Advertisement

ಇಂದಿನಿಂದ ಶಿರಸಿ ಮಾರಿಕಾಂಬಾ ಜಾತ್ರೆ

11:27 PM Mar 02, 2020 | Lakshmi GovindaRaj |

ಶಿರಸಿ: ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆಗಳಲ್ಲಿ ಒಂದಾದ ಶಿರಸಿ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಮಾ.3ರಿಂದ 11ರ ತನಕ ನಡೆಯಲಿದ್ದು, ಜಾತ್ರೆಗೆ ಸಕಲ ಸಿದ್ಧತೆಗಳೂ ಪೂರ್ಣಗೊಂಡಿದೆ. ಕರ್ನಾಟಕದ ಶಕ್ತಿಪೀಠಗಳಲ್ಲಿ ಒಂದಾದ ಮಾರಿಕಾಂಬಾ ದೇವಿ ದ್ವೈವಾರ್ಷಿಕ ಜಾತ್ರೆ ವಿಧಿ ವಿಧಾನಗಳು ಜ.22ರಿಂದಲೇ ಪ್ರಾರಂಭವಾಗಿದ್ದರೂ, ಮಂಗಳವಾರ ರಥಕ್ಕೆ ಕಲಶ ಪೂಜೆ, ರಾತ್ರಿ ಕಲ್ಯಾಣ ಪ್ರತಿಷ್ಠೆ, ಬುಧವಾರ ಶೋಭಾಯಾತ್ರೆ ನಡೆಯಲಿದೆ.

Advertisement

ಶ್ರೀದೇವಿಯ ರಥದ ಕಳಸ ಪ್ರತಿಷ್ಠೆ ಮಾ.3ರ ಮಧ್ಯಾಹ್ನ 12:43ಕ್ಕೆ ನಡೆಯಲಿದೆ. ಕಲ್ಯಾಣ ಮಹೋತ್ಸವ ರಾತ್ರಿ 11:11ರಿಂದ 11:18ರೊಳಗೆ ನಡೆಯಲಿದೆ. ನಾಡಿಗ ಮನೆತನದವರು ದೇವಿ ತವರು ಮನೆಯವರು ಎಂಬ ಭಾವನೆ ಇದ್ದು, ಅವರೇ ಸರ್ವಾಲಂಕಾರ ಭೂಷಿತ ನವ ವಧು ದೇವಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ. ದೇವಿಯ ರಥಾರೋಹಣ ಬುಧವಾರ ಬೆಳಗ್ಗೆ 7:05ರಿಂದ 7:26ರೊಳಗೆ ಆಗಲಿದೆ. ಶೋಭಾಯಾತ್ರೆ ಬೆಳಗ್ಗೆ 8:49ರಿಂದ ನಡೆಯಲಿದೆ. ನಾಡಿನ ವಿವಿಧೆಡೆಯಿಂದ ಆಗಮಿಸುವ ಲಕ್ಷಾಂತರ ಭಕ್ತರು ರಥಾರೂಢ ದೇವಿಗೆ ಹರಕೆ ಅರ್ಪಿಸಲಿದ್ದಾರೆ.

ಮಧ್ಯಾಹ್ನ 12:43ರೊಳಗೆ ಒಂದು ಕಿಮೀ ದೂರದ ಜಾತ್ರಾ ಚಪ್ಪರ ಬಿಡಕಿಬಯಲಿನಲ್ಲಿ ದೇವಿ ವಿರಾಜಮಾನಳಾಗಲಿದ್ದಾಳೆ. ಮಾ.5ರಂದು ಬೆಳಗ್ಗೆ 5ರಿಂದ ಹರಕೆ, ಪೂಜೆ, ಸೇವೆಗಳು ಆರಂಭವಾಗಲಿದೆ. ಮಾ.11ರಂದು ಜಾತ್ರೆ ಮುಕ್ತಾಯ ಆಗಲಿದ್ದು, ಅಂದು ಬೆಳಗ್ಗೆ 10:30ರ ತನಕ ಸೇವೆಗಳ ಸ್ವೀಕಾರ ನಡೆಯಲಿದೆ. ಬಳಿಕ ವಿಸರ್ಜನಾ ವಿಧಾನಗಳು ಜರುಗಲಿವೆ. ಮಾ.25ರಂದು ಯುಗಾದಿಯಂದು ಸಿರಿದೇವಿ ಬೆಳಗ್ಗೆ 9:18ಕ್ಕೆ ಪುನಃ ಪ್ರತಿಷ್ಠೆ ಆಗಲಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next