Advertisement

ಒಂದು ಮಾಲೀಕತ್ವಕ್ಕೆ ಒಂದೇ ನಳ ಸಂಪರ್ಕ?

03:29 PM Jul 19, 2022 | Team Udayavani |

ಹುಬ್ಬಳ್ಳಿ: ಅವಳಿನಗರದಲ್ಲಿ 24×7 ನೀರು ಪೂರೈಕೆ ಯೋಜನೆ ವಿಚಾರದಲ್ಲಿ ಎಲ್‌ ಆ್ಯಂಡ್‌ ಟಿ ಕಂಪೆನಿಯ ಕಾಮಗಾರಿ ವಿಳಂಬ, ಕಂಪೆನಿ ಅಡಿಯಲ್ಲಿ ಕೆಲಸಕ್ಕೆ ಜಲಮಂಡಳಿ ನೌಕರರ ಆಕ್ಷೇಪ-ಹಿಂದೇಟು, ನೀರಿದ್ದರೂ ಪೂರೈಕೆ ವ್ಯತ್ಯಯ, ರಹಸ್ಯ ನಿಯಮ-ಷರತ್ತುಗಳ ಗೊಂದಲ ನಡುವೆಯೇ ಎಲ್‌ ಆ್ಯಂಡ್‌ ಟಿ ಕಂಪೆನಿ ಒಂದು ಮಾಲೀಕತ್ವಕ್ಕೆ ಒಂದೇ ನಳದ ಸಂಪರ್ಕ, ಗಿಲಾವ್‌ ಮಾಡದ, ಬಣ್ಣದ ಹಚ್ಚದ ಮನೆಗಳಿಗೆ ನಳದ ಸಂಪರ್ಕ ಇಲ್ಲ ಎಂಬ ನಿಯಮ ವಿಧಿಸುತ್ತಿದೆ ಎಂಬ ಸುದ್ದಿ ಮತ್ತಷ್ಟು ಗೊಂದಲ-ಆತಂಕಕ್ಕೆ ದಾರಿ ಮಾಡಿದೆ. ಈ ಬಗ್ಗೆ ಪಾಲಿಕೆ ಹಾಗೂ ಕಂಪೆನಿ ಸ್ಪಷ್ಟನೆಯೊಂದಿಗೆ ಜನರ ದುಗುಡ ದೂರ ಮಾಡಬೇಕಾಗಿದೆ.

Advertisement

2003-04ರಲ್ಲಿ ಫ್ರಾನ್ಸ್‌ ಕಂಪೆನಿಯೊಂದು ನಿರಂತರ ನೀರು ಯೋಜನೆ ಅನುಷ್ಠಾನಕ್ಕೆ ಮುಂದಾಗಲಿದೆ ಎಂಬ ಸುದ್ದಿ ದೊಡ್ಡ ಸಂಚಲನ ಮೂಡಿಸಿತ್ತು. ನೀರಿನ ಖಾಸಗೀಕರಣ, ವಿದೇಶಿ ಕಂಪೆನಿ ಹಿಡಿತಕ್ಕೆ ಸ್ಥಳೀಯ ನೀರು ಪೂರೈಕೆ ಅಧಿಕಾರ, ಸಾರ್ವಜನಿಕ ನಳಗಳ ಸೌಲಭ್ಯ ರದ್ದು ಎಂಬಿತ್ಯಾದಿ ಆರೋಪ-ಹೋರಾಟದ ಗೊಂದಲಗಳ ನಡುವೆಯೇ ಕಾರ್ಯಾರಂಭ ಮಾಡಿತ್ತು. ಆರಂಭದಲ್ಲಿ ಹುಬ್ಬಳ್ಳಿಯಲ್ಲಿ ನಾಲ್ಕು, ಧಾರವಾಡದಲ್ಲಿ ನಾಲ್ಕು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನಗೊಂಡಿತ್ತು.

ಪ್ರಸ್ತುತ ಸುಮಾರು 32-33 ವಾರ್ಡ್‌ಗಳಲ್ಲಿ 24×7 ಸೌಲಭ್ಯ ಅನುಷ್ಠಾನಗೊಂಡಿದೆ. ಅವಳಿನಗರದ ಎಲ್ಲ 82 ವಾರ್ಡ್‌ಗಳಿಗೆ 24×7 ನೀರು ಪೂರೈಕೆ ಯೋಜನೆ ಜಾರಿಗೊಳಿಸಲು ಎಲ್‌ ಆ್ಯಂಡ್‌ ಟಿ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ನೀಡುವುದಕ್ಕೂ ವಿಳಂಬ ತೋರಲಾಗಿತ್ತಲ್ಲದೆ, ನಂತರವೂ ಕಂಪೆನಿ ಕಾರ್ಯಾರಂಭಕ್ಕೆ ಇನ್ನಷ್ಟು ವಿಳಂಬ ತೋರಿತ್ತು. ಇದೀಗ ಕಾಮಗಾರಿ ಆರಂಭಿಸಿ 8 ತಿಂಗಳು ಕಳೆದರೂ ಸ್ಪಷ್ಟ ರೀತಿಯಲ್ಲಿ ಸಾಗುತ್ತಿಲ್ಲ. ಗೊಂದಲ, ಸಮಸ್ಯೆಗಳೇ ಸದ್ದು ಮಾಡತೊಡಗಿವೆ. 24×7 ನೀರು ಪೂರೈಕೆ ಯೋಜನೆ ಕುರಿತಾಗಿ ಆಗಿರುವ ಒಡಂಬಡಿಕೆ ಪ್ರಮುಖ ಅಂಶಗಳೇನು ಎಂಬುದರ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿ ದೊರೆಯಬೇಕಾಗಿದೆ.

ಸಾರ್ವಜನಿಕ ನಳ ಬಂದ್‌?

ಹೊಸ ನಳದ ಸಂಪರ್ಕಕ್ಕೆ ಎಲ್‌ ಆ್ಯಂಡ್‌ ಟಿಯವರು “ಒಂದು ಮಾಲೀಕತ್ವಕ್ಕೆ ಒಂದೇ ನಳ’ ಷರತ್ತು ವಿಧಿಸುತ್ತಿದ್ದಾರೆ. ಒಬ್ಬ ಮಾಲೀಕ ಎರಡು ಇಲ್ಲವೆ ಮೂರು ಅಂತಸ್ತಿನ ಮನೆ ಕಟ್ಟಿಸಿ ಪ್ರತ್ಯೇಕ ನಳದ ವ್ಯವಸ್ಥೆ ಪಡೆಯಲು ನಿಗದಿತ ಶುಲ್ಕ ಪಾವತಿಗೆ ಸಿದ್ಧರಾದರೂ ನೀಡುತ್ತಿಲ್ಲ. ಸಾಲದೆಂಬಂತೆ ಗಿಲಾವ್‌ ಮಾಡದ ಮನೆಗೆ, ಬಣ್ಣ ಬಳಿಯದ ಮನೆಯಲ್ಲಿ ಜನರು ವಾಸವಾಗಿದ್ದರೂ ನಳದ ಸಂಪರ್ಕ ಕೊಡುವುದಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ ಸಾರ್ವಜನಿಕವಾಗಿ ಬಳಕೆಗೆಂದು ಇದ್ದ ನಳ ಬಂದ್‌ ಮಾಡುವಂತೆ ಸೂಚಿಸಲಾಗುತ್ತಿದೆ ಎಂಬ ವಿಷಯ ಮತ್ತೂಂದು ಆತಂಕಕ್ಕೆ ಕಾರಣವಾಗಿದೆ.

Advertisement

ಮಳೆಗಾಲದಲ್ಲೂ ವಾರಕ್ಕೊಮ್ಮೆ

ಎಲ್‌ ಆ್ಯಂಡ್‌ ಟಿಗೆ ಯೋಜನೆ ಗುತ್ತಿಗೆ ನೀಡಿದ ನಂತರದಲ್ಲಿ ನಾಲ್ಕೈದು ದಿನಕ್ಕೊಮ್ಮೆ ಇದ್ದ ನೀರು 8-10 ದಿನಕ್ಕೊಮ್ಮೆ ಆಗಿದೆ. ಕೆಲವೆಡೆ ನಾಲ್ಕೈದು ದಿನಕ್ಕೊಮ್ಮೆ ನೀಡುತ್ತಿದ್ದರೂ ಹಲವೆಡೆ ಈಗಲೂ ವಾರಕ್ಕೊಮ್ಮೆ ನೀರು ನೀಡಲಾಗುತ್ತಿದೆ. ಕಾರಣ ಕೇಳಿದರೆ ರಿಪೇರಿ ನೆಪ ಹೇಳಲಾಗುತ್ತಿದೆ. ಅಲ್ಲದೆ ಎಲ್ಲಿಯಾದರೂ ಪೈಪ್‌ ರಿಪೇರಿ ಎಂದು ತಿಳಿಸಿದರೆ ಎಲ್‌ ಆ್ಯಂಡ್‌ ಟಿ ಯವರು ವಿಳಂಬ ಧೋರಣೆ ತಾಳುತ್ತಿದ್ದಾರೆ ಎಂಬ ಆರೋಪವಿದೆ. ನೀರಿನ ಕೊರತೆ ಇಲ್ಲವಾದರೂ ವಾರಕ್ಕೊಮ್ಮೆ ನೀರು ಯಾಕೆ ಎಂಬ ಬಗ್ಗೆ ಪಾಲಿಕೆ ಗಂಭೀರವಾಗಿ ಚಿಂತಿಸಬೇಕಾಗಿದೆ. ‌

ಕಳಪೆ ಸಾಮಗ್ರಿ ಅಳವಡಿಕೆ ಆರೋಪ

ಎಲ್‌ ಆ್ಯಂಡ್‌ ಟಿ ಕಂಪೆನಿ ಅಳವಡಿಸುತ್ತಿರುವ ಸಾಮಗ್ರಿಗಳು ಉತ್ತಮ ಗುಣಮಟ್ಟದ್ದಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ. ಇನ್ನು ಕೆಲವು ಕಡೆಗಳಲ್ಲಿ ನೀರು ಸಂರ್ಪಕದ ತೊಂದರೆ ಉಂಟಾದರೆ ಆಯಾ ಬಡಾವಣೆ, ನಿವಾಸಿಗಳಿಗೆ ಸಾಮಗ್ರಿ ಬರುವುದಕ್ಕೆ ತಡವಾಗುತ್ತದೆ. ನೀವು ಸಾಮಗ್ರಿ ತಂದುಕೊಟ್ಟರೆ ಮರು ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಲಾಗುತ್ತಿದೆಯಂತೆ. ಪಾಲಿಕೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಮುಖ್ಯವಾಗಿ ಎಲ್‌ ಆ್ಯಂಡ್‌ ಟಿ ಕಂಪೆನಿಯವರು ವಾರ್ಡ್‌ವಾರು ಸಭೆ ನಡೆಸಿ ಜನರ ಗೊಂದಲ, ಶಂಕೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕಾಗಿದೆ.

ಹೆಚ್ಚಿನ ಮೀಟರ್‌ಗೆ ಅವಕಾಶ? ಹೆಚ್ಚಿನ ಮೀಟರ್‌ಗೆ ಅವಕಾಶ? ಈ ಹಿಂದೆ 24×7 ನೀರು ಪೂರೈಕೆ ಯೋಜನೆ ಅನುಷ್ಠಾನಗೊಂಡಾಗ ಒಂದು ಮನೆಗೆ ಒಂದೇ ನಳದ ಸಂಪರ್ಕ ನೀಡಲಾಗಿತ್ತು. ಆರಂಭದಲ್ಲಿ ಅಡೆತಡೆ ಇಲ್ಲದೆ ನೀರು ಸಿಗುತ್ತದೆ ಖುಷಿ ಇತ್ತಾದರೂ, ಐದಾರು ತಿಂಗಳ ನಂತರ ಬಂದ ಬಿಲ್‌ ನೋಡಿ ಆಘಾತವೂ ಆಗಿತ್ತು. ಯೋಜನೆಯ ನಿಯಮದಂತೆ 8 ಸಾವಿರ ಕಿಲೋ ಲೀಟರ್‌ವರೆಗೆ ಕನಿಷ್ಟ ದರ, ನಂತರದ ನೀರು ಬಳಕೆಯ ಪ್ರಮಾಣಕ್ಕೆ ಹೆಚ್ಚಿನ ದರ ವಿಧಿಸಲಾಗುತ್ತಿತ್ತು. ಇದು ಸಮಸ್ಯೆಯಾಗಿ ಪರಿಣಮಿಸಿತ್ತು. ಒಂದೇ ಮಾಲೀಕತ್ವದಲ್ಲಿ ಎರಡೂ¾ರು ಅಂತಸ್ತಿನ ಮನೆಗಳು, ಗುಂಪು ಮನೆಗಳಿಗೆ, ಅಪಾರ್ಟ್‌ಮೆಂಟ್‌ಗಳಿಗೆ ನೀರಿಗಿಂತ ಬಿಲ್‌ ಭಾರವೇ ಹೆಚ್ಚಿನದಾಗಿತ್ತು. ಸಾರ್ವಜನಿಕರ ಆಕ್ಷೇಪದ ಹಿನ್ನೆಲೆಯಲ್ಲಿ ಒಂದು ಸಂಪರ್ಕ ಪಡೆದರೂ, ಒಂದಕ್ಕಿಂತ ಹೆಚ್ಚಿನ ಮೀಟರ್‌ಗಳನ್ನು ಅಳವಡಿಸಿಕೊಳ್ಳಬಹುದು ಎಂದಾದ ಮೇಲೆ ನೀರಿನ ಬಳಕೆ ಹಂಚಿಕೆಯಾಗಿ ಬಿಲ್‌ನಲ್ಲಿ ಕಡಿಮೆಯಾಗಿತ್ತು. ಇದೀಗ ಎಲ್‌ ಆ್ಯಂಡ್‌ ಟಿ ಒಂದು ಮಾಲೀಕತ್ವಕ್ಕೆ ಒಂದೇ ನಳ ಸಂಪರ್ಕ ಎನ್ನುತ್ತಿದೆಯೋ ಅಥವಾ ಸಂಪರ್ಕ ಒಂದೇಯಾದರೂ ಒಂದಕ್ಕಿಂತ ಹೆಚ್ಚಿನ ಮೀಟರ್‌ ಅಳವಡಿಕೆಗೆ ಅವಕಾಶ ನೀಡುತ್ತೇವೆ ಎನ್ನುತ್ತದೆಯೋ ಎಂಬ ಗೊಂದಲಕ್ಕೆ ತೆರೆ ಎಳೆಯಬೇಕಾಗಿದೆ. ಜತೆಗೆ ಗಿಲಾವ್‌ ಮಾಡದ, ಬಣ್ಣ ಬಳಿಯದ ಮನೆಗಳಿಗೆ ನಳದ ಸಂಪರ್ಕ ಇಲ್ಲ ಎಂಬ ಸುದ್ದಿಯ ಬಗ್ಗೆಯೂ ಸ್ಪಷ್ಟನೆ ನೀಡಬೇಕಾಗಿದೆ.

-ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next