Advertisement

ದೂರದ ಕೆರೆಯೇ ನೀರಿಗಾಸರೆ

11:37 AM May 29, 2019 | Naveen |

ಮಹೇಶ ಪಾಟೀಲ
ಸಿರವಾರ:
ತಾಲೂಕಿನ ಗಣದಿನ್ನಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ಗ್ರಾಮಸ್ಥರು ಕಿ.ಮೀ.ಗಟ್ಟಲೇ ಹೋಗಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಗಣದಿನ್ನಿ ಗ್ರಾಮದಲ್ಲಿ 1500ಕ್ಕೂ ಹೆಚ್ಚು ಜನಸಂಖ್ಯೆ ಇದೆ. ನಾಲ್ವರು ಗ್ರಾಪಂ ಸದಸ್ಯರಿದ್ದಾರೆ. ಗ್ರಾಮದಲ್ಲಿ ಎರಡು ಮೇಲ್ಮಟ್ಟದ ಜಲಸಂಗ್ರಹಾಗಾರಗಳಿದ್ದು, ಒಂದು ಶಿಥಿಲಗೊಂಡಿದ್ದರೆ, ಹೊಸದಾಗಿ ನಿರ್ಮಿಸಿದ ಟ್ಯಾಂಕ್‌ಗೆ ಗುತ್ತಿಗೆದಾರರು ಸರಿಯಾಗಿ ಪೈಪ್‌ಲೈನ್‌ ಮಾಡದ್ದರಿಂದ ನಿರುಪಯುಕ್ತವಾಗಿದೆ. ಇನ್ನು ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕ ದುರಸ್ತಿಗೀಡಾಗಿದೆ. ಹೀಗಾಗಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ದೂರದ ಕೆರೆಯನ್ನೇ ಅವಲಂಬಿಸಿದ್ದು, ಕಿ.ಮೀ.ಗಟ್ಟಲೇ ನಡೆದುಕೊಂಡು ಹೋಗಿ ನೀರು ತರುತ್ತಿದ್ದಾರೆ.

ದೂರದ ಕೆರೆಯೇ ಆಸರೆ: ಗ್ರಾಮದಲ್ಲಿ ನೀರಿನ ಸಮಸ್ಯೆ ಇರುವುದರಿಂದ ಕಳೆದ ವರ್ಷ ಗ್ರಾಮದ ಹೊರವಲಯದಲ್ಲಿ ಕೆರೆ ನಿರ್ಮಿಸಿ ನೀರು ಬಿಡಲಾಗಿದೆ. ಕೆರೆಯು ಗ್ರಾಮದಿಂದ 1ಕಿ.ಮೀ. ಅಂತರದಲ್ಲಿದೆ. ಕೆರೆಯಿಂದ ನೀರು ಪೂರೈಕೆಗೆ ಪೈಪ್‌ಲೈನ್‌ ಅಳವಡಿಸಿಲ್ಲ. ಹೀಗಾಗಿ ಗ್ರಾಮಸ್ಥರು ನಡೆದುಕೊಂಡು, ಇಲ್ಲವೇ ಸೈಕಲ್, ತಳ್ಳುವ ಗಾಡಿ, ಬೈಕ್‌ನಲ್ಲಿ ನೀರು ತರುತ್ತಿದ್ದಾರೆ.

ಟ್ಯಾಂಕ್‌ ಶಿಥಿಲ: ಗಣದಿನ್ನಿ ಗ್ರಾಮದಲ್ಲಿ ಅನೇಕ ವರ್ಷಗಳ ಹಿಂದೆ ಊರಿನ ಮಧ್ಯದಲ್ಲಿ ನೀರಿನ ಟ್ಯಾಂಕ್‌ ನಿರ್ಮಿಸಲಾಗಿತ್ತು. ನಿರ್ವಹಣೆ ಮತ್ತು ನೀರು ಸರಬರಾಜು ಇಲ್ಲದೇ ಶಿಥಿಲಾವಸ್ಥೆ ತಲುಪಿ, ಕಬ್ಬಿಣದ ರಾಡುಗಳು ಹೊರ ಕಾಣುತ್ತಿವೆ. ಯಾವಾಗ ಬೀಳುವುದೋ ಎಂಬ ಭಯ ಗ್ರಾಮಸ್ಥರನ್ನು ಕಾಡುತ್ತಿದೆ.

ಹೊಸ ಟ್ಯಾಂಕ್‌ ನಿರುಪಯುಕ್ತ: ಗ್ರಾಮದಲ್ಲಿನ ಹಳೆ ಟ್ಯಾಂಕ್‌ ಶಿಥಿಲಗೊಂಡಿದ್ದರಿಂದ 2013-14ನೇ ಸಾಲಿನ ಜಿಪಂ ಅನುದಾನದಲ್ಲಿ ಹೊಸ ಟ್ಯಾಂಕ್‌ ನಿರ್ಮಿಸಲಾಗಿದೆ, ಆದರೇ ಅದಕ್ಕೆ ಸರಿಯಾಗಿ ಪೈಪ್‌ಲೈನ್‌ ಮಾಡದ್ದರಿಂದ ನೀರು ಸರಬರಾಜು ಆಗುತ್ತಿಲ್ಲ. ಹೀಗಾಗಿ ಗ್ರಾಮದಲ್ಲಿ ಟ್ಯಾಂಕ್‌ ಇದ್ದೂ ಇಲ್ಲದಂತಾಗಿದೆ.

Advertisement

ದುರಸ್ತಿಗೀಡಾದ ನೀರು ಶುದ್ಧೀಕರಣ ಘಟಕ: ಗ್ರಾಮಸ್ಥರಿಗೆ ಶುದ್ಧ ನೀರು ಒದಗಿಸಬೇಕು ಎಂಬ ದೃಷ್ಟಿಯಿಂದ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕ ಆರಂಭಿಸಲಾಗಿತ್ತು. ಇದರಿಂದ ಕೇವಲ ಮೂರು ತಿಂಗಳು ಮಾತ್ರ ಗ್ರಾಮಸ್ಥರಿಗೆ ಶುದ್ಧ ನೀರು ದೊರೆತಿದ್ದು, ನಂತರ ದುರಸ್ತಿಗೀಡಾಗಿ ಇದು ಕೂಡ ನಿರುಪಯುಕ್ತವಾಗಿದೆ. ನೀರಿನ ಸಮಸ್ಯೆ ಪರಿಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ಸಂಪರ್ಕ ಇಲ್ಲದ್ದರಿಂದ ಕೆರೆಗೆ ಹೋಗಿ ನೀರು ತರುವ ಸ್ಥಿತಿ ನಮ್ಮದಾಗಿದೆ. ಅಧಿಕಾರಿಗಳು ಗ್ರಾಮಕ್ಕೆ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸಲು ಮುಂದಾಗಬೇಕು.
•ಬಸವರಾಜ, ಗ್ರಾಮಸ್ಥ

ಅಧಿಕಾರಿಗಳೊಂದಿಗೆ ಚರ್ಚಿಸಿ ನೀರು ಸರಬರಾಜಿಗೆ ವ್ಯವಸ್ಥೆ ಕಲ್ಪಿಸಲಾಗುವುದು. ಶುದ್ಧೀಕರಣ ಘಟಕ ದುರಸ್ತಿಗೊಳಿಸಿ ಆರಂಭಿಸಲಾಗುವುದು.
••ಶಿವಕುಮಾರ, ಗಣದಿನ್ನಿ,
ಗ್ರಾಪಂ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next