ಶಿರಸಿ: ಕುಮಟಾಕ್ಕೆ ಹೋಗುವ ದಾರಿ ಕೇಳಿ ಮಹಿಳೆಯೋರ್ವರ ಬಂಗಾರದ ಸರ ಅಪಹರಿಸಿದ್ದ ಇಬ್ಬರು ಆರೋಪಿತರಿಗೆ ಶಿರಸಿ ಪೊಲೀಸರು ಜೈಲಿನ ದಾರಿ ತೋರಿದ್ದಾರೆ. ಘಟನೆ ನಡೆದ 24 ಗಂಟೆಯೊಳಗೆ ಆರೋಪಿತರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಕ್ಕೆ ಸಾರ್ವಜನಿಕ ಶ್ಲಾಘನೆ ವ್ಯಕ್ತವಾಗಿದೆ.
ನಗರದ ಭತ್ತದ ಓಣಿಯಲ್ಲಿ ಮಹಿಳೆ ನಡೆದು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಅಪರಿಚಿತರು ದಾರಿ ಕೇಳುವ ನೆಪದಲ್ಲಿ ಮಹಿಳೆ ಕುತ್ತಿಗೆಯಲ್ಲಿದ್ದ 25 ಗ್ರಾಮ ತೂಕದ 1.10 ಲ.ರೂ ಮೌಲ್ಯದ ಬಂಗಾರದ ಸರ ಅಪಹರಿಸಿದ್ದರು. ಈ ಕುರಿತು ನೊಂದ ಉಷಾ ಪೈ ನಗರ ಠಾಣೆಗೆ ದೂರು ದಾಖಲಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಹುಬ್ಬಳ್ಳಿ ಹಾಗೂ ಹಾವೇರಿ ಮೂಲದ ಇಬ್ಬರನ್ನು ಪತ್ತೆ ಹಚ್ಚಿ ಕಳುವಾದ ವಸ್ತುಗಳನ್ನೂ 24 ತಾಸಿನೊಳಗೆ ವಶಪಡಿಸಿಕೊಂಡಿದ್ದಾರೆ. ಇವರು ಅಂತರ್ ಜಿಲ್ಲಾ ಚೋರರಾಗಿದ್ದು, ಬಂಧಿತರನ್ನು ಹುಬ್ಬಳ್ಳಿಯ ಮೃತ್ಯುಂಜಯ (28), ಹಾವೇರಿಯ ರಾಘವೇಂದ್ರ (36) ಎಂದು ಗುರುತಿಸಲಾಗಿದೆ.
ಇದೇ ಆರೋಪಿತರು ಕಳೆದ ವಾರವಷ್ಟೇ ಹಳಿಯಾಳ, ಖಾನಾಪುರ, ನವಲಗುಂದ, ಅಣ್ಣಿಗೇರಿಯಲ್ಲೂ ಕಳ್ಳತನ ಮಾಡಿದ್ದರು ಎಂಬುದೂ ಇದೇ ತನಿಖಾ ವೇಳೆ ಗೊತ್ತಾಗಿದೆ.
ಡಿವೈಸ್‌ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ರಾಮಚಂದ್ರ ನಾಯಕ ನೇತೃತ್ವದ ತಂಡ ಈ ಪತ್ತೆ ಕಾರ್ಯ ಮಾಡಿದೆ. ತಂಡದಲ್ಲಿ ನಗರಠಾಣಾ ಪಿಎಸ್‌ಐಗಳಾದ ರಾಜಕುಮಾರ ಉಕ್ಕಲಿ, ಮೋಹಿನಿ ಶೆಟ್ಟಿ ಹಾಗೂ ಸಿಬಂದಿಗಳು ಇದ್ದರು.
ಇದನ್ನೂ ಓದಿ : ಚಾಮರಾಜನಗರ: ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರಿಡುವಂತೆ ಒತ್ತಾಯಿಸಿ ಮೌನ ಪ್ರತಿಭಟನೆ