರುವಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಕರು ಸಂಪೂರ್ಣ ಚೇತರಿಕೆಯಾಗುತ್ತಿದೆ ಎಂದರು.