Advertisement

ಕತ್ತಲೆಯಲ್ಲಿ ಸಿರವಾರ ತಹಶೀಲ್ದಾರ್‌ ಕಾರ್ಯಾಲಯ

03:02 PM Dec 08, 2018 | Team Udayavani |

ಸಿರವಾರ: ಪಟ್ಟಣದಲ್ಲಿ ಜೆಸ್ಕಾಂ ಇಲಾಖೆ ವಿದ್ಯುತ್‌ ನಿರ್ವಹಣೆ ಕಾಮಗಾರಿ ನಡೆಸುತ್ತಿರುವುದರಿಂದ ಒಂದು ವಾರ ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಹೀಗಾಗಿ ತಹಶೀಲ್ದಾರ್‌ ಕಚೇರಿ ಕತ್ತಲೆಯಲ್ಲಿ ಕಾರ್ಯ ನಿರ್ವಹಿಸುವ ಜೊತೆಗೆ ಸಾರ್ವಜನಿಕರು ಸಕಾಲದಲ್ಲಿ ಪ್ರಮಾಣಪತ್ರಗಳನ್ನು ಪಡೆಯಲು ಆಗುತ್ತಿಲ್ಲ.

Advertisement

ಸಿರವಾರ ಪಟ್ಟಣದಲ್ಲಿ ವಾಲಿರುವ ಕಂಬಗಳ ಸರಿಪಡಿಸುವಿಕೆ, ವೈರ್‌ಗಳ ಜೋಡಣೆ ಕಾರ್ಯ ನಿಮಿತ್ತ ಒಂದು ವಾರ ವಿದ್ಯುತ್‌ ಕಡಿತಗೊಳಿಸುತ್ತಿದ್ದು, ಪರ್ಯಾಯ ವ್ಯವಸ್ಥೆಯಿಲ್ಲದ ಕಾರಣ ತಹಶೀಲ್ದಾರ್‌ ಕಾರ್ಯಾಲಯದ ಕೆಲಸಗಳಿಗಾಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ.

ವಿದ್ಯುತ್‌ ಸಮಸ್ಯೆ: ಕಳೆದ ಒಂದು ವರ್ಷದಿಂದ ನಾಡ ಕಾರ್ಯಾಲಯದಲ್ಲಿ ಸೋಲಾರ್‌ ಪ್ಲೇಟ್‌ಗಳು ಕಾರ್ಯ ನಿರ್ವಹಿಸದೇ ವಿದ್ಯುತ್‌ ಸಮಸ್ಯೆಯಿದೆ. ವಿದ್ಯುತ್‌ ಇದ್ದಾಗ ಮಾತ್ರ ಕಚೇರಿ ಕೆಲಸಗಳು ನಡೆಯುತ್ತವೆ. ವಿದ್ಯುತ್‌ ವ್ಯತ್ಯಯವಾದಾಗ ತಹಶೀಲ್ದಾರ್‌ ಕಾರ್ಯಾಲಯ ಕತ್ತಲೆಯ ಮನೆಯಂತಾಗುತ್ತದೆ.

ಪ್ರಮಾಣ ಪತ್ರಗಳಿಗೆ ಪರದಾಟ: ತಹಶೀಲ್ದಾರ್‌ ಕಾರ್ಯಾಲಯದಲ್ಲಿ ವಿದ್ಯುತ್‌ ಕೈಕೊಟ್ಟಾಗ ಪರ್ಯಾಯ ವ್ಯವಸ್ಥೆ ಇಲ್ಲದ್ದರಿಂದ ರೇಷನ್‌ ಕಾರ್ಡ್‌ ಸೇರಿ ಅನೇಕ ಸರ್ಕಾರಿ ಕೆಲಸಗಳಿಗೆ ಬೇಕಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್‌ ಸೌಲಭ್ಯಗಳಿಗೆ ಪಹಣಿ ಮತ್ತು ಸರ್ವೇ ಕಾರ್ಯಗಳಿಗೆ ಅರ್ಜಿ ಸಲ್ಲಿಸಲು ಕಾರ್ಯಾಲಯಕ್ಕೆ ಆಗಮಿಸುವ ಸಾರ್ವಜನಿಕರು ನಿತ್ಯ ಕಚೇರಿಗೆ ಅಲೆದಾಡುವಂತಾಗಿದೆ. 

ಖಾಸಗಿ ಕಂಪ್ಯೂಟರ್‌ ಕೇಂದ್ರಗಳ ಮೊರೆ: ನಾಡ ಕಾರ್ಯಾಲಯದಲ್ಲಿ ವಿದ್ಯುತ್‌ ಸಮಸ್ಯೆ ಇರುವುದರಿಂದ ಅನಿವಾರ್ಯವಾಗಿ ಖಾಸಗಿ ಕಂಪ್ಯೂಟರ್‌ ಕೇಂದ್ರಗಳನ್ನು ಸಾರ್ವಜನಿಕರು ಅವಲಂಬಿಸುವಂತಾಗಿದೆ. ಅಲ್ಲಿಯೂ ವಿದ್ಯುತ್‌ ಸಮಸ್ಯೆ, ವೆಬ್‌ಸೈಟ್‌ ತಾಂತ್ರಿಕ ತೊಂದರೆ ಎದುರಾದರೆ ಜನ ಗಂಟೆಗಟ್ಟಲೇ ಕಾಯುವಂತಾಗಿದೆ. ಅಧಿಕಾರಿಗಳು ಕೂಡಲೇ ಸಮಸ್ಯೆ ಪರಿಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಕಳೆದ ವಾರ ಸರ್ಕಾರದಿಂದ ಹೊಸ ಸೋಲಾರ್‌ ಪ್ಲೇಟ್‌ ಹಾಗೂ ಬ್ಯಾಟರಿಗಳನ್ನು ಕಳುಹಿಸಿದ್ದು ಅವುಗಳ ಜೋಡಣೆ ಕಾರ್ಯ ನಡೆದಿದೆ. ಇನ್ನು ಒಂದು ವಾರದಲ್ಲಿ ವಿದ್ಯುತ್‌ ಸಮಸ್ಯೆ ಪರಿಹಾರವಾಗಲಿದೆ.
 ಶ್ರೀನಾಥ, ಕಂದಾಯ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next