Advertisement
ಒಂದು ಕಾಲಕ್ಕೆ ಕೆಲಸ ಹುಡುಕಿಕೊಂಡು ಹೊರದೇಶಗಳಿಗೆ ಹೋಗುತ್ತಿದ್ದ ಕನ್ನಡಿಗರು, ವಾಪಸ್ಸು ಬರುವುದರ ಜೊತೆಗೆ ಕನ್ನಡ ಸಿನಿಮಾ ರಂಗಕ್ಕೆ ಧುಮುಕಿದ್ದಾರೆ. ಈಗಾಗಲೇ ಬೇರೆ ದೇಶದಲ್ಲಿರುವ ಕೆಲವರು ಬಂದು ಕನ್ನಡ ಚಿತ್ರ ನಿರ್ಮಾಣ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆಯೇ ಸೌರವ್ ಎನ್ನುವವರು “ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ’ ಎಂಬ ಚಿತ್ರ ಮಾಡಿ ಹೋಗಿದ್ದರು. ವಿದೇಶದಲ್ಲಿ ನೆಲೆಸಿರುವ ಖ್ಯಾತ ವೈದ್ಯ ನಾರಾಯಣ ಹೊಸ್ಮನೆ, “ಮುಖಪುಟ’ ಚಿತ್ರ ನಿರ್ಮಿಸಿದ್ದರು. ಹೀಗೆ ಆಗಾಗ ಒಬ್ಬೊಬ್ಬ ಅನಿವಾಸಿ ಕನ್ನಡಿಗರು ಇಲ್ಲಿಗೆ ಬಂದು ಕನ್ನಡ ಚಿತ್ರ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಆ ಸಂಖ್ಯೆ ಜಾಸ್ತಿಯಾಗುತ್ತಿದೆ.
“ಲಂಡನ್‌ನಲ್ಲಿ ಲಂಬೋದರ’, “ಶಿವು-ಪಾರು’, “ಉದ್ದಿಶ್ಯ’, “ಮಾರ್ಚ್ 22′, “ಮಹಿರ’, “ಹೊಸ ಕ್ಲೈಮ್ಯಾಕ್ಸ್’, “ಅನುಕ್ತ’ ಸೇರಿದಂತೆ ಇನ್ನೂ ಹಲವು ಚಿತ್ರ ಗಳನ್ನು ವಿದೇಶಿ ಕನ್ನಡಿಗರು ನಿರ್ಮಿಸುತ್ತಿದ್ದಾರೆ. ಈ ಪೈಕಿ “ಉದ್ದಿಶ್ಯ’,” ಹೊಸ ಕ್ಲೈಮ್ಯಾಕ್ಸ್’, “ಶಿವು-ಪಾರು’ ಚಿತ್ರಗಳು ಬಿಡುಗಡೆಯಾಗಿವೆ. ಎಲ್ಲವನ್ನೂ ಕೊಟ್ಟ ಕನ್ನಡಕ್ಕೆ ಸಣ್ಣದ್ದೊಂದು ಸೇವೆ ಅಂದುಕೊಂಡಿರುವ ವಿದೇಶಿ ಕನ್ನಡಿಗರು ಸೋಲು-ಗೆಲುವು ಪಕ್ಕಕ್ಕಿಟ್ಟು, ಕನ್ನಡ ಚಿತ್ರರಂಗಕ್ಕೊಂದು ಗುಣಮಟ್ಟದ ಚಿತ್ರ ಕೊಡುವ ಉತ್ಸಾಹದಲ್ಲಿದ್ದಾರೆ.
Related Articles
Advertisement
ಒಂದು ಸಿನಿಮಾ ಮಾಡುವ ಆಸೆ ಬಂದಿದ್ದೇ ತಡ, ಸಂತೋಷ್ ಅವರು ಲಂಡನ್‌ನಲ್ಲಿರುವ ಸುಮಾರು ಹದಿನೈದು ಕನ್ನಡಿಗರನ್ನು ಒಗ್ಗೂಡಿಸಿ, ಅವರೆಲ್ಲರ ನಿರ್ಮಾಣದ ಸಾಥ್‌ನಿಂದ “ಲಂಡನ್‌ನಲ್ಲಿ ಲಂಬೋದರ’ ಚಿತ್ರ ಮಾಡಿಸಿದ್ದಾರೆ. ಮುಖ್ಯವಾಗಿ ಇಲ್ಲಿ ಇಂಗ್ಲೆಂಡ್ ಸರ್ಕಾರದಲ್ಲಿ ಕೌನ್ಸಿಲರ್ ಆಗಿರುವ ಕನ್ನಡದ ಸುರೇಶ್ ಗಟ್ಟಾಪುರ ಕೂಡ ನಿರ್ಮಾಪಕರು. ಡಾ.ಕುಮಾರ್ ಸೇರಿದಂತೆ ಇಲ್ಲಿ ಅನೇಕ ಎಂಜಿನಿಯರ್, ಡಾಕ್ಟರ್ ಸೇರಿ ಚಿತ್ರಕ್ಕೆ ಹಣ ಹಾಕಿದ್ದಾರೆ. ದೂರವಿರುವ ಎಲ್ಲರಿಗೂ ಕನ್ನಡ ಮೇಲೆ ಅಪಾರ ಪ್ರೀತಿ. ಕನ್ನಡಕ್ಕೊಂದು ಒಳ್ಳೆಯ ಮತ್ತು ಹೊಸ ಬಗೆಯ ಚಿತ್ರ ಕೊಡಬೇಕೆಂಬ ಆಸೆ. ಶೇ.50 ರಷ್ಟು ಲಂಡನ್‌ನಲ್ಲೇ ಚಿತ್ರೀಕರಣವಾಗಿದೆ’ ಎಂಬುದು ನಿರ್ದೇಶಕರ ಹೇಳಿಕೆ.
ಇತ್ತೀಚೆಗೆ ಬಿಡುಗಡೆಯಾದ “ಉದ್ದಿಶ್ಯ’ ಕೂಡ ವಿದೇಶಿ ಕನ್ನಡಿಗನ ಚಿತ್ರ. ಹೇಮಂತ್‌ಕುಮಾರ್ ಈ ಚಿತ್ರದ ನಿರ್ದೇಶಕ, ನಾಯಕ ಕಮ್ ನಿರ್ಮಾಪಕ. ಕಳೆದ 13 ವರ್ಷಗಳಿಂದ ಅಮೇರಿಕಾದಲ್ಲಿದ್ದ ಹೇಮಂತ್‌ಗೆ ಕನ್ನಡ ಸಿನಿಮಾ ಅಂದರೆ ಅಚ್ಚುಮೆಚ್ಚು. ಒಂಬತ್ತು ವರ್ಷಗಳ ಕಾಲ ಅಮೇರಿಕಾದಲ್ಲಿ ದುಡಿದು ಕೂಡಿಟ್ಟ ಹಣವನ್ನು ಸಿನಿಮಾಗೆ ಹಾಕಿದ್ದಾರೆ. ಸಿನಿಮಾ ಪ್ರೀತಿ ಹೆಚ್ಚಿಸಿಕೊಂಡಿದ್ದ ಹೇಮಂತ್, ವಿದೇಶದಿಂದ ನೇರವಾಗಿ ಇಲ್ಲಿಗೆ ಬಂದು “ಉದ್ದಿಶ್ಯ’ ಮಾಡಿದ್ದಾರೆ. ಅವರು ಹಾಕಿದ ಹಣ ಹಿಂದಿರುಗಿಲ್ಲ.
“ಇಷ್ಟೊಂದು ಕೆಟ್ಟ ಅನುಭವ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ. ಇಷ್ಟು ವರ್ಷ ದುಡಿದು ಕೂಡಿಟ್ಟಿದ್ದ 1.25 ಕೋಟಿ ರೂ. ಸಿನಿಮಾಗೆ ಖರ್ಚಾಗಿದೆ. ಇಲ್ಲಿನ ಜನ ಸ್ಪಂದಿಸದಿರುವುದಕ್ಕೆ ಬೇಸರವಿದ್ದರೂ, ಕನ್ನಡ ಸಿನಿಮಾ ಮಾಡುವ ಆಸೆ ಇದೆ. ಸದ್ಯ ವಿದೇಶಕ್ಕೆ ಪುನಃ ಹೋಗುವ ಯಾವ ಯೋಚನೆಯೂ ಇಲ್ಲ. ಇಲ್ಲೇ ಇದ್ದು, ಕಳಕೊಂಡಿದ್ದನ್ನು ಹಿಂಪಡೆಯಬೇಕು. ಆದರೆ, ನಿರ್ಮಾಣ-ನಿರ್ದೇಶನ-ನಟನೆ ಈ ಮೂರನ್ನು ಒಟ್ಟಿಗೆ ಮಾಡಿದ್ದೇ ಎಡವಟ್ಟಾಯಿತು. ಮುಂದೆ ಇಲ್ಲೇ ಮತ್ತೂಂದು ಹೊಸಬಗೆಯ ಚಿತ್ರ ಮಾಡುವ ಛಲವಿದೆ’ ಎನ್ನುತ್ತಾರೆ ಹೇಮಂತ್.
ಅಮೆರಿಕದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕಳೆದ 20 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕ ಸುರೇಶ್ “ಶಿವು-ಪಾರು’ ಎಂಬ ಚಿತ್ರ ಮಾಡಿದ್ದರು. ನಟನೆ, ನಿರ್ಮಾಣ, ನಿರ್ದೇಶನ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಅವರೇ ಕಾಣಿಸಿಕೊಂಡಿದ್ದರು. ಸಿನಿಮಾ ಆಸೆ ಇಟ್ಟುಕೊಂಡಿದ್ದ ಸುರೇಶ್, ಕನ್ನಡಕ್ಕೊಂದು ಹೊಸ ಬಗೆಯ ಚಿತ್ರ ಕೊಡಬೇಕು ಅಂತ ಇಲ್ಲಿಗೆ ಬಂದು “ಶಿವು-ಪಾರು’ ಮಾಡಿದರು. ಒಂದು ಪ್ರಯತ್ನ ಮಾಡಿದ ಅವರಿಗೆ ಸಿಕ್ಕ ಫಲಿತಾಂಶ ಸೋಲು. ಅದಕ್ಕೆ ಹೆದರದ ಅವರು, ಲಾಭ-ನಷ್ಟದ ಬಗ್ಗೆ ತಲೆಕೆಡಿಸಿಕೊಳ್ಳದೆ ವರ್ಷಕ್ಕೊಂದು ಒಳ್ಳೆಯ ಚಿತ್ರ ಕೊಡುವ ಉತ್ಸಾಹದಲ್ಲಿದ್ದಾರೆ. “ಸ್ವಂತದ್ದೊಂದು ಯೂನಿಟ್ ಮಾಡಿಕೊಂಡಿದ್ದೇನೆ. ಅದರಿಂದ ಶೇ.50ರಷ್ಟು ಖರ್ಚು ಕಡಿಮೆಯಾಗುತ್ತದೆ. ಮುಂದಿನ ದಿನಗಳಲ್ಲಿ ಹೊಸ ಬಗೆಯ ಚಿತ್ರ ನಿರ್ಮಿಸುವ ಉದ್ದೇಶ ಇದೆ’ ಎನ್ನುತ್ತಾರೆ ಸುರೇಶ್.ಇವರಷ್ಟೇ ಅಲ್ಲ, “ರತ್ನಮಂಜರಿ’ ಚಿತ್ರತಂಡ ಕೂಡ ವಿದೇಶಿ ಕನ್ನಡಿಗರದ್ದೇ. ಅಮೆರಿಕಾ, ಯುರೋಪ್ ಹೀಗೆ ಒಂದೊಂದು ಭಾಗದಲ್ಲಿ ಕೆಲಸ ಮಾಡುತ್ತಿರುವ ಸಂದೀಪ್ ಕುಮಾರ್ ಹಾಗೂ ನಟರಾಜ್ ಹಳೇಬೀಡು ಅವರಿಗೆ ಹಾಲಿವುಡ್ ಶೈಲಿಯಲ್ಲಿ ಕನ್ನಡ ಚಿತ್ರ ಮಾಡುವ ಆಸೆ ಹುಟ್ಟಿಕೊಂಡಿದ್ದರಿಂದಲೇ “ರತ್ನಮಂಜರಿ’ ಚಿತ್ರ ಶುರುವಾಗಿದೆ. “ಮಹಿರ’ ಎಂಬ ಹೊಸಬರ ಚಿತ್ರ ಕೂಡ ಅದೇ ಸಾಲಿಗೆ ಸೇರುತ್ತದೆ. ಲಂಡನ್‌ನಲ್ಲೇ ಮೂರು ವರ್ಷಗಳ ಕಾಲ ಎಂಜಿನಿಯರ್ ಆಗಿದ್ದ ನಿರ್ದೇಶಕ ಮಹೇಶ್ ಗೌಡ “ಮಹಿರ’ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ. ಲಂಡನ್‌ನಲ್ಲಿರುವ ವಿವೇಕ್ ಕೊಡಪ್ಪ ಈ ಚಿತ್ರದ ನಿರ್ಮಾಪಕರು. ಕಥೆ ವಿಭಿನ್ನವಾಗಿದ್ದರಿಂದ ನಿರ್ಮಾಪಕರು ಕನ್ನಡದಲ್ಲಿ ಈ ಪ್ರಯತ್ನ ಮಾಡಿದ್ದಾರಂತೆ. ಇದರೊಂದಿಗೆ ಈಗಾಗಲೇ ಸದ್ದಿಲ್ಲದೆಯೇ ಶುರುವಾಗಿ, ಬಿಡುಗಡೆಯಾದ “ಹೊಸ ಕ್ಲೈಮ್ಯಾಕ್ಸ್’ ಚಿತ್ರ ಕೂಡ ವಿದೇಶಿ ಕನ್ನಡತಿ ಡಾ. ಶ್ಯಾಲಿ ನಿರ್ಮಿಸಿ, ನಿರ್ದೇಶಿಸಿದ್ದು. ಜರ್ಮನಿಯಲ್ಲೇ ಓದಿ, ಅಲ್ಲೇ ಬಿಝಿನೆಸ್ ಮಾಡಿಕೊಂಡು ನೆಲೆಸಿರುವ ಡಾ.ಶ್ಯಾಲಿ ಅವರಿಗೆ ಸಿನಿಮಾ ಆಸಕ್ತಿ ಹೆಚ್ಚಾಗಿ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಅದೇನೆ ಇರಲಿ, ವಿದೇಶದಲ್ಲಿ ನೆಲೆಸಿರುವ ಅನೇಕ ಕನ್ನಡಿಗರು ಈಗ ಗಾಂಧಿನಗರದ ಅಂಗಳಕ್ಕೆ ಜಿಗಿಯುತ್ತಿದ್ದಾರೆ. ಮೆಲ್ಲನೆ, ಹೊಸಬಗೆಯ ಚಿತ್ರ ಹಿಡಿದುಕೊಂಡು ಹೊಸ ಪ್ರತಿಭೆಗಳ ಬೆನ್ನುತಟ್ಟುವ ಪ್ರಯತ್ನದಲ್ಲಿದ್ದಾರೆ. ಅಂತಹವರ ಪ್ರಯತ್ನಕ್ಕೆ ಫಲ ಸಿಗಲಿ ಎಂಬುದೇ ಆಶಯ. – ವಿಜಯ ಭರಮಸಾಗರ