ಶಿರಸಿ: ಅಂಗನವಾಡಿ ಮಕ್ಕಳಿಗಾಗಿ ಏಕಾಂಗಿಯಾಗಿ ಬಾವಿ ತೋಡುವ ಮೂಲಕ ರಾಜ್ಯದ ಗಮನ ಸೆಳೆದು, ಜಿಲ್ಲಾಡಳಿತದ ತಡೆ, ಚರ್ಚೆಗೂ ಗ್ರಾಸವಾಗಿದ್ದ ನಗರದ ಗಣೇಶ ನಗರದ ಸಾಹಸಿ ಮಹಿಳೆ ಗೌರಿ ನಾಯ್ಕ ಕಾರ್ಯ ಕೊನೆಗೂ ಯಶಸ್ವಿಯಾಗಿದೆ. ಬಾವಿಯಲ್ಲಿ ಸವಿ ಜಲ ಬುಧವಾರ ಕಂಡುಬಂತು.
ಜ.30ರಿಂದ ಬಾವಿ ತೋಡುತ್ತಿದ್ದ ಗೌರಿ ನಾಯ್ಕ ಅವರು 45 ಅಡಿ ಆಳ ತೆಗೆದಿದ್ದಾರೆ. ಇನ್ನೂ ಐದು ಅಡಿ ಆಳ ತೋಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಗಣೇಶ ನಗರದ ಅಂಗನವಾಡಿ ಮಕ್ಕಳಿಗೆ ನೀರಿನ ಕೊರತೆ ಆಗಬಾರದು ಎಂದು ಬಾವಿ ತೋಡುತ್ತಿದ್ದು, ಈಗ ನೆಮ್ಮದಿಯಾಗಿದೆ ಎಂದಿದ್ದಾರೆ.
ಆದರೆ ಸರಕಾರಿ ಜಾಗದಲ್ಲಿ ಕೆಲಸ ಮುಂದುವರಿಸದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗೌರಿ ನಾಯ್ಕರಿಗೆ ನೋಟಿಸ್ ನೀಡಿತ್ತು. ಜಿಲ್ಲಾಡಳಿತದ ಸೂಚನೆಯಂತೆ ಬಾವಿಯನ್ನು ಹಲಗೆಯಿಂದ ಮುಚ್ಚಿತ್ತು. ಜಿಲ್ಲಾ ಸಚಿವ ಮಂಕಾಳು ವೈದ್ಯ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು. ಸಂಸದ ಅನಂತಕುಮಾರ್ ಹೆಗಡೆ ಕೂಡ ಸ್ಥಳಕ್ಕೆ ಭೇಟಿ ನೀಡಿ ಗೌರಿ ಕೆಲಸಕ್ಕೆ ತೊಂದರೆ ಕೊಡದಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.
ಆರಂಭದಲ್ಲಿ ಏಕಾಂಗಿಯಾಗಿ ಬಾವಿ ತೋಡುತ್ತಿದ್ದ ಗೌರಿ ಅವರು ಕೊನೆಯ 10-12 ಅಡಿ ಇದ್ದಾಗ ಅನಿವಾರ್ಯವಾಗಿ ಇಬ್ಬರ ನೆರವು ಪಡೆದುಕೊಂಡಿದ್ದರು. ಜಲ ಕಂಡಿದ್ದು ಸ್ಥಳೀಯರ ಮುಖದಲ್ಲೂ ನಗು ಕಾಣಿಸಿದೆ.