ಶಿರಸಿ: ಕರಾವಳಿ, ಬಯಲುಸೀಮೆ,ಮಲೆನಾಡು ಪ್ರದೇಶ ಒಳಗೊಂಡ ರಾಜ್ಯದ ದೊಡ್ಡ ಜಿಲ್ಲೆಗಳ ಸಾಲಿನಲ್ಲಿ ಇರುವ ಉತ್ತರ ಕನ್ನಡ ಜಿಲ್ಲೆಯನ್ನು ವಿಭಾಗಿಸಿ ಶಿರಸಿ ಪ್ರತ್ಯೇಕ ಜಿಲ್ಲೆ ಎಂದು ಘೋಷಿಸುವಂತೆ ಆಗ್ರಹಿಸಿ ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿಯಿಂದ ರಾಜ್ಯ ಸರಕಾರವನ್ನು ಆಗ್ರಹಿಸಲಾಯಿತು.
ಸಮಿತಿ ಅಧ್ಯಕ್ಷ ಉಪೇಂದ್ರ ಪೈ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್, ಕಂದಾಯ ಸಚಿವ ಆರ್.ಅಶೋಕ ಅವರನ್ನು ಭೇಟಿ ಮಾಡಿ ಬಜೆಟ್ ವೇಳೆಗೆ ಶಿರಸಿಗೆ ಪ್ರತ್ಯೇಕ ಸ್ಥಾನಮಾನ ನೀಡುವಂತೆ ಒತ್ತಾಯಿಸಿದರು.
ಹನ್ನೆರಡು ತಾಲೂಕು ಒಳಗೊಂಡ ಉತ್ತರ ಕನ್ನಡ ಜಿಲ್ಲೆ ಗುಡ್ಡಗಾಡು ಜಿಲ್ಲೆ. ಇಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುವುದೂ ಸಂಪರ್ಕ ಸಾಧನದ ಕೊರತೆ ಇದೆ. ಜಿಲ್ಲಾ ಕೇಂದ್ರಕ್ಕೆ ತೆರಳಬೇಕೆಂದರೆ ಕೆಲವು ತಾಲೂಕುಗಳಿಂದ 125 ಕಿಮೀ ಸಂಚಾರ ಮಾಡಬೇಕಿದೆ. ಜಿಲ್ಲೆಯ ಅಭಿವೃದ್ಧಿಗಾಗಿ, ಅನುದಾನದ ಲಭ್ಯತೆಯ ಹೆಚ್ಚಳಕ್ಕಾಗಿ, ಜನ ಸಾಮಾನ್ಯರ ಹಾಗೂ ಅಧಿಕಾರಿಗಳ ಹಿತಸದೃಷ್ಟಿಯಿಂದಲೂ ಜಿಲ್ಲೆಯನ್ನು ವಿಭಾಗಿಸಿದರೆ ಅನುಕೂಲ ಆಗುತ್ತದೆ. ಈ ಬೇಡಿಕೆ ಕಳೆದೊಂದು ದಶಕಗಳಿಂದಲೂ ಇದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈ ಬಾರಿ ಆದರೂ ಬಜೆಟ್‌ನಲ್ಲಿ ಸೇರ್ಪಡೆ ಮಾಡಿಸುವಂತೆ ಆಗ್ರಹಿಸಿದರು.
ಇದನ್ನೂ ಓದಿ :ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಹುದ್ದೆಗೆ ನಾನಾ ಪಟೋಲೆ ರಾಜೀನಾಮೆ
ಈಗಾಗಲೇ ಶಿರಸಿ ಶೈಕ್ಷಣಿಕ ಜಿಲ್ಲೆ ಆಗಿದೆ. ವಾಯವ್ಯ ಸಾರಿಗೆ ಕಚೇರಿ, ಹೆಸ್ಕಾಂ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಕಚೇರಿಗಳ ಜಿಲ್ಲಾ ಕೇಂದ್ರ ಸ್ಥಳವೂ ಇದೆ. ಅಭಿವೃದ್ಧಿಗೆ ಕಾರಣದಿಂದ ಪ್ರತ್ಯೇಕವಾದರೆ ಅನುಕೂಲವೇ ಆಗಲಿದೆ. ಆಡಳಿತಾತ್ಮಕವಾಗಿ ಕೂಡ ಪ್ರತ್ಯೇಕ ಜಿಲ್ಲೆ ಆಗಬೇಕಿದೆ ಎಂದೂ ಹಕ್ಕೊತ್ತಾಯ ಮಾಡಿದರು.
ಸಮನವಿ ಸಲ್ಲಿಕೆ ವೇಳೆ ಅಧ್ಯಕ್ಷ ಉಪೇಂದ್ರ ಪೈ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಸದಸ್ಯ ರಮಾಕಾಂತ ಭಟ್ಟ, ಸಮಿತಿ ಸಂಚಾಲಕ ಎಂ.ಎಂ. ಭಟ್ಟ ಕಾರೇಕೊಪ್ಪ, ಪರಮಾನಂದ ಹೆಗಡೆ, ಸಿ.ಎಸ್. ಗೌಡರ್, ಡಾನಿ ಡಿಸೋಜಾ ಇತರರು ಇದ್ದರು.