ಶಿರಸಿ: ಕಳೆದ 44 ದಿನಗಳಿಂದ ಸಖತ್ ಬ್ಯುಸಿಯಾಗಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಏನು ಮಾಡುತ್ತಿದ್ದಾರೆ? ಚುನಾವಣೆಯ ಪ್ರಮುಖ ಹಂತ ಮತದಾನ ಮುಗಿದ ಮರುದಿನ ರಿಲಾಕ್ಸ್ ಮೂಡ್ ಗೆ ಜಾರಿದ್ದಾರೆ! ಹಾಗಂತ ಇವರು ಸುಮ್ಮನೆ ಕೂತಿಲ್ಲ, ಬದಲಿಗೆ ಕೆಲಸದ ವಿಧಾನ ಬದಲಿಸಿಕೊಂಡಿದ್ದಾರೆ!.
ಬಿಡುವೇ ಇರಲಿಲ್ಲ!
ಕಳೆದ ಮಾರ್ಚ25 ರ ರಾತ್ರಿ ಲೋಕಸಭಾ ಟಿಕೆಟ್ ಘೊಷಣೆಯಾದ ಬಳಿಕದಿಂದ ಇಡೀ ಕ್ಷೇತ್ರವನ್ನು ಮೂರು ಬಾರಿ ಸುತ್ತಾಟ ಮಾಡಿದ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಅವರು ಬಿಜೆಪಿ ಪರ ಮತಯಾಚನೆ ಮಾಡಿದ್ದರು.
ತಾರಾ ಪ್ರಚಾರಕರ ಜೋಡಣೆ, ಕಾರ್ಯಕರ್ತರ, ಪಕ್ಷದ ಪ್ರಮುಖರ, ಮತದಾರರ ನಡುವೆ ಸಂವಾದ, ಭಾಷಣ, ಸಭೆ, ಸಮಾವೇಶ, ನಡುವೆ ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ನಡೆದ ಚುನಾವಣಾ ಪ್ರಚಾರದ ಸಮಾವೇಶ, ಮತದಾನ ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಬೆಳಗ್ಗೆ 6 ರಿಂದ ರಾತ್ರಿ 10, ಕೆಲವೊಮ್ಮೆ ಪ್ರಯಾಣದ ಕಾರಣದಿಂದ ತಡ ರಾತ್ರಿ ತನಕ ವಿಶ್ರಾಂತಿ ಇರುತಿರಲಿಲ್ಲ. ಮುಖ್ಯವಾಗಿ ಕಿತ್ತೂರು ಖಾನಾಪುರ ಒಳಗೊಂಡ ಅತಿದೊಡ್ಡ ಹಾಗೂ ಕರಾವಳಿ, ಮಲೆನಾಡು, ಬಯಲುಸೀಮೆ ಒಳಗೊಂಡ ದೇಶದ ವಿಶಿಷ್ಟ ಲೋಕ ಸಭಾ ಕ್ಷೇತ್ರಗಳ್ಳಿ ಇದೂ ಒಂದು ಹೌದು.
ಮೇ 8 ಕರ್ನಾಟಕದ ಎರಡನೇ ಹಂತದ ಚುನಾವಣೆ ಬಳಿಕ ರಿಲಾಕ್ಸ ಮೂಡ್ ಗೆ ಬಂದ ಕಾಗೇರಿ ಮಂಗಳವಾರ ರಾತ್ರಿ ತನಕ ಮತದಾನದ ಮಾಹಿತಿ ಪಡೆದರು. ಸಂಘಟನೆಯಲ್ಲಿ ತೊಡಗಿಕೊಂಡ ಅನೇಕರ ಜತೆ ಮಾತುಕತೆ ನಡೆಸಿದರು. ಎಷ್ಟೇ ಒತ್ತಡದ ಇದ್ದರೂ ರಾತ್ರಿ ಸ್ವಗ್ರಾಮ ಕಾಗೇರಿಗೇ ಬರುವದು ಇವರ ವಿಶೇಷವಾಗಿತ್ತು.
ಗಿಳಿಗೆ ಆಹಾರ ಕೊಟ್ಟು, ಅಡಿಕೆ ತೋಟ ಸುತ್ತಾಟ
ಬುಧವಾರ ಬೆಳಗ್ಗೆ ಎದ್ದು ಅಪ್ಪಟ ಕೃಷಿಕರಂತೆ ಅಡಿಕೆ ತೋಟ ಸುತ್ತಾಟ ಮಾಡಿದರು. ತೋಟದಲ್ಲಿ ಬಿಸಿಲಿನ ಝಳಕ್ಕೆ ಅಡಿಕೆ ಮುಗುಡು ಉದರಿದ್ದನ್ನೂ ಗಮನಿಸಿದರು. ಮನೆಗೆ ಬಂದವರು ಸಾಕಿದ ಗಿಳಿಗಳಿಗೆ ಆಹಾರ ನೀಡಿ ಮಾತನಾಡಿಸಿದರು. ಕೊಟ್ಟಿಗೆಗೆ ಹೋಗಿ ಜಾನುವಾರುಗಳ ಮೈ ದಡವಿದರು. ಅಂಗಳದ ಹೂವಿನ ಗಿಡಗಳಿಗೂ ನೀರುಣಿಸಿದರು. ಬೆಳಗಿನ ತಿಂಡಿ ರೊಟ್ಟಿ ಸವಿದರು.
ಮಧ್ಯಾಹ್ನ ಹಾಗೂ ಸಂಜೆ ಶಿರಸಿಯ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ಮಾಡಲಿದ್ದಾರೆ ಎಂದು ಉದಯವಾಣಿಗೆ ಅವರ ಸಹೋದರನ ಪುತ್ರ ಸುದರ್ಶನ ಹೆಗಡೆ ತಿಳಿಸಿದ್ದಾರೆ.
ರಾಘವೇಂದ್ರ ಬೆಟ್ಟಕೊಪ್ಪ