ಸಿರುಗುಪ್ಪ: ನಗರದ ಹೊರವಲಯದಲ್ಲಿರುವ ತೆಕ್ಕಲಕೋಟೆ ಹೊನ್ನೂರಮ್ಮ ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಸಂಚಾರದಲ್ಲಿ ಸಮಸ್ಯೆ ಉಂಟಾಗಿದ್ದು, ಸರಿಯಾದ ಸಮಯಕ್ಕೆ ಕಾಲೇಜಿಗೆ ತೆರಳಲು ಆಗದಂತಾಗಿದೆ.
ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಾರಿಗೆ ಸಂಪರ್ಕದ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ವಿದ್ಯಾರ್ಥಿಗಳು ಬಸ್‌ಗಾಗಿ ನಗರದ ಬಸ್ ನಿಲ್ದಾಣದಲ್ಲಿ ಸುಮಾರು 2ಗಂಟೆ ಕಾಯುವ ಪರಿಸ್ಥಿತಿ ಒಂದು ಕಡೆಯಾದರೆ, ಕಾಲೇಜಿನಿಂದ ಸ್ವಗ್ರಾಮಗಳಿಗೆ ತೆರಳಲು ನಗರಕ್ಕೆ ಬರುವ ಈ.ಕ.ರಾ.ರ.ಸಂಸ್ಥೆಯ ಬಸ್‌ಗಳು ಸರಿಯಾಗಿ ನಿಲ್ಲಿಸದ ಕಾರಣ ವಿದ್ಯಾರ್ಥಿಗಳು ಪ್ರತಿನಿತ್ಯ ಸಮಸ್ಯೆ ಎದುರಿಸುವಂತಾಗಿದೆ.
ಬಳ್ಳಾರಿ ಕಡೆಯಿಂದ ಬರುವ ಬಸ್‌ಗಳಲ್ಲಿ ತೆಕ್ಕಲಕೋಟೆ ಕಡೆಯ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು ಕಾಲೇಜು ಹತ್ತಿರ ಕೆಲವು ಬಸ್‌ಗಳನ್ನು ನಿಲ್ಲಿಸಲಾಗುತ್ತಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಅಷ್ಟೇನು ಅನಾನುಕೂಲವಿಲ್ಲ. ಆದರೆ ಹಚ್ಚೊಳ್ಳಿ, ರಾರಾವಿ ಭಾಗದಿಂದ ಬರುವ ವಿದ್ಯಾರ್ಥಿಗಳು ನಗರದ ಬಸ್ ನಿಲ್ದಾಣದಿಂದ ಬಳ್ಳಾರಿ ಕಡೆಗೆ ತೆರಳುವ ಬಸ್‌ಗಳನ್ನು ಹತ್ತಿ ಕಾಲೇಜಿಗೆ ತೆರಳಬೇಕು, ಆದರೆ ಬೆಳಗ್ಗೆ 8ರಿಂದ 10ಗಂಟೆಯವರೆಗೆ ಬಳ್ಳಾರಿ ಕಡೆಗೆ ತೆರಳುವ ಬಸ್‌ಗಳ ಸಂಖ್ಯೆಯು ಕಡಿಮೆ ಇರುವುದರಿಂದ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ತೆರಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ತರಗತಿಗಳನ್ನು ತಪ್ಪಿಸಿಕೊಳ್ಳುವುದು ಸಾಮಾನ್ಯವಾಗಿದೆ.
ಅಲ್ಲದೆ ಕಾಲೇಜು ಬಿಟ್ಟ ನಂತರ ಹಚ್ಚೊಳ್ಳಿ, ರಾರಾವಿ ಮತ್ತು ತೆಕ್ಕಲಕೋಟೆಯ ಹಳ್ಳಿಗಳ ಕಡೆ ತೆರಳುವ ವಿದ್ಯಾರ್ಥಿಗಳಿಗೆ ಕೇವಲ ಬೆರಳೆಣಿಕೆಯಷ್ಟು ಬಸ್‌ಗಳು ಮಾತ್ರ ನಿಲ್ಲಿಸುತ್ತಿರುವುದರಿಂದ ಬಸ್‌ನಲ್ಲಿ ವಿದ್ಯಾರ್ಥಿಗಳನ್ನು ಕುರಿ ತುಂಬಿದಂತೆ ತುಂಬಲಾಗುತ್ತದೆ. ಆದರೂ ಎಲ್ಲಾ ವಿದ್ಯಾರ್ಥಿಗಳು ತಮ್ಮ ಸ್ವಗ್ರಾಮಗಳಿಗೆ ತೆರಳಲು ಬಸ್‌ಗಳನ್ನು ಕಾಯುವುದು ಅನಿವಾರ್ಯವಾಗಿದೆ. ನಿಲ್ಲಿಸುವ ಬಸ್‌ನಲ್ಲಿ ನೂಕಾಡಿಕೊಂಡು ವಿದ್ಯಾರ್ಥಿಗಳು ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದಾರೆ. ಇದರಿಂದಾಗಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಬಸ್‌ಗಾಗಿ ಕಾದು ಕಾದು ಸುಸ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೇವಲ ಬೆರಳೆಣಿಕೆಯಷ್ಟು ಬಸ್‌ಗಳನ್ನು ಕಾಲೇಜು ಹತ್ತಿರ ನಿಲ್ಲಿಸುತ್ತಿರುವುದರಿಂದ ಮನೆಗೆ ತೆರಳಲು ಮತ್ತು ಬಸ್ ನಿಲ್ದಾಣದಿಂದ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ಬಸ್ ಬಿಡದ ಕಾರಣ ನಿತ್ಯವೂ ಬಸ್‌ಗಾಗಿ ಪರದಾಡುವ ಪರಿಸ್ಥಿತಿ ನಮ್ಮ ಭಾಗದ ಹಚ್ಚೊಳ್ಳಿ, ರಾರಾವಿ ಕಡೆಯ ವಿದ್ಯಾರ್ಥಿಗಳದ್ದಾಗಿದೆ ಎಂದು ರಾರಾವಿ ಗ್ರಾಮದ ವಿದ್ಯಾರ್ಥಿ ರಾಮು ತಿಳಿಸಿದ್ದಾರೆ.