ವಾಡಿ: ಒಂದೆಡೆ ಮೊಟ್ಟೆ ವಿರೋಧಿಸಿ ಹೋರಾಟ ನಡೆಯುತ್ತಿದೆ. ಇನ್ನೊಂದೆಡೆ ಮಕ್ಕಳು ಶಾಲೆಯಲ್ಲಿ ಮೊಟ್ಟೆ ಮತ್ತು ಹಣ್ಣು ಹಂಚಿ ತಿನ್ನುತ್ತಿದ್ದಾರೆ. ಒಬ್ಬ ವಿದ್ಯಾರ್ಥಿನಿ ಕೈಯಲ್ಲಿ ಮೊಟ್ಟೆ ಹಿಡಿದು ಕುಳಿತರೆ, ಇನ್ನೋರ್ವ ವಿದ್ಯಾರ್ಥಿನಿ ಬಾಳೆಹಣ್ಣು ಹಿಡಿದುಕೊಂಡು ಬಿಸಿಯೂಟವನ್ನು ಒಂದೇ ತಟ್ಟೆಯಲ್ಲಿ ತಿನ್ನುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.
ಚಿತ್ತಾಪುರ ತಾಲೂಕಿನ ಕೊಂಚೂರು ಗ್ರಾಮದ ಸರಕಾರಿ ಹಿರಿಯರ ಪ್ರಾಥಮಿಕ ಶಾಲೆಯಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿ ವಿದ್ಯಾರ್ಥಿಗಳಿಬ್ಬರು ಪರಸ್ಪರ ಮುಖಾಮುಖಿಯಾಗಿ ಕುಳಿತು ಬಿಸಿಯೂಟ ಸವಿಯುತ್ತಿದ್ದ ಅಪರೂಪದ ದೃಶ್ಯ ಉದಯವಾಣಿ ಕಣ್ಣಿಗೆ ಬಿದ್ದಿದೆ.
ಶಾಲೆಯ 8 ನೇ ತರಗತಿಯ ಮಹೆರಾಬೇಗಂ ಮತ್ತು ಭಾಗ್ಯ ಈ ಸೌಹಾರ್ದತೆ ಮೆರೆದ ಮಕ್ಕಳು. ನಮ್ಮಿಬ್ಬರ ಆಹಾರದ ರುಚಿ ಭಿನ್ನವಾಗಿರಬಹುದು ಆದರೆ ನಮ್ಮ ಸ್ನೇಹ ಸೌಹಾರ್ದತೆ ರಕ್ತ ಸಂಬಂಧಕ್ಕಿಂತಲೂ ಮಿಗಿಲಾಗಿದೆ. ನಾವು ಜತೆಗೂಡಿಯೇ ಮೊಟ್ಟೆ ಹಣ್ಣು ಸೇವಿಸುತ್ತೇವೆ. ಇದರಿಂದ ನಮಗೇನೂ ಮುಜುಗರವಿಲ್ಲ. ಮೊಟ್ಟೆ ಕೈಬಿಡಬೇಡಿ. ಹಣ್ಣು ಕೂಡ ನಿಲ್ಲಿಸಬೇಡಿ. ಆಯ್ಕೆ ನಮಗೆ ಬಿಡಿ ಎನ್ನುತ್ತಾರೆ ಮುಗ್ದ ಮಕ್ಕಳು.
ಮೊಟ್ಟೆ ಮತ್ತು ಹಣ್ಣು ವಿತರಣೆ ಯೋಜನೆ ಆರಂಭವಾದ ಗಳಿಗೆಯಿಂದ ಶಾಲೆಯಲ್ಲಿ ಶೇ.10 ದಾಖಲಾತಿ ಹೆಚ್ಚಿದೆ. ಶಾಲೆಗೆ ಬಿಟ್ಟ ವಲಸೆ ಕುಟುಂಬಗಳ ಮಕ್ಕಳೂ ತರಗತಿಗೆ ಹಾಜರಾಗುತ್ತಿದ್ದಾರೆ.
-ಭೋಜಪ್ಪ ಜೇವೂರ ಮುಖ್ಯಶಿಕ್ಷಕ ಕೊಂಚೂರು ಶಾಲೆ
– ಮಡಿವಾಳಪ್ಪ ಹೇರೂರ