ಸಿರವಾರ: ತಂಬಾಕು ಸೇವನೆ ಮುಕ್ತ ಜೀವನ ನಡಸಿದರೆ ಉತ್ತಮ ಆರೋಗ್ಯದ ಜೊತೆಗೆ ದೇಹ ಸದೃಢತೆ ಕಾಪಾಡಿಕೊಳ್ಳಬಹುದು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುನೀಲ ಸರೋದೆ ಹೇಳಿದರು.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಶುಕ್ರವಾರ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ದಿನಮಾನಗಳಲ್ಲಿ ಹೆಣ್ಣು-ಗಂಡು ತಾರತಮ್ಯವಿಲ್ಲದೇ ತಂಬಾಕು ಉತ್ಪನ್ನಗಳಾದ ಸಿಗರೇಟ್, ಗುಟ್ಕಾ, ಪಾನ್, ಬೀಡಿ, ತಂಬಾಕು, ನಶೆಯಂತಹ ವಿವಿಧ ತಂಬಾಕು ಉತ್ಪನ್ನಗಳ ಸೇವನೆ ರೂಢಿಸಿಕೊಂಡು ನಾನಾ ರೋಗಗಳಿಗೆ ತುತ್ತಾಗಿ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರಿಂದ ಪರೋಕ್ಷವಾಗಿ ಇತರರು ಕೂಡ ಧೂಮಪಾನ ಮಾಡಿದಂತಾಗುತ್ತಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ತಂಬಾಕು ಉತ್ಪನ್ನ ಸೇವನೆ ತ್ಯಜಿಸಿ ಆರೋಗ್ಯಯುತ ಜೀವನ ನಡೆಸಬೇಕು ಎಂದು ಹೇಳಿದರು.
ಆರೋಗ್ಯ ಶಿಕ್ಷಣಾಧಿಕಾರಿ ಶ್ರೀದೇವಿ, ಹಿರಿಯ ಆರೋಗ್ಯ ಸಹಾಯಕ ಗುರುಪಾದಯ್ಯ, ಕ್ಷಯರೋಗ ಮೇಲ್ವಿಚಾರಕ ಪ್ರೇಮಪ್ರಸಾದ್, ಮಹಿಳಾ ಆರೋಗ್ಯ ಸಹಾಯಕಿ ನೀಲಮ್ಮ, ಕಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಆಸ್ಪತ್ರೆ ಸಿಬ್ಬಂದಿ, ಸಾರ್ವಜನಿಕರು ಜಾಥಾದಲ್ಲಿ ಭಾಗವಹಿಸಿದ್ದರು.