Advertisement

ದೇವದಾಸಿ ಮಹಿಳೆಯರ ಸಂಭ್ರಮ

04:08 PM Apr 26, 2019 | Naveen |

ಸಿರುಗುಪ್ಪ: ರಾಜ್ಯ ಸಮಾಜ ಕಲ್ಯಾಣ ಇಲಾಖೆಯಡಿ ದೇವದಾಸಿ ಮಹಿಳೆಯರ ಮಕ್ಕಳ ಮದುವೆ ಪ್ರೋತ್ಸಾಹಧನ ನೀಡುವ ಕುರಿತು ಕಾನೂನು ತಿದ್ದುಪಡಿ ಮಾಡಿರುವ ಸರ್ಕಾರದ ಕ್ರಮ ಸ್ವಾಗತಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಪದಾಧಿಕಾರಿಗಳು ನಗರದ ಗಾಂಧಿ ವೃತ್ತದಲ್ಲಿ ಸಂಭ್ರಮ ಆಚರಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷೆ ಕೆ.ಈರಮ್ಮ, ದೇವದಾಸಿ ಪದ್ಧತಿ ನಿರ್ಮೂಲನೆ ನಿಟ್ಟಿನಲ್ಲಿ ದೇವದಾಸಿ ಮಕ್ಕಳಿಗೆ ಮದುವೆಗೆ ಪ್ರೋತ್ಸಾಹ ನೀಡಲು ಸರ್ಕಾರ ತಿದ್ದುಪಡಿ ಮಾಡಿರುವುದು ಉತ್ತಮ ಕಾರ್ಯವಾಗಿದೆ. ಇದಕ್ಕಾಗಿ ಕಳೆದ 10 ವರ್ಷಗಳಿಂದ ಹೋರಾಟ ಮಾಡಲಾಗಿತ್ತು. ಹೋರಾಟಕ್ಕೆ ಸ್ಪಂದಿಸಿರುವುದು ಸಂತಸ ತಂದಿದೆ ಎಂದರು.

ಸರ್ಕಾರ ಕೇವಲ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಅಂತರ್ಜಾತಿ ವಿವಾಹಕ್ಕೆ ಮಾತ್ರ ಪ್ರೋತ್ಸಾಹಧನ ನೀಡುತ್ತಿತ್ತು. ಸಂಘದ ಹೋರಾಟದ ಫಲವಾಗಿ ರಾಜ್ಯ ಸರ್ಕಾರ 2018-19ನೇ ಸಾಲಿನ ಬಜೆಟ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಗುರುತಿಸಲ್ಪಟ್ಟ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೇವದಾಸಿಯರ ಗಂಡು ಮಕ್ಕಳು ಸ್ವಜಾತಿ ಅಥವಾ ಇತರೆ ಜಾತಿಯ ಹುಡುಗಿಯನ್ನು ಮದುವೆಯಾದರೆ 3 ಲಕ್ಷ ರೂ., ದೇವದಾಸಿಯರ ಹೆಣ್ಣು ಮಕ್ಕಳು ಸ್ವಜಾತಿ ಅಥವಾ ಇತರೆ ಜಾತಿಯ ಹುಡುಗನನ್ನು ಮದುವೆಯಾದರೆ 5 ಲಕ್ಷ ರೂ. ಪ್ರೋತ್ಸಾಹಧನ ನೀಡಲು ಕೈಗೊಂಡಿರುವ ಕ್ರಮ ಸ್ವಾಗತಾರ್ಹವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷೆ ಅಂಬಮ್ಮ, ಪ್ರಧಾನ ಕಾರ್ಯದರ್ಶಿ ದುರುಗಮ್ಮ, ಖಜಾಂಚಿ ಈರಮ್ಮ, ಮುಖಂಡರಾದ ಗಂಗಮ್ಮ, ಹುಲಿಗೆಮ್ಮ, ಕುರುವಳ್ಳಿ ಈರಮ್ಮ ಮತ್ತು ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next