Advertisement

ಏತ ನೀರಾವರಿ ಯೋಜನೆ ಯಶಸ್ಸಿಗೆ ಸಹಕಾರ ಕೊಡಿ

01:39 PM Feb 16, 2020 | Naveen |

ಸಿರಿಗೆರೆ: ಭರಮಸಾಗರ ಭಾಗದ ಕೆರೆಗಳನ್ನು ತುಂಬಿಸುವ ರಾಜನಹಳ್ಳಿ ಏತ ನೀರಾವರಿ ಕಾಮಗಾರಿ ಭರದಿಂದ ಸಾಗುತ್ತಿದೆ. ಆಗಸ್ಟ್‌ 15ರ ಒಳಗಾಗಿ ಭರಮಸಾಗರ ಕೆರೆಗೆ ನೀರು ಹರಿಯುವುದು ಬಹುತೇಕ ನಿಶ್ಚಿತ ಎಂದು ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಇಲ್ಲಿನ ಗ್ರಾಮ ಪಂಚಾಯತ್‌ ನೂತನ ಕಟ್ಟಡ ಗ್ರಾಮಸೌಧವನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು. ಈ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಳ್ಳಲು ರೈತರ ಸಹಕಾರ ಮುಖ್ಯ. ಹಾಗಾಗಿ ಪೈಪ್‌ಗ್ಳನ್ನು ಅಳವಡಿಸುವ ಕೆಲಸಕ್ಕೆ ಅಡ್ಡಿಪಡಿಸಬಾರದು ಎಂದರು.

ಭರಮಸಾಗರ ಕೆರೆಯಿಂದ ಇನ್ನಿತರ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಸಲುವಾಗಿ ಕೊಳವೆಗಳನ್ನು ಅಳವಡಿಸಬೇಕಾಗಿದ್ದು, ಆ ಕೆಲಸ ಸ್ವಲ್ಪ ತಡವಾಗುತ್ತದೆ. ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಎರಡು ವರ್ಷಗಳ ಅವಧಿಯನ್ನು ನಿಗದಿಪಡಿಸಲಾಗಿದೆ. ಆ ಅವ ಧಿಯೊಳಗೆ ಭರಮಸಾಗರ ಮತ್ತು ಸಿರಿಗೆರೆ ಭಾಗದ ಎಲ್ಲಾ ಕೆರೆಗಳಿಗೂ ನೀರು ಬರಲಿದೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವದಲ್ಲಿ ಅತ್ಯಂತ ಚಿಕ್ಕ ಘಟಕವಾಗಿರುವ ಗ್ರಾಮ ಪಂಚಾಯತ್‌ಗಳು ಅಭಿವೃದ್ಧಿ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸಿದರೆ ದೇಶದ ಪ್ರಗತಿಗೆ ಅನುಕೂಲವಾಗುತ್ತದೆ. ಈಗೀಗ ಅಪ್ರಾಮಾಣಿಕತೆ ಮನೆ ಮಾಡಿದೆ. ಅದರ ನಡುವೆಯೂ ಸಿರಿಗೆರೆ ಗ್ರಾಪಂ ಸದಸ್ಯರು ತಮ್ಮ ಅವಧಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಳೆಯುತ್ತಿರುವ ಗ್ರಾಮಗಳ ಅಗತ್ಯಗಳನ್ನು ಗಮನಿಸಿ ನಾಗರಿಕರಿಗೆ ಉತ್ತಮ ಸೌಲಭ್ಯಗಳನ್ನು ನೀಡುವ ವ್ಯವಸ್ಥೆ ಜಿಲ್ಲಾಡಳಿತದ ಮೂಲಕ ನಡೆಯಬೇಕು ಎಂದು ಆಶಿಸಿದರು.

ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವ ಸಲುವಾಗಿ ವಾಹನವನ್ನು ಕೊಡುಗೆಯಾಗಿ ಗ್ರಾಪಂಗೆ ನೀಡಲಾಗಿದೆ. ಇದನ್ನು ಬಳಸಿಕೊಂಡು ಸುತ್ತಲಿನ ಗ್ರಾಮಗಳ ನೈರ್ಮಲ್ಯವನ್ನೂ ಕಾಪಾಡಬೇಕು. ಅಗತ್ಯ ಬಿದ್ದರೆ ಮತ್ತೂಂದು ವಾಹನವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

Advertisement

ತರಳಬಾಳು ಮಠದ ಚರ ಪಟ್ಟಾಧ್ಯಕ್ಷರಾಗಿದ್ದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ
ಶ್ರದ್ಧಾಂಜಲಿ ದಿನವಾದ ಇಂದು ಗ್ರಾಮಸೌಧ ಉದ್ಘಾಟನೆಯಾಗುತ್ತಿರುವುದು ಸಂತೋಷ ತಂದಿದೆ. ಶ್ರೀಗಳು ಎಲೆಮರೆಯ ಕಾಯಿಯಂತೆ ಮಾಹೇಶ್ವರ ನಿಷ್ಠೆಯಿಂದ ಮಠದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಜಿ.ಎಂ. ವಿಶಾಲಾಕ್ಷಿ ನಟರಾಜ್‌ ಮಾತನಾಡಿ, ಜಿಲ್ಲೆಯ ವ್ಯಾಪ್ತಿಯ ಕೆರೆಗಳಲ್ಲಿ ಹೂಳು ತೆಗೆಸಲು ಜಲಾಮೃತ ಯೋಜನೆಯನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಈ ಯೋಜನೆಯಲ್ಲಿ ಭಾಗಿಯಾಗಿ ಅದನ್ನು ಯಶಸ್ವಿಗೊಳಿಸಬೇಕಾದ ಅಗತ್ಯ ಇದೆ. ಜಿಲ್ಲೆಯ ಹಲವು ಗ್ರಾಪಂಗಳು ಇಂದಿಗೂ ತುಂಬಾ ಹಿಂದುಳಿದಿದ್ದು, ಅವುಗಳ ಸುಧಾರಣೆಗೆ ಜಿಲ್ಲಾ ಪಂಚಾಯತ್‌ ಮುಂದಾಗಿದೆ. ಜಿಪಂನಿಂದ ದೊರೆಯುವ ಆರ್ಥಿಕ ನೆರವು ಬಳಸಿಕೊಂಡು ಗ್ರಾಮದ ಅಭಿವೃದ್ಧಿಗೆ ಕಾರ್ಯಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದರು.

ಜಿಪಂ ಉಪ ಕಾರ್ಯದರ್ಶಿ ರಂಗಸ್ವಾಮಿ ಮಾತನಾಡಿ, ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠ ವಿದ್ಯಾದಾನಕ್ಕೆ ಹೆಸರಾಗಿದೆ. ಸಂಸ್ಥೆಯ ಶಾಲಾ-ಕಾಲೇಜುಗಳಲ್ಲಿ ಓದಿದ ಲಕ್ಷಾಂತರ
ಯುವಕರು ಉತ್ತಮ ಸ್ಥಾನಮಾನಗಳನ್ನು ಗಳಿಸಿದ್ದಾರೆ. ಸಂಸ್ಥೆಯ ಚಿಕ್ಕಜಾಜೂರು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿ ನಾನು. ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸೇವೆಯನ್ನು ಎಂದಿಗೂ ಮರೆಯುವಂತಿಲ್ಲ ಎಂದು ಬಣ್ಣಿಸಿದರು. ಗ್ರಾಪಂ ಸದಸ್ಯ ಎಂ. ಬಸವರಾಜಯ್ಯ ಮಾತನಾಡಿ, ಈ ಭಾಗದಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಇತ್ತು. ಶಾಂತಿಸಾಗರದಿಂದ ಸುತ್ತಲಿನ 40 ಹಳ್ಳಿಗಳಿಗೆ ಕುಡಿಯುವ ನೀರು ತರುವ ಕೆಲಸವನ್ನು ತರಳಬಾಳು ಜಗದ್ಗುರುಗಳು ಮಾಡಿದ್ದರಿಂದ ಜನರು ನೆಮ್ಮದಿಯಿಂದ ಇರುವಂತಾಗಿದೆ. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಶ್ರೀಮಠದಿಂದ ಸುಮಾರು 7.5 ಲಕ್ಷ ರೂ.ಗಳ ವೆಚ್ಚದಲ್ಲಿ ವಾಹನವೊಂದನ್ನು ಕೊಟ್ಟಿದ್ದಾರೆ ಎಂದರು.

ಮತ್ತೋರ್ವ ಸದಸ್ಯ ಎಂ.ಜಿ. ದೇವರಾಜ್‌ ಮಾತನಾಡಿ, ಪಿಡಿಒಗಳನ್ನು ಪದೇ ಪದೇ ವರ್ಗಾವಣೆ ಮಾಡುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತವೆ. ಆದುದರಿಂದ ಪಿಡಿಒಗಳನ್ನು ಕೊನೆ ಪಕ್ಷ 5 ವರ್ಷಗಳ ಕಾಲ ಒಂದು ಸ್ಥಳದಿಂದ ವರ್ಗ ಮಾಡಬಾರದು ಎಂದು ಅಭಿಪ್ರಾಯಪಟ್ಟರು. ತಾಪಂ ಇಒ ಕೃಷ್ಣ ನಾಯ್ಕ, ನಾಸಿರ್‌ ಪಾಶ, ಪಾತಲಿಂಗಪ್ಪ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ರೂಪಾ ಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷೆ ಸುಮಾ ನಾಗರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ತನುಜಾ ತಿಮ್ಮರಾಜ್‌ ನಿರೂಪಿಸಿದರು. ಎಸ್‌.ಜೆ. ಮಧು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next