ಶಿರಸಿ: ಕಳೆದ 19 ರಿಂದ ಆರಂಭಗೊಂಡ ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆಗಳಲ್ಲಿ ಪ್ರಮುಖವಾದ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಭಕ್ತ ಜನರ ಭಾವೋದ್ವೇಗದಲ್ಲಿ ಬುಧವಾರ ಮುಕ್ತಾಯಗೊಂಡಿತು.
ಜಾತ್ರೆಯ ಕೊನೇಯ ದಿನವಾದ ಬುಧವಾರ ಬೆಳಿಗ್ಗೆ 10;15ರ ತನಕ ಸೇವೆಗಳ ಸ್ವೀಕಾರ ಪೂರ್ಣವಾದವು. ಬಳಿಕ 10;41ರ ಸುಮಾರಿಗೆ ದೇವಿ ಗದ್ದುಗೆಯಿಂದ ಕೆಳಗಿಳಿದಳು. ಮಾರಿಕಾಂಬೆಗೆ ಜಯ, ಉಘೇ, ಉಘೇ ಎಂಬ ಘೋಷಣೆಗಳ ಮಧ್ಯೆ ಭಕ್ತರ ಕಣ್ಣಿನ ಹನಿಗಳ ನಡುವೆ ವಿದಾಯ ವಿಧಾನ ನಡೆದವು. ನಾಡಿಗ ಕುಟುಂಬದ ವಿಜಯ ನಾಡಿಗರು ಜಾತ್ರಾ ಗದ್ದುಗೆಯಲ್ಲಿ ದೇವಿಗೆ ಮಹಾ ಮಂಗಳಾರತಿ ಮಾಡಿದ ಬಳಿಕ ವಿಸರ್ಜನಾ ವಿಧಿ ವಿಧಾನಗಳು ಆರಂಭವಾದವು. ಬಾಬುದಾರರು, ಬಾಬುದಾರ ಸಹಾಯಕರು, ಜೋಗತಿಯರು, ಅಸಾದಿಗಳು, ಮಡಿವಾಳರು, ಮೇತ್ರಿಗಳು ಆಚರಣೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.
ಮಧುವಣಗಿತ್ತಿಯಾಗಿ ರಥ ಏರಿ ಬರುವ ಅಮ್ಮ ಹೋಗುವಾಗ ವಿಶೇಷವಾಗಿ ಸಿದ್ಧಗೊಳಿಸಲಾದ ಅಟ್ಟದಲ್ಲಿ ಸುಡು ಸುಡು ಬಿಸಿಲಿನಲ್ಲಿ ತೆರಳಿದಳು. ಜಾತ್ರಾ ಚಪ್ಪರ ಬಿಡುವಾಗ ಬೇವಿನ ಉಡಿ ಸೇವೆಯಲ್ಲಿ ಉಡಿ ಬಿಚ್ಚಿಟ್ಟ ಮಾತಂಗಿ ಚಪ್ಪರಕ್ಕೂ ಬೆಂಕಿ ಹಾಕಲಾಯಿತು. ದೇವಸ್ಥಾನ ದಾಟಿಯೇ ಪೂರ್ವ ಗಡಿಗೆ ದೇವಿಯನ್ನು ಕರೆದೊಯ್ಯಲಾಯಿತು. ಬಿಸಿಲ ಝಳದ ನಡುವೆ ಭಕ್ತರು ದೇವಿಯನ್ನು ಬೀಳ್ಕೊಟ್ಟರು. ಹೆಪ್ಪಿನ ಗದ್ದುಗೆಗೆ ಹೋಗುವಾಗ ಎರಡು ಸಾತ್ವಿಕ ಬಲಿ ಕೂಡ ನಡೆದವು. ಪೂರ್ವ ಗಡಿಯ ಗದ್ದಿಗೆಯಲ್ಲಿ ಮುಕ್ತಾಯದ ವಿಧಿ ವಿಧಾನಗಳು ನಡೆದವು.
ಮಾರಿಕಾಂಬಾ ದೇವಿ ಜಾತ್ರೆಗೆ ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಗೋವಾಗಳಿಂದಲೂ ಅಸಂಖ್ಯ ಭಕ್ತರು ನಡೆದುಕೊಳ್ಳುವ ಮಾರಿಕಾಂಬಾ ದೇವಿ ಯುಗಾದಿಯಂದು ದೇವಸ್ಥಾನದಲ್ಲಿ ಪುನಃ ಪ್ರತಿಷ್ಠೆ ಆಗಲಿದೆ. ಅಲ್ಲಿ ತನಕ ದೇವಿಯ ಚೈತನ್ಯ ರೂಪಿಯಾದ ಮೇಟಿ ದೀಪದ ಸಂರಕ್ಷಣೆ ಕೂಡ ನಡೆಯಲಿದೆ. ಯುಗಾದಿಯಂದು ಬೆಳಿಗ್ಗೆ ೭:೫೧ರಿಂದ ೮:೦೩ರೊಳಗೆ ಪುನಃ ಪ್ರತಿಷ್ಠಾಪನೆ ನಡೆಯಲಿದೆ.
ಇದನ್ನೂ ಓದಿ: World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ