ಸಿರಿಗೆರೆ: ರಾಜ್ಯ ಸಮ್ಮಿಶ್ರ ಸರ್ಕಾರದ ಸಾಲ ಮನ್ನಾ ಯೋಜನೆಯಡಿ ರೈತರೊಬ್ಬರ ಬ್ಯಾಂಕ್ ಖಾತೆಗೆ ಜಮಾ ಆಗಿದ್ದ ಒಂದು ಲಕ್ಷ ರೂ. ಗಳನ್ನು ಚಿತ್ರದುರ್ಗದ ಖಾಸಗಿ ಬ್ಯಾಂಕೊಂದು ಸರ್ಕಾರಕ್ಕೆ ವಾಪಸ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಿರಿಗೆರೆ ಸಮೀಪದ ಚಿಕ್ಕಬೆನ್ನೂರಿನ ರೈತ ಕೆ.ಬಿ. ಮಂಜುನಾಥ್ ಎಂಬುವವರಿಗೆ ಮಂಜೂರಾಗಿದ್ದ ಸಾಲ ಮನ್ನಾ ಹಣ ಈಗ ಸರ್ಕಾರಕ್ಕೆ ವಾಪಸ್ ಹೋಗಿದೆ.
ಮಂಜುನಾಥ್ ಅವರು ಚಿತ್ರದುರ್ಗದ ಖಾಸಗಿ ಬ್ಯಾಂಕ್‌ನಲ್ಲಿ ಕೃಷಿ ಸಾಲ ಖಾತೆ (917030047243550) ಹೊಂದಿದ್ದು, 2017-18ನೇ ಸಾಲಿನಲ್ಲಿ ಬ್ಯಾಂಕ್‌ನಿಂದ ಕೃಷಿ ಸಾಲವಾಗಿ 3,75,000 ರೂ. ಪಡೆದಿದ್ದರು. ಅದಕ್ಕೆ 2018ರ ಏಪ್ರಿಲ್ 30 ರಂದು 37,126 ರೂ. ಹಾಗೂ 2019ರ ಏಪ್ರಿಲ್ 30 ರಂದು 48,000 ರೂ. ಬಡ್ಡಿಯನ್ನೂ ಪಾವತಿಸಿದ್ದರು.
ಈ ಹಿಂದಿನ ಕಾಂಗ್ರೆಸ್ ಸರಕಾರವಿದ್ದಾಗ ಘೋಷಿಸಿದ್ದ ಸಾಲ ಮನ್ನಾದ 50 ಸಾವಿರ ರೂ. ಮಂಜುನಾಥ್‌ಗೆ ಸಿಕ್ಕಿತ್ತು. ಈಗಿನ ಮೈತ್ರಿ ಸರಕಾರ ಘೋಷಿಸಿದ್ದ ರೈತರ 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಯೋಜನೆಯಡಿ ಮಂಜುನಾಥ್ ಅವರ ಬ್ಯಾಂಕ್ ಖಾತೆಗೆ 2019ರ ಏಪ್ರಿಲ್ 14 ರಂದು 50,000 ರೂ. ಹಾಗೂ ಜೂನ್ 20 ರಂದು 49,999 ರೂ. ಜಮಾ ಆಗಿತ್ತು. ಈ ಬಗ್ಗೆ ಮಂಜುನಾಥ್ ಅವರ ಮೊಬೈಲ್ಗೆ ಸಂದೇಶ ಕೂಡ ಬಂದಿತ್ತು. ಆದರೂ ಬ್ಯಾಂಕ್ ಅಧಿಕಾರಿಗಳ ಬಳಿ ಹೋಗಿ ವಿಚಾರಿಸಿ ಸಾಲಮನ್ನಾ ಹಣ ಜಮಾ ಆಗಿರುವುದನ್ನು ಖಾತ್ರಿ ಪಡಿಸಿಕೊಂಡಿದ್ದರು. ಮಂಜುನಾಥ್‌ಗೆ ಇನ್ನೂ ಒಂದು ಲಕ್ಷ ರೂ. ಸಾಲ ಮನ್ನಾ ಹಣ ಬರಬೇಕಿತ್ತು. ಆದರೆ ಈಗಾಗಲೇ ಜಮಾ ಮಾಡಿದ್ದ ಒಂದು ಲಕ್ಷ ರೂ. ಅನ್ನು ಸಾಲದ ಖಾತೆಯಿಂದ ಹಿಂದೆ ಪಡೆದ ಬ್ಯಾಂಕ್, ಸರ್ಕಾರಕ್ಕೆ ವಾಪಸ್ ಕಟ್ಟಿದೆ.
ಇದರಿಂದ ಕಂಗಾಲಾಗಿರುವ ರೈತ ಮಂಜುನಾಥ್, ತಮ್ಮ ಅನುಮತಿ ಇಲ್ಲದೆ ಖಾತೆಯಿಂದ ಬ್ಯಾಂಕ್ ಅಧಿಕಾರಿಗಳು ಅನಧಿಕೃತವಾಗಿ ವ್ಯವಹರಿಸಿದ್ದಾರೆ. ಸರ್ಕಾರದಿಂದ ನನಗೆ ಸಾಲ ಮನ್ನಾ ರೂಪದಲ್ಲಿ ಎರಡು ಲಕ್ಷ ರೂ. ಬರಬೇಕಿತ್ತು. ಆದರೆ ಜಮಾ ಆಗಿದ್ದ ಒಂದು ಲಕ್ಷ ರೂ. ಅನ್ನು ಬ್ಯಾಂಕ್‌ನವರು ಈಗ ಹಿಂದಕ್ಕೆ ಪಡೆದಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಕಿಸಾನ್ ಸಂಘದ ಮೂಲಕ ಡಿಸಿಗೆ ಮನವಿ ಸಲ್ಲಿಸಿದ್ದಾರೆ.