ಸಿರುಗುಪ್ಪ: ರಾಷ್ಟ್ರೀಯ ಹೆದ್ದಾರಿ (150ಎ) ಸಿರುಗುಪ್ಪ-ಹಳೇಕೋಟೆ ಮಧ್ಯದಲ್ಲಿರುವ ಬಾಗೇವಾಡಿ ಕಾಲುವೆಗೆ ಅಳವಡಿಸಿದ ತಡೆಗೋಡೆ ಕಂಬಿಯು ಮುರಿದು ಹೋಗಿ ಒಂದು ವರ್ಷ ಕಳೆದರೂ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮುರಿದ ಕಂಬಿ ತೆಗೆದು ಹೊಸ ಕಂಬಿ ಅಳವಡಿಸುವ ಕಾರ್ಯವನ್ನು ಮಾಡಿಲ್ಲ.
ಇದರಿಂದಾಗಿ ಇಲ್ಲಿ ಅಪಘಾತಗಳಾಗಿ ಪ್ರಯಾಣಿಕರು ಗಾಯಗೊಳ್ಳುವುದು ಸಾಮಾನ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿ 150ಎ ಸಿರುಗುಪ್ಪದಿಂದ ಬಳ್ಳಾರಿ ಕಡೆಗೆ ಸಂಚರಿಸುವಾಗ ಹಳೇಕೋಟೆ ಸಮೀಪ ಬಾಗೇವಾಡಿ ಕಾಲುವೆ ಹರಿಯುತ್ತಿದ್ದು, ಪ್ರಯಾಣಿಕರ ಸುರಕ್ಷತೆ ಹಿತದೃಷ್ಟಿಯಿಂದ ಹಿಂದೆ ಕಟ್ಟಲಾಗಿದ್ದ ತಡೆಗೋಡೆಗಳು ಅಪಘಾತಗಳಾದ ಸಂದರ್ಭದಲ್ಲಿ ಸಂಪೂರ್ಣವಾಗಿ ಜಖಂಗೊಂಡಿದ್ದರಿಂದ ಎಡಭಾಗದಲ್ಲಿ ಕಬ್ಬಿಣದ ಕಂಬಿಯನ್ನು ಬಲಭಾಗಕ್ಕೆ ತಡೆಗೋಡೆಯನ್ನು ನಿರ್ಮಿಸಲಾಗಿದೆ.
ಈ ಹೆದ್ದಾರಿಯಲ್ಲಿ ಪ್ರತಿನಿತ್ಯ 5000ಕ್ಕೂ ಹೆಚ್ಚಾ ವಾಹನಗಳು ಸಂಚರಿಸುತ್ತಿದ್ದು, ಬಾಗೇವಾಡಿ ಕಾಲುವೆ ಹತ್ತಿರ ಎಡಭಾಗದಲ್ಲಿ ಸುರಕ್ಷೆಯ ಕಂಬಿ ಮುರಿದಿರುವುದು ಕಾಣದೆ ಇರುವುದರಿಂದ ವಾಹನಗಳು ಸಂಚರಿಸುವಾಗ ಆಯ ತಪ್ಪಿ ಕಾಲುವೆಗೆ ಬಿದ್ದ ಘಟನೆಗಳು ಇಲ್ಲಿ ಸಾಮಾನ್ಯವಾಗಿ ನಡೆಯುತ್ತಿವೆ. ನೂರಾರು ಜನರು ಗಾಯಗೊಂಡಿದ್ದಾರೆ. ಆದರೂ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಇಲ್ಲಿ ನಡೆಯುವ ಅಪಘಾತಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಾಗೇವಾಡಿ ಕಾಲುವೆಗೆ ಅಳವಡಿಸಿದ್ದ ಸುರಕ್ಷೆಯ ಕಂಬಿ ಮುರಿದು ಹೋಗಿ ಒಂದು ವರ್ಷವಾದರೂ ಹೆದ್ದಾರಿ ಅಧಿಕಾರಿಗಳು ಇತ್ತ ಗಮನಹರಿಸದೇ ನಿರ್ಲಕ್ಷ್ಯ ತೋರಿಸುತ್ತಿರುವುದರಿಂದ ಅನೇಕರು ಈ ಭಾಗದಲ್ಲಿ ಬಿದ್ದು ಸತ್ತಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ. ಇನ್ನಾದರೂ ಅಧಿಕಾರಿಗಳು ಇಲ್ಲಿ ಸುರಕ್ಷೆಯ ಕಂಬಿ ಅಥವಾ ತಡೆಗೋಡೆಯನ್ನಾಗಲಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ತಾಲೂಕಿನ ತೆಕ್ಕಲಕೋಟೆಯ ನಿವಾಸಿ ಕೆ. ಹುಸೇನಪ್ಪ ಒತ್ತಾಯಿಸಿದ್ದಾರೆ.
ಪ್ರಯಾಣಿಕರ ಸುರಕ್ಷತೆ ಹಿತದೃಷ್ಟಿಯಿಂದ ಮುರಿದಿರುವ ಕಂಬಿಯನ್ನು ಬದಲಿಸಿ ಹೊಸ ಸುರಕ್ಷೆ ಕಂಬಿಯನ್ನು ಅಳವಡಿಸಲು ಶೀಘ್ರ ಕ್ರಮ ಕೈಗೊಳ್ಳುವುದಾಗಿ ರಾಷ್ಟ್ರೀಯ ಹೆದ್ದಾರಿ 150ಎ ಎಇಇ ರಾಘವೇಂದ್ರ ತಿಳಿಸಿದ್ದಾರೆ.