Advertisement

Sirsi; ಕ್ಷೇತ್ರೀಯ ವೇದ‌ ಸಮ್ಮೇಳನ: ಭವ್ಯ ಶೋಭಾಯಾತ್ರೆ

06:25 PM Jan 13, 2024 | Team Udayavani |

ಶಿರಸಿ: ದಕ್ಷಿಣ ಭಾರತ ಮಟ್ಟದ‌ ಮೂರು ದಿನಗಳ ಕ್ಷೇತ್ರೀಯ ವೇದ‌ ಸಮ್ಮೇಳನದ ಹಿನ್ನಲೆಯಲ್ಲಿ ಶನಿವಾರ ಉತ್ತರ ಕನ್ನಡದ ಶಿರಸಿ ನಗರದಲ್ಲಿ ನಡೆದ ವೇದ ಶೋಭಾ ಯಾತ್ರೆ ಐದು ಸಾವಿರಕ್ಕೂ ಅಧಿಕ ಭಕ್ತ ಶಿಷ್ಯರ ನಡುವೆ ನಡೆಯಿತು.

Advertisement

ಸ್ವರ್ಣವಲ್ಲೀ ರಾಜರಾಜೇಶ್ವರಿ ವಿದ್ಯಾ ಸಂಸ್ಥೆ ಹಾಗೂ ಉಜ್ಜಯನೀ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ‌ ಪ್ರತಿಷ್ಠಾನ ಆಶ್ರಯದಲ್ಲಿ ತಾಲೂಕಿನ ಸ್ವರ್ಣವಲ್ಲೀಯಲ್ಲಿ ನಡೆಯುತ್ತಿರುವ ಸಮ್ಮೇಳನದ ಹಿನ್ನಲೆಯಲ್ಲಿ ನಗರದ ಮಾರಿಕಾಂಬಾ‌ ದೇವಸ್ಥಾನದಿಂದ ಯೋಗ ಮಂದಿರದ ತನಕ ವೇದ ಪಠಿಸುತ್ತ, ಹರ ಹರ ಶಂಕರ, ಜಯ ಜಯ ಶಂಕರ, ಶ್ರೀರಾಮ ಜಯ ಜಯ ರಾಮ ಎಂದು ಭಜನೆ ಮಾಡುತ್ತ, ಭಗವಾಧ್ವಜ ಹಿಡಿದು ವೇದ ಶೋಭಾ ಯಾತ್ರೆಯಲ್ಲಿ ಪಾದಯಾತ್ರೆ ಮಾಡಿದರು.

ಮಹಿಳೆಯರು, ಮಕ್ಕಳು, ವೈದಿಕರು, ಗ್ರಹಸ್ಥರು, ವೇದ ವಿದ್ಯಾರ್ಥಿಗಳು ಸೇರಿದಂತೆ ಸರ್ವರನ್ನೂ ಒಳಗೊಂಡ ವೇದ ಶೋಭಾ ಯಾತ್ರೆಗೆ ನಗರದ ಮಾರ್ಗದಲ್ಲಿ ತಳಿರು ತೋರಣ, ರಂಗೋಲಿ‌ ಮೂಲಕ ಸ್ವಾಗತಿಸಿದರು. ಸುನೀಲ್ ಭಟ್ಟ ಉಡುಪಿ ಚಂಡೆ ಬಳಗದಿಂದ ಚಂಡೆ ವಾದನ ಮೆರವಣಿಗೆಯಲ್ಲಿ ಗಮನ‌ ಸೆಳೆಯಿತು.

ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು, ಕೂಡಲಿ ಮಠದ ಶ್ರೀಅಭಿನಯ ಶಂಕರ ಭಾರತೀ‌ ಮಹಾಸ್ವಾಮಿಗಳು, ನೆಲಮಾವು ಮಠದ ಶ್ರೀಮಾಧವಾನಂದ ಭಾರತೀ ಶ್ರೀಗಳು ಪಾದಯಾತ್ರೆಯಲ್ಲಿ ಸಾನ್ನಿಧ್ಯ ನೀಡಿದರು. ಬೆಳಗೂರಿನ‌ ಅಂಜನೇಯ ಅವಧೂತರು, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ, ಅನಂತ ಅಶೀಸರ, ಪ್ರತಿಷ್ಠಾನದ ಉಪಾಧ್ಯಕ್ಷ ಪ್ರಫುಲಕುಮಾರ‌ ಮಿಶ್ರಾ, ಕರ್ನಾಟಕ ಸಂಸ್ಕೃತ ವಿವಿಯ ವಿಶ್ರಾಂತ‌ ಕುಲಪತಿ ಕಾ.ಈ.ದೇವನಾಥನ್, ಪ್ರತಿಷ್ಠಾನ ಕಾರ್ಯದರ್ಶಿ ವಿರೂಪಾಕ್ಷ ಜಡ್ಡಿಪಾಲ, ವಿದ್ವಾಂಸರಾದ ಬೆಂಗಳೂರಿನ ವೇ.ಬ್ರ. ಕೆ.ಎಸ್.ಗಣೇಶ, ವಿಜಯವಾಡದ ವೇ.ಬ್ರ. ಸುಂದರರಾಮ್ ಶ್ರೌತಿ ಇತರರು ಇದ್ದರು.

Advertisement

ದಿವ್ಯ ವೇದ
ಯೋಗ ಮಂದಿರದಲ್ಲಿ‌ ಸಮಾರೋಪಗೊಂಡ ವೇದ ಶೋಭಾದ ಸಭೆಯಲ್ಲಿ ಆಶೀರ್ವಚನ ನುಡಿದ ಸ್ವರ್ಣವಲ್ಲೀ ಶ್ರೀಗಳು, ವೇದ ಪುರಾತನವಾದದ್ದು. ವೇದ ದಿವ್ಯವಾದದ್ದು. ಎಲ್ಲ ರೀತಿಯ ವಿಷಯವನ್ನೂ ಒಳಗೊಂಡ‌ ಸಾಹಿತ್ಯ ವೇದ ಸಾಹಿತ್ಯ. ವೇದ ಹಿಂದೆ‌ ಬಿಡದೇ ಮುಂದೆ ಬರಬೇಕು. ವಿಶ್ವಕ್ಕೆ ಕಲ್ಯಾಣ ಆಗಲಿದೆ. ವೇದದ ಸಂದೇಶ ವಿಶ್ವಕ್ಕೆ ಸಿಕ್ಕರೆ ವಿಶ್ವಗುರು ಆಗಲಿದೆ ಎಂದರು.

ಕೂಡಲಿ ಶ್ರೀಗಳು, ಪಂಚ‌ಮಹಾ ಯಜ್ಞಗಳು‌ ಮುನ್ನಲೆಗೆ ಬರಬೇಕು. ಪಂಚ‌ ಮಹಾ ಯಜ್ಞ ಅನುಷ್ಠಾನ ಮಾಡಿದರೆ ವೇದ ಅನುಷ್ಠಾನ ಮಾಡಿದಂತೆ ಆಗಲಿದೆ ಎಂದರು‌.

ನೆಲಮಾವ‌ಮಠದ ಶ್ರೀಗಳು ಆಶೀರ್ವಚನ ನುಡಿದು, ವೇದ ತಿಳಿದರೆ ವಿಜ್ಞಾನ ಹೊಸದಲ್ಲ. ಆದರೆ, ನಾವು ವಿದೇಶಿ ಸಂಸ್ಕೃತಿಗೆ ಒಳಗಾಗುತ್ತಿದ್ದೇವೆ. ವೇದದ ಒಂದು‌ ಕಾಂಡ ಪಾರಾಯಣವನ್ನಾದರೂ ಮನೆಯಲ್ಲಿ ವರ್ಷಕ್ಕೊಮ್ಮೆ ಆದರೂ ಮಾಡಿಸಬೇಕು. ಇದರಿಂದ ಅನೇಕ ಪಾಪಗಳ ಪರಿಹಾರ ಆಗುತ್ತದೆ. ಮಕ್ಕಳಿಗೂ ವೇದ ಪುರಾಯಣ ತಿಳಿಸಬೇಕು ಎಂದರು.ಬೆಳಗೂರು ಅವಧೂತರು‌ ಮಾತನಾಡಿ, ಪರಮಾತ್ಮನ ಉಸಿರೇ ವೇದ. ವೇದ ಉಳಿಸಿ ಬೆಳೆಸಬೇಕು ಎಂದರು.

ಶನಿವಾರ ಬೆಳಿಗ್ಗೆ ಸ್ವರ್ಣವಲ್ಲೀಯಲ್ಲಿ ಮೂರು ದಿನಗಳ ದಕ್ಷಿಣ ಕ್ಷೇತ್ರೀಯ ವೇದ ಸಮ್ಮೇಳನಕ್ಕೆ ಚಾಲನೆ‌ ನೀಡಲಾಯಿತು. ಮೂರು ದಿನಗಳ ಕಾಲ ಸ್ವರ್ಣವಲ್ಲೀಯಲ್ಲಿ ನಿತ್ಯ ವೇದ ಪಾರಾಯಣ, ದೇಶದ ವಿವಿಧ ತಜ್ಞರ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಮ್ಮಾನಗಳು ನಡೆಯಲಿದೆ. ಸಮ್ಮೇಳನವು ಜ.೧೫ರ ಮಧ್ಯಾಹ್ನ 3:30ಕ್ಕೆ ಸಮಾರೋಪ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next