Advertisement

G-20 ಗೆ ರಾಜ್ಯದ ಸಿರಿ ಆತಿಥ್ಯ: ಇಬ್ಬರು ಕನ್ನಡತಿಯರಿಂದ ಸಿದ್ಧಗೊಳ್ಳಲಿದೆ ವಿಶೇಷ ಖಾದ್ಯ

10:00 PM Sep 07, 2023 | Team Udayavani |

ಬೆಂಗಳೂರು: ಹೊಸದಿಲ್ಲಿಯಲ್ಲಿ ವಾರಾಂತ್ಯದಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿದೆ. ಅಲ್ಲಿಗೆ ಭೇಟಿ ನೀಡಲಿರುವ ಒಕ್ಕೂಟದ ಸದಸ್ಯ ರಾಷ್ಟ್ರಗಳ ಸರಕಾರಿ ಮುಖ್ಯಸ್ಥರ ಪತ್ನಿಯರಿಗೆ ರಾಜ್ಯದ ಇಬ್ಬರು ಮಹಿಳಾಮಣಿಗಳು ಸಿರಿಧಾನ್ಯ ಖಾದ್ಯಗಳ ಆತಿಥ್ಯ ನೀಡಲಿದ್ದಾರೆ! ಅದಕ್ಕಾಗಿ ಅವರಿಗೆ ಆಹ್ವಾನ ಬಂದಿದೆ.

Advertisement

ಕೋಲಾರ ಜಿಲ್ಲೆಯ ಕೆಜಿಎಫ್ನ ಎಚ್‌.ಜೆ. ಮಾರ್ಗರೆಟ್‌ ಹಾಗೂ ಮಂಡ್ಯದ ಕನ್ನಳ್ಳಿಯ ಕಾಗೆಹಳ್ಳದದೊಡ್ಡಿಯ ರಾಣಿ ಚಂದ್ರಶೇಖರ್‌ ಅವರನ್ನು ರಾಜ್ಯ ಕೃಷಿ ಇಲಾಖೆ ಆಯ್ಕೆ ಮಾಡಿ ಕಳುಹಿಸಿಕೊಟ್ಟಿದೆ. ಸಭೆಗೆ ಆಗಮಿಸಲಿರುವ ಜಾಗತಿಕ ನಾಯಕರ ಕುಟುಂಬದ ಸದಸ್ಯರು ರಾಜ್ಯದ ಈ ಇಬ್ಬರ ಸಿರಿಧಾನ್ಯ ಉತ್ಪನ್ನಗಳ ರುಚಿ ಸವಿಯಲಿದ್ದಾರೆ. ಇದಕ್ಕಾಗಿ ಅಂತಾರಾಷ್ಟ್ರೀಯ ಶೆಫ್ ಕೂಡ ಅಲ್ಲಿ ಇರಲಿದ್ದಾರೆ.

ಸಿರಿಧಾನ್ಯಗಳಿಂದ ತಯಾರಿಸಿದ ಮ್ಯಾಗಿ, ಪಾಸ್ತಾ, ಚಕ್ಕೆಗಳು, ರಾಗಿ ಜಾಮೂನು, ರಾಗಿ ರವೆ ಇಡ್ಲಿ ಮಿಕ್ಸ್‌, ರಾಗಿ ಮಲ್ಟ್, ರಾಗಿ ರವೆ ಮತ್ತಿತರ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾರ್ಗರೆಟ್‌ ಮತ್ತು ರಾಣಿ ಚಂದ್ರಶೇಖರ್‌ ಪ್ರದರ್ಶಿಸಲಿದ್ದಾರೆ. ಇಬ್ಬರೂ ಈಗಾಗಲೇ ದಿಲ್ಲಿಗೆ ತೆರಳಿದ್ದು, ತಾಲೀಮು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ “ಉದಯವಾಣಿ’ಯೊಂದಿಗೆ ಖುಷಿ ಹಂಚಿಕೊಂಡರು.

“ಹೆಮ್ಮೆ ಅನಿಸುತ್ತದೆ’
ಜಿ20ಯಂತಹ ಶೃಂಗಸಭೆಯಲ್ಲಿ ರಾಜ್ಯವನ್ನು ನಾವಿಬ್ಬರೂ ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ನಮ್ಮ ಸಿರಿಧಾನ್ಯಗಳ ಉತ್ಪನ್ನಗಳ ಪ್ರದರ್ಶನಕ್ಕೆ ಇಲ್ಲಿ ವೇದಿಕೆ ಕಲ್ಪಿಸಲಾಗಿದೆ. ನವಣಕ್ಕಿ, ಊದಲಕ್ಕಿ, ಸಾಮೆ ಮತ್ತಿತರ ಧಾನ್ಯಗಳಿಂದ ತಯಾರಿಸಿದ ಮ್ಯಾಗಿ, ಪಾಸ್ತಾದಂತಹ ಖಾದ್ಯಗಳ ಜತೆಗೆ ಪಾಲಿಶ್‌ ಮಾಡಿರದ, ನಾರಿನಂಶ ನಷ್ಟವಾಗದಂತೆ ಸಂಸ್ಕರಣೆ ಮಾಡಿದ ಸಿರಿಧಾನ್ಯಗಳನ್ನು ಇಲ್ಲಿ ಪ್ರದರ್ಶನ ಮಾಡುತ್ತಿದ್ದೇನೆ ಎಂದು ಕೆಜಿಎಫ್ನ ಮಾರ್ಗರೆಟ್‌ ಹೇಳಿದರು.

“ನಾನು 2017ರಲ್ಲಿ ಈ ಸಿರಿಧಾನ್ಯಗಳ ಸಂಸ್ಕರಣೆಗೆ ಸಂಬಂಧಿಸಿದ ಇಸಾಯು ಫ‌ುಡ್‌ ಪ್ರೈ.ಲಿ. ಆರಂಭಿಸಿದೆ. ಆಗ ಮೂವರು ಕೆಲಸಗಾರರಿದ್ದರು. ಇಂದು ಸುಮಾರು 150 ರೈತರಿಂದ ವಾರ್ಷಿಕ 200-300 ಟನ್‌ ಸಿರಿಧಾನ್ಯ ಖರೀದಿಸುತ್ತಿದ್ದೇನೆ. ಅವುಗಳ ಸಂಸ್ಕರಣೆ ಜತೆಗೆ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾಡಿ, ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್‌, ಉತ್ತರಾಖಂಡ, ದಿಲ್ಲಿ, ಹರಿಯಾಣಕ್ಕೆ ಪೂರೈಸುತ್ತಿದ್ದೇನೆ. 30 ಜನ ನನ್ನ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 3ರಿಂದ 5 ಕೋಟಿ ರೂ. ವಾರ್ಷಿಕ ವಹಿವಾಟು ಮಾಡುತ್ತಿದ್ದೇನೆ. ಈ ಮೊದಲು ಐಟಿ ಕಂಪೆನಿಯಲ್ಲಿ ಎಚ್‌ಆರ್‌ ವಿಭಾಗದ ಮುಖ್ಯಸ್ಥೆ ಆಗಿದ್ದೆ. ಐಎಎಸ್‌ ಪರೀಕ್ಷೆ ಸಿದ್ಧತೆಗಾಗಿ 2 ಲಕ್ಷ ರೂ. ಸಂಬಳದ ಕೆಲಸ ತೊರೆದೆ. ಪರೀಕ್ಷೆಯಲ್ಲಿ ಉತ್ತೀರ್ಣ ಆಗಲಿಲ್ಲ. ಆದರೆ ಇತಿಹಾಸ ವಿಷಯ ಓದುವಾಗ ಸಿರಿಧಾನ್ಯಗಳ ಮಹತ್ವ ಗೊತ್ತಾಯಿತು. ಅಲ್ಲಿಂದ ಇದರ ಕಡೆಗೆ ಆಸಕ್ತಿ ಬೆಳೆಯಿತು ಎಂದರು.

Advertisement

“ಬ್ಯುಸಿ ಇದ್ದೇನೆ, ಆಗುವುದಿಲ್ಲ ಅಂದಿದ್ದೆ!”
ಸಿರಿಧಾನ್ಯಗಳಿಂದ ನಾನು ಸುಮಾರು 40 ಉತ್ಪನ್ನಗಳನ್ನು ತಯಾರಿಸುತ್ತಿದ್ದೇನೆ. ಅದರಲ್ಲೂ ವಿಶೇಷವಾಗಿ ರಾಗಿ ಜಾಮೂನು ಪೌಡರ್‌, ರಾಗಿ ರವೆ ಇಡ್ಲಿ ಮಿಕ್ಸ್‌, ರಾಗಿ ರವೆ, ಮಿಲೆಟ್‌ ನ್ಯೂಟ್ರಿಷನ್‌ ಮಿಕ್ಸ್‌ ಈಚೆಗೆ ಮಾರುಕಟ್ಟೆಯಲ್ಲಿ ಕಾಣಬಹುದು. ಈ ಐದೂ ಉತ್ಪನ್ನಗಳನ್ನು ಜಿ20ಯಲ್ಲಿ ಪ್ರದರ್ಶಿಸುತ್ತಿದ್ದೇನೆ. ಮೊದಲಿಗೆ ನನಗೆ ಕೃಷಿ ಇಲಾಖೆಯಿಂದ ಕಾರ್ಯಕ್ರಮವೊಂದಕ್ಕೆ ಭಾಗವಹಿಸುವಂತೆ ಕರೆ ಬಂತು. ಆದರೆ ಸ್ವಲ್ಪ ಬ್ಯುಸಿ ಇದ್ದುದರಿಂದ ಕಷ್ಟ ಎಂದು ಹೇಳಿದ್ದೆ. ಅನಂತರ ಸಚಿವರು ಮಾಧ್ಯಮಗಳಲ್ಲಿ ಜಿ20ಗೆ ನಾನು ಆಯ್ಕೆಯಾಗಿದ್ದನ್ನು ಪ್ರಕಟಿಸಿದರು. ಗೂಗಲ್‌ ಮಾಡಿದಾಗ ಈ ಶೃಂಗಸಭೆಯ ಮಹತ್ವ ತಿಳಿಯಿತು ಎಂದು ಮಂಡ್ಯದ ರಾಣಿ ಚಂದ್ರಶೇಖರ್‌ ಸಂತಸ ಹಂಚಿಕೊಂಡರು.

2002-03ರಲ್ಲಿ ನನಗೆ ಸಿರಿಧಾನ್ಯಗಳ ಬಗ್ಗೆ ಆಸಕ್ತಿ ಬೆಳೆಯಿತು. ಆರಂಭದಲ್ಲಿ ಚಿಕ್ಕದಾಗಿ ಇವುಗಳ ಉತ್ಪನ್ನಗಳ ವ್ಯಾಪಾರ ಆರಂಭಿಸಿದಾಗ ಮೂವರು ಇದ್ದರು. ಈಗ 13 ಜನ ಕೆಲಸ ಮಾಡುತ್ತಿದ್ದಾರೆ. ವಾರ್ಷಿಕ 1 ಟನ್‌ ಸಿರಿಧಾನ್ಯಗಳನ್ನು ಸುಮಾರು 20 ರೈತರು ಮತ್ತು ಐದು ರೈತ ಉತ್ಪಾದಕ ಸಂಸ್ಥೆ (ಎಫ್ಪಿಒ)ಗಳಿಂದ ಖರೀದಿಸುತ್ತಿದ್ದೇನೆ. ಹಳೆಬುದನೂರಿನಲ್ಲಿ ವಿ ಹೆಲ್ಪ್ ಆಹಾರ ಸಂಸ್ಕರಣೆ ಮತ್ತು ಉತ್ಪಾದನೆ ಘಟಕ ತೆರೆಯಲಾಗಿದೆ. ನಮ್ಮ ಉತ್ಪನ್ನಗಳು ಕೇರಳ, ಕೊಲ್ಕತಾ, ಜರ್ಮನಿ, ಮುಂಬಯಿ, ಬೆಂಗಳೂರಿಗೆ ಪೂರೈಕೆ ಆಗುತ್ತಿವೆ ಎಂದು ರಾಣಿ ವಿವರಿಸಿದರು.

ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next