Advertisement
ಚಿಕ್ಕಬಳ್ಳಾಪುರ: ತಮ್ಮ ಕಾಯಕ ನಿಷ್ಠೆ ಜತೆಗೆ ಪ್ರಾಮಾಣಿಕತೆಗೆ ಹೆಸರಾಗಿ ದೇಶ, ವಿದೇಶಗಳಲ್ಲಿ ಸರ್ವಶ್ರೇಷ್ಠ ಇಂಜಿನಿಯರ್ ಎಂಬ ಖ್ಯಾತಿಗೆ ಪಾತ್ರವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ದಶಕಗಳ ಹಿಂದೆಯೇ ವಿಶ್ವದ ಗಮನ ಸೆಳೆಯುವಂತೆ ಮಾಡಿದ ಭಾರತ ರತ್ನ ಮೋಕ್ಷಗುಂಡಂ ಸರ್.ಎಂ.ವಿಶ್ವೇಶ್ವರಯ್ಯನವರ 159ನೇ ಜನ್ಮ ಜಯಂತಿ ಭಾನುವಾರ ಸ್ವಗ್ರಾಮ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಅದ್ಧೂರಿಯಾಗಿ ನೆರವೇರಿತು.
Related Articles
Advertisement
ಶಾಲೆಯಿಂದ ಆರಂಭಗೊಂಡ ಮೆರವಣಿಗೆ ನಗರದ ಬಿಬಿ ರಸ್ತೆಯ ಮುಖಾಂತರ ಕಂದವಾರ ಅಲ್ಲಿಂದ ಮುದ್ದೇನಹಳ್ಳಿ ಸರ್‌ಎಂವಿ ಸಮಾಧಿ ಸ್ಥಳದವರೆಗೂ ಮೆರವಣಿಗೆ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಸಮಾಧಿ ಸ್ಥಳ ತೋರಿಸಿ ಅವರ ಸಾಧನೆಗಳನ್ನು ಬಿಂಬಿಸುವ ವಸ್ತು ಸಂಗ್ರಹಾಲಯವನ್ನು ತೋರಿಸಲಾಯಿತು. ಈ ಸಂದರ್ಭದಲ್ಲಿ ಸರ್ ಎಂ.ವಿ ಸ್ಮಾರಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಪ್ರಕಾಶ್, ಸದಸ್ಯರಾದ ನಾರಾಯಣಸ್ವಾಮಿ, ಎ.ವಿ.ಭೈರೇಗೌಡ, ಶ್ರೀನಿವಾಸ್ ಉಪಸ್ಥಿತರಿದ್ದರು.
ಸಮಾಧಿ ಸ್ಥಳಕ್ಕೆ ಆಕರ್ಷಕ ಪುಪ್ಪಾಲಂಕಾರ: ಸರ್ ಎಂ.ವಿ ಸಮಾಧಿ ಸ್ಥಳವನ್ನು ಹಾಗೂ ಸುತ್ತಮುತ್ತಲಿನ ಉದ್ಯಾನವನ್ನು ತೋಟಗಾರಿಕೆ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಸ್ವತ್ಛಗೊಳಿಸಿ ಬಗೆಬಗೆಯ ಆಕರ್ಷಕ ಪುಷ್ಪಗಳನ್ನು ಬಳಸಿ ಮಾಡಲಾಗಿದ್ದ ವಿಶೇಷ ಹೂವಿನ ಅಲಂಕಾರ ಸರ್‌ಎಂವಿ ಅಭಿಮಾನಿಗಳ ಹಾಗೂ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದ ಜನರನ್ನು ಆಕರ್ಷಿಸಿತು. ಸಮಾಧಿ ಸ್ಥಳದ ಸುತ್ತಲೂ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ವಿಟಿಯು ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾಳಜಿ ವಹಿಸಿ ಸಮಾಧಿಯನ್ನು ಅಲಕೃಂತಗೊಳಿಸಿದ್ದರು. ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿತ್ತು.
ಗಮನ ಸೆಳೆದ ಸರ್ವಧರ್ಮದ ಪ್ರಾರ್ಥನೆ: ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿರುವ ಶ್ರೀ ಸತ್ಯಸಾಯಿ ಲೋಕ ಸೇವಾ ಶಿಕ್ಷಣ ಸಂಸ್ಥೆಗಳ ನೂರಾರು ವಿದ್ಯಾರ್ಥಿಗಳು ಸರ್‌ಎಂವಿ ರವರ ಸಮಾಧಿ ಸ್ಥಳಕ್ಕೆ ಆಗಮಿಸಿ ದರ್ಶನ ಪಡೆದರು. ಈ ವೇಳೆ ವಿದ್ಯಾರ್ಥಿಗಳು ಶಿಸ್ತು ಬದ್ಧವಾಗಿ ನಡೆಸಿಕೊಟ್ಟ ಸರ್ವಧರ್ಮಗಳ ಸಾಮೂಹಿಕ ಪ್ರಾರ್ಥನೆ ಎಲ್ಲರ ಗಮನ ಸೆಳೆಯಿತು. ಕೊನೆಯಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ಸರ್‌ಎಂವಿಗೆ ರಾಷ್ಟ್ರದ ಗೌರವ ಸಲ್ಲಿಸಲಾಯಿತು. ಈ ವೇಳೆ ಸತ್ಯಸಾಯಿ ಗ್ರಾಮದ ಲೋಕ ಸೇವಾ ಶಿಕ್ಷಣ ಸಂಸ್ಥೆಯ ಆಧ್ಯಾಪಕರು ಹಾಗೂ ವಿಟಿಯು ವಿದ್ಯಾರ್ಥಿಗಳು ಸಹ ಆಗಮಿಸಿ ಸರ್ ಎಂ.ವಿಶ್ವೇಶ್ವರಯ್ಯ ಜನ್ಮ ಸ್ಥಳ ಹಾಗೂ ಸಮಾಧಿಯನ್ನು ವೀಕ್ಷಿಸಿದರು.
ಸರ್ ಎಂವಿ ಮ್ಯೂಸಿಯಂ ವೀಕ್ಷಣೆ: ಮುದ್ದೇನಹಳ್ಳಿಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ವಾಸ ಇದ್ದ ಮನೆಯನ್ನು ಮ್ಯೂಸಿಯಂ ಮಾಡಲಾಗಿದ್ದು, ಸರ್‌ಎಂವಿ ಬಳಸುತ್ತಿದ್ದ ಮೈಸೂರು ಪೇಟೆ, ಸೂಟುಬೂಟು, ಅವರಿಗೆ ಲಭಿಸಿದ್ದ ಭಾರತ ರತ್ನ ಪ್ರಶಸ್ತಿ ಫಲಕ, ಅವರು ಮೊದಲಿಗೆ ಬಿಡುಗಡೆಗೊಳಿಸಿದ್ದ ಸ್ಟೇಟ್ ಬ್ಯಾಂಕ್ ಮೈಸೂರು ಮತ್ತು ಕನ್ನಡ ಸಾಹಿತ್ಯ ಪರಿಷತ್‌ನ ಲಾಂಛನ, ಸರ್‌ಎಂವಿ ಹೆಸರಿನಲ್ಲಿ ಅಂಚೆ ಇಲಾಖೆ ಬಿಡುಗಡೆಗೊಳಿಸಿರುವ ಅಂಚೆ ಚೀಟಿಗಳನ್ನು ಮತ್ತು ಅವರ ಬಾಲ್ಯದ ನೆನೆಪಿನ ಬುತ್ತಿಯನ್ನು ಬಿಚ್ಚಿಡುವ ಅನೇಕ ಛಾಯಾಚಿತ್ರಗಳು, ಪತ್ರಿಕಾ ತುಣಕುಗಳನ್ನು ಸಾರ್ವಜನಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿದರು.