Advertisement
ತರಳಬಾಳು ಜಗದ್ಗುರು ಮಠದೊಂದಿಗೆ ಪೇಜಾವರ ಶ್ರೀಗಳ ನಿಕಟ ಸಂಪರ್ಕವನ್ನು ಸ್ಮರಿಸಿರುವ ಅವರು, ತರಳಬಾಳು ಹುಣ್ಣಿಮೆಯಲ್ಲಿ ಬಹಳ ಪ್ರೀತಿಯಿಂದ ಭಾಗವಹಿಸುತ್ತಿದ್ದರು. ನಮ್ಮನ್ನು ಉಡುಪಿಯ ಕಾರ್ಯಕ್ರಮಗಳಿಗೆ ಅಭಿಮಾನದಿಂದ ಬರಮಾಡಿಕೊಳ್ಳುತ್ತಿದ್ದರು ಎಂದು ಸ್ಮರಿಸಿಕೊಂಡರು. ಇತ್ತೀಚೆಗೆ ಪೇಜಾವರ ಶ್ರೀಗಳು ಚಿತ್ರದುರ್ಗಕ್ಕೆ ಆಗಮಿಸಿದಾಗ ಸಿರಿಗೆರೆಗೆ ಬರಲು ಬಯಸಿದ್ದರು. ಆ ಸಂದರ್ಭದಲ್ಲಿ ಅವರನ್ನು ಬರಮಾಡಿಕೊಳ್ಳಲು ಆಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಒಂದೆರಡು ಬಾರಿ ದೂರವಾಣಿಯಲ್ಲಿ ಮಾತನಾಡಿದ್ದರೂ ಅವರೊಂದಿಗೆ ಮುಖತಃ ಮಾತನಾಡಬೇಕೆಂಬ ಹಂಬಲ ಬಹಳವಾಗಿತ್ತು ಎಂದರು. ಚಿತ್ರದುರ್ಗದ ಕಾರ್ಯಕ್ರಮಕ್ಕೆ ಪೇಜಾವರ ಶ್ರೀಗಳು ಅನಿವಾರ್ಯ ಕಾರಣಗಳಿಂದ ಬಾರದೇ ಇದ್ದ ಕಾರಣ ನಿರಾಶೆ ಉಂಟಾಗಿತ್ತು. ಮರುದಿನ ಆಗಮಿಸಿದ್ದ ಅವರು ದೂರವಾಣಿಯಲ್ಲಿ ನಮ್ಮನ್ನು ಸಂಪರ್ಕಿಸಿ ಸಿರಿಗೆರೆಗೆ ಬಂದು ನಮ್ಮೊಂದಿಗೆ ಮಾತನಾಡುವ ಅಪೇಕ್ಷೆ ವ್ಯಕ್ತಪಡಿಸಿದ್ದರು. ಆದರೆ ಆ ದಿನ ಬೇರೊಂದು ಕಾರ್ಯಕ್ರಮದ
ನಿಮಿತ್ತ ಸಿರಿಗೆರೆಯಲ್ಲಿ ಇಲ್ಲದ ಕಾರಣ ಅವರನ್ನು ಮಠಕ್ಕೆ ಬರ ಮಾಡಿಕೊಳ್ಳಲು ಆಗಲಿಲ್ಲ. ಸನಿಹದಲ್ಲಿ ಅವರನ್ನು ಕಾಣುವ ಸಲುವಾಗಿಯೇ ಉಡುಪಿಗೆ ಬರುವುದಾಗಿ ಹೇಳಿದ್ದೆವು ಎಂದು ನೆನಪಿಸಿಕೊಂಡರು. ಆದರೆ ತಾನೊಂದು ಬಗೆದರೆ ದೈವವೊಂದು ಬಗೆದಿತ್ತು ಎನ್ನುವಂತೆ ಕಳೆದ ಶುಕ್ರವಾರ ಹಳೇಬೀಡಿಗೆ ಹೋದಾಗ ಪೇಜಾವರ ಶ್ರೀಗಳ ದೇಹಾರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವಿಷಯ ತಿಳಿದು ಘಾಸಿಗೊಂಡೆವು. ಅದೇ ದಿನ ಸಂಜೆ ಸಿರಿಗೆರೆಯಲ್ಲಿ ನಮ್ಮ ಮಠದ ಕಾರ್ಯಕ್ರಮವಿದ್ದರೂ ಲೆಕ್ಕಿಸದೆ ಉಡುಪಿಗೆ ಧಾವಿಸಿದೆವು. ಉಡುಪಿ ತಲುಪಿದಾಗ ರಾತ್ರಿ 8 ಗಂಟೆ. ಸೀದಾ ಆಸ್ಪತ್ರೆಗೆ ಹೋದಾಗ ವೈದ್ಯರು ತೀವ್ರ ನಿಗಾ ಘಟಕಕ್ಕೆ ಕರೆದುಕೊಂಡು ಹೋದರು. “ಶರಣ ನಿದ್ರೆಗೈದರೆ ಜಪ ಕಾಣಿರೋ’
ಎನ್ನುವಂತೆ ಶ್ರೀಗಳು ಸುತ್ತಣ ಪರಿವೆಯಿಲ್ಲದೆ ಸ್ಥಿತಪ್ರಜ್ಞರಂತೆ ಪವಡಿಸಿದ್ದರು.
Related Articles
Advertisement
ಶ್ರೀಗಳು ನಮ್ಮ ಲಿಂಗೈಕ್ಯ ಗುರುವರ್ಯರ ಕಾಲದಿಂದಲೂ ನಮ್ಮಮಠದೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಪಾಣಿನಿಯ ಸೂತ್ರಗಳನ್ನು ಗಣಕಯಂತ್ರಕ್ಕೆ ಅಳವಡಿಸಿ ನಾವು ಸಿದ್ಧಪಡಿಸಿದ “ಗಣಕಾಷ್ಟಾಧ್ಯಾಯೀ’ ಎಂಬ ತಂತ್ರಾಂಶವನ್ನು ಒಮ್ಮೆ ಅವರಿಗೆ ತೋರಿಸಿದಾಗ ಶ್ರೀಕೃಷ್ಣನ ಬಾಯಲ್ಲಿ ವಿಶ್ವರೂಪ ದರ್ಶನ ಮಾಡಿಸಿದಂತಾಯಿತು ಎಂದು ಹೃದಯತುಂಬಿ ಕೊಂಡಾಡಿದ್ದರು ಎಂದು ಹೇಳಿದರು. ಅಂತ್ಯಕ್ರಿಯೆ ಸಂದರ್ಭದಲ್ಲಿ ಅಂತಿಮ ಗೌರವ ಸಲ್ಲಿಸಲು ತರಳಬಾಳು ಜಗದ್ಗುರುಗಳು ಬೆಂಗಳೂರಿಗೆ ತೆರಳಿದರು.