Advertisement

Sirsi ಮಾರಿಕಾಂಬಾ ಜಾತ್ರೆ: ಅಶಕ್ತರಿಗೆ, ಗರ್ಭಿಣಿಯರಿಗೆ, ವಿಕಲಚೇತನರಿಗೆ ಆಟೋ ಸೇವೆ

05:44 PM Mar 23, 2024 | Team Udayavani |

ಶಿರಸಿ: ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ದಿನದಿಂದ ದಿನಕ್ಕೆ ಭಕ್ತರಾಗಮನ ಸಂಖ್ಯೆ ಹೆಚ್ಚಳ ಆಗುತ್ತಿದೆ. ಶುಭ ಶುಕ್ರವಾರ ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದಿದ್ದಾರೆ. ಬಿಡಕಿಬಯಲು ಹಾಗೂ ಅದರ ಸುತ್ತಲಿನ ಎರಡ್ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಲಕ್ಷಾಂತರ ಭಕ್ತರು ಸೇರುವಾಗ ಎರಡು ವರ್ಷಕ್ಕೊಮ್ಮೆ ಗದ್ದುಗೆ ಏರುವ ದೇವಿ ದರ್ಶನ ಪಡೆಯುವದು ಹೇಗೆ ಎಂಬುದು ಅಶಕ್ತರ ಪ್ರಶ್ನೆ.

Advertisement

ದಕ್ಷಿಣ ಭಾರತದ ಅತ್ಯಂತ ದೊಡ್ಡ ಜಾತ್ರೆಯಾದ ಮಾರಿಕಾಂಬಾ ದೇವಿ ಜಾತ್ರೆಗೆ ಬಂದ ಅಶಕ್ತರಿಗೆ, ವೃದ್ಧರಿಗೆ, ಗರ್ಭಿಣಿಯರಿಗೆ, ವಿಕಲಚೇತನರಿಗೆ ದೇವಿ ದರ್ಶನ ಹೇಗೆ ಎಂಬ ತಲೆಬಿಸಿ ಇಲ್ಲ. ಏಕೆಂದರೆ ಇಲ್ಲಿನ ಪ್ರದೀಪ ಸರಾಫ್ ಭಜಾರ್ ನೇತೃತ್ವದಲ್ಲಿ ಆಟೋ ಸೇವೆ ಇರಿಸಲಾಗಿದೆ. ಐದು ರಸ್ತೆಯಿಂದ ಬಿಡಕಿಬಯಲಿಗೆ ವಾಹನ ಸಂಚಾರ ನಿರ್ಬಂಧ ಇದೆ. ಐದು ಕತ್ರಿಯ ತನಕ ವೃದ್ಧರು, ಗರ್ಭಿಣಿ ಸ್ತ್ರೀಯರು ತೆರಳಿದರೆ ಅಲ್ಲಿಂದ ನೇರ ಗದ್ದುಗೆ ತನಕ ಉಚಿತವಾಗಿ ಅಟೋದಲ್ಲಿ ಕರೆದುಕೊಂಡು ಹೋಗಲಾಗುತ್ತದೆ. ಅಟೋ ಇಳಿಯುತ್ತಿದ್ದಂತೆ ಗ್ರೀನ್ ಕೇರ್ ಸಂಸ್ಥೆ ವೀಲ್ ಚೇರನ್ನೂ ನೀಡಿದೆ. ಆರೆಂಟು ಸ್ವಯಂ ಸೇವಕರು ದೇವಿ ದರ್ಶನಕ್ಕೆ ಅಟೋದಲ್ಲಿ ಬಂದ ಭಕ್ತರನ್ನು ಕರೆದುಕೊಂಡು ಹೋಗಿ ವಾಪಸ್ ಕರೆದುಕೊಂಡು ಬಂದು ಬಿಡುತ್ತಾರೆ.

ಇಲ್ಲಿನ ಬಂಗಾರದ ವರ್ತಕ ಪ್ರದೀಪ ಎಲ್ಲನಕರ್ ಅವರು ಐದು ಜಾತ್ರೆಗಳ ಹಿಂದೆ ದೇವಿ ದರ್ಶನ ಮಾಡಲು ಅಶಕ್ತರಾದವರಿಗೆ ನೆರವಾಗಲು ಆಟೋ ಸೇವೆ ಆರಂಭಿಸಿದರು. ಅಂದಿನಿಂದ ಇದು ಆರನೇ ಜಾತ್ರೆ. ಇಷ್ಟೂ ವರ್ಷಗಳ ಕಾಲ ಉಚಿತ ಆಟೋ ಸೇವೆ ಒದಗಿಸುತ್ತಿದ್ದಾರೆ. ಆಟೋದಲ್ಲಿ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಿದ್ದಾರೆ.

ನಾಲ್ಕು ಆಟೋ ಐದು ರಸ್ತೆಯಿಂದ ಗದ್ದುಗೆ ತನಕ ನಿರಂತರ ಒಯ್ದು ಪೂಜೆ ಮಾಡಿಸಿ ವಾಪಸ್ ಕರೆತಂದು ಬಿಡುತ್ತದೆ. ಬೆಳಗಿನ 5 ರಿಂದ ರಾತ್ರಿ 10 ರ ತನಕ ನಿರಂತರ ಸೇವೆ ನೀಡುವ ಆಟೋ ಚಾಲಕರಾದ ರಾಜೀವ ನಾಯ್ಕ, ಗಣಪತಿ ಗಂಗೊಳ್ಳೀ, ಹನುಮಂತ ಮೊಗೇರ, ಸೋಮಶೇಖರ ಕುರುಬರ 21 ರಿಂದ 26 ರ ತನಕ ಈ ಆಟೋ ಸೇವೆಯನ್ನು ಪ್ರದೀಪ ಎಲ್ಲನಕರ ಅವರ ಮಾರ್ಗದರ್ಶನದಲ್ಲಿ ನೀಡುತ್ತಿದ್ದಾರೆ. ಅಮಿತ್ ಪ್ರಭು, ಘನಶ್ಯಾಮ ಪ್ರಭು, ಸತೀಶ ನಾಯ್ಕ, ಚಿತೇಂದ್ರ ತೋನ್ಸೆ, ಸಂತೋಷ ನಾಯ್ಕ, ಗಜಾನನ ಸಾಲೆಹಿತ್ಲು ಇತರರು ಗದ್ದುಗೆಯ ತನಕ ಕರೆದುಕೊಂಡು ಹೋಗಿ ವಾಪಸ್ ಆಟೋ ತನಕ ಬಿಡುತ್ತಿದ್ದಾರೆ.

ಪೂನಾ, ಬೈಂದೂರು, ಮಂಗಳೂರು, ಗೋವಾ, ಬೆಂಗಳೂರು ಸೇರಿದಂತೆ ಹಲವಡೆಯ ಅಶಕ್ತ ಭಕ್ತರು ಈ ಅಟೋ ಸೇವೆ ಪಡೆದಿದ್ದಾರೆ. ಇದೊಂದು ಅಪರೂಪದ ಸೇವೆಯಾಗಿದೆ. ಕೇವಲ ಅರ್ಧ ಗಂಟೆಯಲ್ಲಿ ದೇವರ ದರ್ಶನ ಆಗಿದೆ ಎಂದು ಅನೇಕರು ಸಂತಸದ ಪ್ರತಿಕ್ರಿಯೆ ನೀಡಿದ್ದಾರೆ.

Advertisement

-ಹೀಗೂ ತಾಯಿ ದರ್ಶನ ಮಾಡಿಸಲು ಸಿಕ್ಕ ಅವಕಾಶ ದೊಡ್ಡದು. ನಮಗೆ ಸಿಗುವ ಪುಣ್ಯದ ಕಾರ್ಯ ಎಂದೇ ಭಾವಿಸಿದ್ದೇವೆ. ನಿತ್ಯ 100 ರಿಂದ 150 ಜನರು ಒಂದೊಂದು ಅಟೋದಲ್ಲಿ ದೇವಿ ದರ್ಶನ ಪಡೆದು ಬರಲಿದ್ದಾರೆ.
ರಾಜೀವ ನಾಯ್ಕ, ಉರಗ ತಜ್ಞ, ಆಟೋ ಚಾಲಕ

-ಕಳೆದ ಜಾತ್ರೆಯಲ್ಲಿ9600 ಕ್ಕೂ ಅಧಿಕ ಭಕ್ತರು ಈ ಸೇವೆ ಪಡೆದಿದ್ದರು. ಕಳೆದ ಮೂರು ದಿನಗಳಿಂದ ನಿತ್ಯ 400ರಿಂದ 500 ಜನರು ನಮ್ಮ ಸೇವೆ ಸ್ವೀಕರಿಸಿ ದೇವಿ ದರ್ಶನ ಮಾಡಿದ್ದಾರೆ. ನಮಗೂ ಭಕ್ತರಿಗೆ ನೆರವಾದ ಸಂತಸವಿದೆ.
– ಪ್ರದೀಪ ಎಲ್ಲನಕರ್, ಸರಾಫ್ ಭಜಾರ್ ಶಿರಸಿ

Report: ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next