Advertisement

ಸತತ ಪರಿಶ್ರಮದಿಂದ ಗೆಲುವು ನಿಶ್ಚಿತ: ಸ್ವಾಮೀಜಿ

05:13 PM Aug 03, 2019 | Naveen |

ಸಿರಿಗೆರೆ: ಸತತವಾಗಿ ಕಠಿಣ ಪರಿಶ್ರಮದಿಂದ ಸಾಧಿಸುವ ಎಲ್ಲಾ ಸಾಧನೆಗಳು ಗೆಲುವು ಕಂಡುಕೊಳ್ಳುತ್ತವೆ. ಅಂತಹ ಸಾಧನೆ ಮಾಡಿರುವ ಡಾ. ಶ್ರೀನಿವಾಸ್‌ ಅವರು ಕಿರಿಯ ವಯಸ್ಸಿನಲ್ಲಿ ಭಾರತದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಇದಕ್ಕೆ ಅವರ ಸತತ ಪ್ರಯತ್ನ, ಆತ್ಮಸ್ಥೈರ್ಯ ಮತ್ತು ಅವರಲ್ಲಿನ ಪ್ರತಿಭೆ ಕಾರಣ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ತರಳಬಾಳು ಮಠದ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಗಯಾನ ದೇಶದ ರಾಯಭಾರಿ ಶ್ರೀ ಕೆ.ಜೆ. ಶ್ರೀನಿವಾಸ್‌ ಅವರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಕುಗ್ರಾಮ ಹೊಳಲ್ಕೆರೆ ತಾಲೂಕಿನ ಕೋಟೆಹಾಳ್‌ನಲ್ಲಿ ಹುಟ್ಟಿದ ಪ್ರತಿಭೆ ಈಗ ಜಗದ್ವಿಖ್ಯಾತಿ ಗಳಿಸುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿರುವ ಮಕ್ಕಳಿಗೆ ಶ್ರೀನಿವಾಸ್‌ ಮಾದರಿಯಾಗಿದ್ದಾರೆ ಎಂದರು.

ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವಾಗ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಗಮನಿಸಿ ಭಾರತದಲ್ಲಿಯೇ ಪ್ರಪ್ರಥಮ ಪಾಸ್‌ಪೋರ್ಟ್‌ ಸೇವಾ ಕೇಂದ್ರವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿ ಜನಸ್ನೇಹಿಯಾಗಿಸಿದ ಕೀರ್ತಿ ಇವರದ್ದಾಗಿತ್ತು ಎಂದರು. ಡಾ.ಶ್ರೀನಿವಾಸ್‌ ಮಾತನಾಡಿ, ಗ್ರಂಥಾಲಯ, ಶಾಲೆ ಹಾಗೂ ನನ್ನ ಮನೆ ಮೊದಲ ಪಾಠಶಾಲೆಯಾಗಿತ್ತು. ಬಾಲ್ಯದಿಂದಲೂ ಆಟ-ಪಾಠಗಳಲ್ಲಿ ಸದಾ ಮುಂಚೂಣಿಯಲ್ಲಿದ್ದೆ. ನನಗೆ ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಆಸಕ್ತಿ ಇತ್ತು. ವಿದ್ಯಾರ್ಥಿಗಳಾದ ನೀವೂ ಸಹ ದೃತಿಗೆಡದೆ ಧೈರ್ಯದಿಂದ ಅಭ್ಯಾಸದಲ್ಲಿ ತೊಡಗಿಕೊಂಡು ಮುನ್ನುಗ್ಗಿ ಎಂದರು.

ವೀರಶೈವ ಸಂಘದ ಅಧ್ಯಕ್ಷ ಕೆ.ಆರ್‌.ಜಯದೇವಪ್ಪ ಮಾತನಾಡಿ, ಶ್ರೀನಿವಾಸ್‌ ಅವರು ಬಾಲ್ಯದಿಂದಲೂ ಆಟ-ಪಾಠಗಳಲ್ಲಿ ಸದಾ ಮುಂಚೂಣಿಯಲ್ಲಿದ್ದರು. ಇವರು ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದ್ದುದನ್ನು ಸ್ಮರಿಸಬಹುದು. ಅಪಾರ ದೇಶಭಕ್ತಿ, ಸಾಮಾಜಿಕ ಕಳಕಳಿ, ಸೇವಾ ಮನೋಭಾವ ಹೊಂದಿರುವ ಇವರು ಇಂದಿನ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯವಾಗಿದ್ದಾರೆ ಎಂದರು.

ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ.ಅರುಣ್‌ ಮಾತನಾಡಿ, ಶ್ರೀನಿವಾಸ್‌ ಅವರಲ್ಲಿ ಪಾರದರ್ಶಕತೆ, ಸರಳತೆ, ದಕ್ಷತೆ, ಅವರ ಸೇವಾ ತತ್ಪರತೆ, ಆದರ್ಶ ವ್ಯಕ್ತಿತ್ವವು ಇಂದಿನ ಯುವಜನರಿಗೆ ಮಾದರಿಯಾಗಿದೆ ಎಂದರು. ಕಿರಿಯ ವಯಸ್ಸಿನಲ್ಲಿ ಹಿರಿದಾದ ಸೇವೆ ಗುರುತಿಸಿ ಮತ್ತೆ ಇಂದು ಸಿರಿಗೆರೆಯಲ್ಲಿ ಅಭಿನಂದಿಸಲಾಗುತ್ತಿರುವುದು ಶ್ಲಾಘನೀಯ ಎಂದರು.

Advertisement

ಡಾ.ಶ್ರೀನಿವಾಸ ಅವರ ಪತ್ನಿ ಜಿ.ಎಸ್‌. ಅಶ್ವಿ‌ನಿ, ತಂದೆ ಕೋಟೆಹಾಳ್‌ ಜಯದೇವಪ್ಪ, ತಾಯಿ ಚಂದ್ರಮ್ಮ, ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್‌.ಬಿ. ರಂಗನಾಥ್‌, ವಿಶೇಷಾಧಿಕಾರಿ ಡಾ.ಎಚ್.ವಿ. ವಾಮದೇವಪ್ಪ ಚನ್ನಗಿರಿ ತುಮ್‌ಕೋಸ್‌ನ ಅಧ್ಯಕ್ಷ ಶಿವಕುಮಾರ್‌, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ನೌಕರು ಭಾಗವಹಿಸಿದ್ದರು. ಬಳಿಕ ಸಂವಾಎ ಕಾರ್ಯಕ್ರಮ ನಡೆಯಿತು. ಅಧ್ಯಾಪಕಿ ಎಂ. ಪ್ರಮೀಳಾ ನಿರೂಪಿಸಿದರು. ಕಾಲೇಜು ಪ್ರಾಚಾರ್ಯ ಐ.ಜಿ. ಚಂದ್ರಶೇಖರಯ್ಯ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಎಂ.ಎನ್‌. ಶಾಂತಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next