Advertisement

ಸಿರಿಬಾಗಿಲು: ಬಂಡೆಕಲ್ಲು ತೆರವು ಕಾರ್ಯ ಬಹುತೇಕ ಪೂರ್ಣ

09:04 AM Jul 25, 2019 | Team Udayavani |

ಸುಬ್ರಹ್ಮಣ್ಯ: ಶಿರಾಡಿ ಘಾಟಿ ರೈಲು ಮಾರ್ಗದಲ್ಲಿ ಸತತ ನಾಲ್ಕು ದಿನಗಳಿಂದ ನಡೆಯುತ್ತಿರುವ ಬಂಡೆಕಲ್ಲು ತೆರವು ಕಾರ್ಯಾಚರಣೆ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಶೇ. 90ರಷ್ಟು ತೆರವು ಕಾಮಗಾರಿ ಪೂರ್ಣಗೊಂಡಿದ್ದು ಮತ್ತೆ ಭೂ ಕುಸಿತ ಸಂಭವಿಸದೆ ಇದ್ದಲ್ಲಿ ಬುಧವಾರ ರಾತ್ರಿಯಿಂದ ಸುಬ್ರಹ್ಮಣ್ಯ-
ಸಕಲೇಶಪುರ ಮಾರ್ಗದಲ್ಲಿ ರೈಲು ಓಡಾಟ ಪುನರಾರಂಭವಾಗುವ ಸಾಧ್ಯತೆಯಿದೆ.

Advertisement

ಸುಬ್ರಹ್ಮಣ್ಯ ರಸ್ತೆ-ಸಕಲೇಶಪುರ ಮಧ್ಯೆ ಸಿರಿಬಾಗಿಲಿನ ಮಣಿಬಂಡದಲ್ಲಿ ಹಳಿಯ ಮೇಲೆ ಉರುಳಲು ಸಿದ್ಧವಾಗಿದ್ದ ಬಂಡೆಕಲ್ಲನ್ನು ತೆರವುಗೊಳಿಸುವ ಕಾರ್ಯಾಚರಣೆ ಮಂಗಳವಾರ ಸಂಜೆ ವೇಳೆಗೆ ಅಂತಿಮ ಹಂತಕ್ಕೆ ತಲುಪಿದೆ. ಸತತ ನಾಲ್ಕು ದಿನಗಳಿಂದ ಬಂಡೆಕಲ್ಲು, ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಸೋಮವಾರ ರಾತ್ರಿಯಿಂದ ಮಂಗಳವಾರ ಸಂಜೆ ತನಕ ಶಿರಾಡಿ ಘಾಟಿ ಪ್ರದೇಶದಲ್ಲಿ ಮಳೆ ತೀವ್ರತೆ ಕಡಿಮೆಯಿದ್ದುದು ಕಾಮಗಾರಿ ವೇಗವಾಗಿ ನಡೆಯಲು ಅನುಕೂಲ ಮಾಡಿಕೊಟ್ಟಿದೆ. ಬಂಡೆಯನ್ನು ಪುಡಿಗೈಯಲಾಗಿದ್ದು, ಹಳಿಯ ಮೇಲೆ ಬಿದ್ದಿರುವ ಬಂಡೆಯ ಚೂರು ಸಹಿತ ಮಣ್ಣನ್ನು ಮಾತ್ರ ತೆರವುಗೊಳಿಸಲು ಬಾಕಿಯಿದೆ.

ಬಳಿಕ ಇಲಾಖೆಯ ತಾಂತ್ರಿಕ ಅಧಿಕಾರಿಗಳು ಹಳಿ ಪರಿಶೀಲನೆ ನಡೆಸಿ ರೈಲು ಸಂಚಾರಕ್ಕೆ ಮಾರ್ಗ ಯೋಗ್ಯವಾಗಿದೆಯೆ ಎಂದು ಖಚಿತ ಪಡಿಸಲಿದ್ದಾರೆ.
ಈ ಎಲ್ಲ ಪ್ರಕ್ರಿಯೆಗಳು ಬುಧವಾರ ಸಂಜೆಯೊಳಗೆ ಮುಗಿಯುವ ಸಾಧ್ಯತೆಯಿದೆ. ಆರಂಭದಲ್ಲಿ ಗೂಡ್ಸ್‌ ರೈಲು ಪ್ರಾಯೋಗಿಕವಾಗಿ ಓಡಾಟ ನಡೆಸಿದ ಬಳಿಕ ಪ್ರಯಾಣಿಕ ರೈಲನ್ನು ಬಿಡಲಾಗುವುದು ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

6 ರೈಲುಗಳ ಸಂಚಾರ ರದ್ದು
ಮಂಗಳೂರು, ಜು. 23: ಮಣಿಬಂಡ ಬಳಿ ಬಂಡೆಗಲ್ಲು ತೆರವು ಕಾಮಗಾರಿ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆಯಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಆರು ರೈಲುಗಳ ಪ್ರಯಾಣ ರದ್ದುಗೊಳಿಸಲು ನೈಋತ್ಯ ರೈಲ್ವೇ ಇಲಾಖೆ ನಿರ್ಧರಿಸಿದೆ.

Advertisement

ಮಂಗಳವಾರ ಯಶವಂತಪುರ- ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ (ನಂ.16575), ಯಶವಂತಪುರ- ಮಂಗಳೂರು ಸೆಂಟ್ರಲ್‌(ನಂ. 16585) ರೈಲು ಸೇವೆ ಪೂರ್ಣ ರದ್ದುಗೊಂಡಿತ್ತು.

ಜು. 24ರಂದು ಮಂಗಳೂರು ಜಂಕ್ಷನ್‌- ಯಶವಂತಪುರ ಎಕ್ಸ್‌ಪ್ರೆಸ್‌ (ನಂ.16576), ಯಶವಂತಪುರ- ಕಾರವಾರ ಎಕ್ಸ್‌ಪ್ರೆಸ್‌ (16515), ಮಂಗಳೂರು ಸೆಂಟ್ರಲ್‌- ಯಶವಂತಪುರ ಎಕ್ಸ್‌ಪ್ರೆಸ್‌ (ನಂ.16586) ಮತ್ತು ಜು.25 ರಂದು ಕಾರವಾರ- ಯಶವಂತಪುರ ಎಕ್ಸ್‌ಪ್ರೆಸ್‌ (ನಂ.16516) ರೈಲುಗಳ ಸೇವೆ ಪೂರ್ಣ ರದ್ದುಪಡಿಸಲಾಗಿದೆ.

ಕಾರವಾರ ಮತ್ತು ಬೆಂಗಳೂರು/ ಯಶವಂತಪುರ ನಡುವೆ ಪ್ರಯಾಣಿಸುವ ಕೆಲವು ರೈಲುಗಳ ಮಂಗಳೂರು ಮತ್ತು ಕಾರವಾರ ನಡುವಿನ ಸಂಚಾರ ರದ್ದುಪಡಿಸಲಾಗಿದೆ. ಜು.23 ಕೆಎಸ್‌ಆರ್‌ ಬೆಂಗಳೂರು- ಕಾರವಾರ ಎಕ್ಸ್‌ಪ್ರೆಸ್‌ (ನಂ.16523) ರೈಲು, ಜು.24 ರಂದು ಕಾರವಾರ- ಕೆಎಸ್‌ಆರ್‌ ಬೆಂಗಳೂರು ರೈಲು (ನಂ.16514), ಜು.24 ರಂದು ಕೆಎಸ್‌ಆರ್‌ ಬೆಂಗಳೂರು- ಕಾರವಾರ
(ನಂ.16513) ಎಕ್ಸ್‌ಪ್ರೆಸ್‌ ಮತ್ತು ಜು. 25 ರಂದು ಕಾರವಾರ- ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ (ನಂ.16524) ಕಾರವಾರ ಮತ್ತು ಮಂಗಳೂರು ನಡುವೆ ಸಂಚಾರ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಕೇರಳ ಮಾರ್ಗದಲ್ಲಿ ಸಂಚಾರ
ಬೆಂಗಳೂರು- ಕಣ್ಣೂರು/ ಕಾರವಾರ ನಡುವೆ ಸಂಚರಿಸುವ ಕೆಲವು ರೈಲುಗಳು
ಕೇರಳ ಮಾರ್ಗದಲ್ಲಿ ಸಂಚರಿಸಲಿದೆ. ಜು.24ರಂದು ಕೆಎಸ್‌ಆರ್‌ ಬೆಂಗಳೂರು- ಕಣ್ಣೂರು/ ಕಾರವಾರ ರೈಲು ಜೋಲಾರ್‌ಪೇಟೆ, ಸೇಲಂ, ಪಾಲಾ^ಟ್‌, ಶೋರ್ನೂರು ಮಾರ್ಗ ದಲ್ಲಿ ಸಂಚರಿಸಲಿದೆ. ಜು.24ರಂದು ಕಣ್ಣೂರು/ ಕಾರವಾರ- ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ (ನಂ. 16512/ 16514) ಶೋರ್ನೂರು, ಪಾಲಾ^ಟ್‌, ಸೇಲಂ, ಜೋಲಾರ್‌ಪೇಟೆ ಮಾರ್ಗದಲ್ಲಿ ಸಂಚರಿಸಲಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next