Advertisement

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

01:28 AM Dec 13, 2024 | Team Udayavani |

“ಒಂದು ರಾಷ್ಟ್ರ; ಒಂದು ಚುನಾವಣೆ’ ಕುರಿತಂತೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳಿಗೆ ಎರಡು ತಿಂಗಳ ಹಿಂದೆ ತನ್ನ ಒಪ್ಪಿಗೆಯ ಮೊಹರು ಒತ್ತಿದ್ದ ಕೇಂದ್ರ ಸಚಿವ ಸಂಪುಟ ಗುರುವಾರ ಈ ಬಗೆಗಿನ ಮಸೂದೆಗೆ ಒಪ್ಪಿಗೆ ನೀಡಿದೆ. “ಒಂದು ರಾಷ್ಟ್ರ; ಒಂದು ಚುನಾವಣೆ’ ಕುರಿತಾದ ಕರಡು ಮಸೂದೆ ಈಗ ಸಂಸತ್ತಿನ ಹೆಬ್ಟಾಗಿಲಲ್ಲಿ ನಿಂತಿದೆ. ಇದು ದೇಶದ ಪ್ರಜಾತಂತ್ರ ವ್ಯವಸ್ಥೆಯಲ್ಲಿ “ಹೊಸ ಹೆಜ್ಜೆ’ಯೆನಿಸಿ ಸಾಂವಿಧಾನಿಕ ಪಥದಲ್ಲಿ, ವಿಶ್ವದ ಪ್ರಪ್ರಥಮ ರಾಜಕೀಯ ಪ್ರಯೋಗ ಎನಿಸಲಿದೆ. ಪ್ರಜಾತಂತ್ರದಲ್ಲಿ ಜನಮನ ಮೆಚ್ಚಿದ ಕೇಂದ್ರ ಹಾಗೂ ರಾಜ್ಯಗಳ ಪ್ರತಿನಿಧಿಗಳನ್ನು ಏಕಕಾಲದಲ್ಲಿ ಆರಿಸುವ ಪ್ರಕ್ರಿಯೆ ಹೇಗೆ ಹಾಗೂ ಎಷ್ಟರಮಟ್ಟಿಗೆ “ಸುಧಾರಿತ ಜನತಂತ್ರ’ದ ಹೆಚ್ಚುಗಾರಿಕೆ ಎಂಬುದನ್ನು ಇನ್ನಷ್ಟೇ ಒರೆಗೆ ಹಚ್ಚಬೇಕಾಗಿದೆ.

Advertisement

ಕೇಂದ್ರದ ಚುನಾವಣೆಯಲ್ಲಿ ರಕ್ಷಣೆ, ವಿದೇಶ ವ್ಯವಹಾರ, ಯುದ್ಧಶಾಂತಿ, ರಾಷ್ಟ್ರೀಯ ಆರ್ಥಿಕ ಪ್ರಗತಿ, ಕೈಗಾರಿಕ ಕ್ರಾಂತಿ… ಹೀಗೆ ಹತ್ತು ಹಲವು ಆದ್ಯತೆ, ಸಾಧ್ಯತೆಗಳು ರಂಗ ಮಂಚದಲ್ಲಿರುತ್ತವೆ. ಅದೇ ರೀತಿ ಆಯಾಯ ರಾಜ್ಯದ ಜನಮನದಲ್ಲಿನ ಸಾಮಾಜಿಕ ಹಿನ್ನೆಲೆ, ಪ್ರಾದೇಶಿಕತೆಯ ಮೊಹರು ಇವೆಲ್ಲ ತೀರಾ ವಿಭಿನ್ನವಾಗಿರುವಿಕೆ ಎದ್ದು ಕಾಣುವಂತಿರುತ್ತದೆ.

ಇವೆಲ್ಲದರ ಮಧ್ಯೆ “ಆನೆ ಹೋದದ್ದೇ ದಾರಿ’ ಎನ್ನುವ ತೆರದಲ್ಲಿ, ತೆರೆದಿಟ್ಟ ಸಾಂವಿಧಾನಿಕ ಪುಟಗಳಲ್ಲಿ ಹಲವು ತಿದ್ದುಪಡಿಗಳ ಸರಣಿಯೇ ತುಂಬಿಕೊಳ್ಳಲಿದೆ. ಕೇಂದ್ರದ ರಾಜ್ಯಸಭೆ ಹಾಗೂ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ 5 ವಿಧಾನ ಪರಿಷತ್‌ಗಳ ಚುನಾವಣೆ ಇಲ್ಲಿ ಅಬಾಧಿತ. ಇಲ್ಲಿನ ಪ್ರಶ್ನೆ ಸಾರ್ವತ್ರಿಕ ಚುನಾವಣೆಗಳು; ಕೇಂದ್ರ- ರಾಜ್ಯಗಳ ಕೆಳಸದನ ಅಥವಾ ಪ್ರಥಮ ಸದನಗಳ ಜನಪ್ರತಿನಿಧೀಕರಣದ ಸಂಬಂಧವಾಗಿರುತ್ತದೆ, ಪ್ರಚಲಿತ ಅಗಾಧ ಚುನಾವಣ ವೆಚ್ಚ ಹಾಗೂ ಮಾನವ ಗಂಟೆಗಳ ಪೋಲುಗೊಳ್ಳುವಿಕೆಯನ್ನು ಹೃಸ್ವಗೊಳಿಸುವಲ್ಲಿ ಇದೊಂದು ಪ್ರಯೋಗವೆನಿಸಿದೆ. ಪ್ರಥಮವಾಗಿ ನಮಗೆ ಇಲ್ಲಿ ಎದುರಾಗಿರುವುದು ಸಂವಿಧಾನದ 83(2) ನೇ ವಿಧಿ. ಇದರ ಒಕ್ಕಣೆಯಂತೆ “ಒಂದೊಮ್ಮೆ ಮುಂಚಿತವಾಗಿ ವಿಸರ್ಜನೆಗೊಳ್ಳದಿದ್ದರೆ, ಪ್ರಥಮ ದಿನದಿಂದ 5 ವರ್ಷದ ವರೆಗೆ ಲೋಕಸಭೆಯ ಅವಧಿ ಇರುತ್ತದೆ. ಹಾಗೂ ತುರ್ತು ಪರಿಸ್ಥಿತಿಯ ಸಂದರ್ಭ ಮಾತ್ರ ಒಂದು ಬಾರಿಗೆ ಒಂದು ವರ್ಷಕ್ಕೆ ಮೀರದಂತೆ ಈ ಸಭೆಯ ಅವಧಿಯನ್ನು ವಿಸ್ತರಿಸಬಹುದು. ಹಾಗೂ ಆ ವಿಷಮ ಪರಿಸ್ಥಿತಿ ಮುಗಿದು ಆರು ತಿಂಗಳಿಗೂ ಮೀರಿ ಚುನಾವಣೆ ಮುಂದೂಡುವಂತಿಲ್ಲ’.

ಈ “ತೋರಣ ಬಾಗಿಲ’ ಮೂಲಕವೇ ಎಲ್ಲ ರಾಜ್ಯಗಳ ವಿಧಾನಸಭೆ ಹಾಗೂ ಕೇಂದ್ರಾಡಳಿತ ಪ್ರದೇಶ ಸಭೆಗಳ ಚುನಾವಣ ಪರಿವೀಕ್ಷಣ ವ್ಯವಸ್ಥೆ ಹಾದು ಬರಬೇಕಾಗಿದೆ. ಸರಳವಾಗಿ ಹೇಳುವುದಾದರೆ, 5 ವರ್ಷಗಳ ಲೋಕಸಭಾ ಅವಧಿಗನುಗುಣವಾಗಿ ಒಂದೊಮ್ಮೆ ಮುಂಚಿತವಾಗಿ ಸುಭದ್ರ ಕೇಂದ್ರ ಸರಕಾರ ರಚನೆ ಸಾಧ್ಯವೆನಿಸದೆ, ಲೋಕಸಭೆ ವಿಸರ್ಜನೆಗೊಂಡರೆ ಅಥವಾ ರಾಷ್ಟ್ರೀಯ ತುರ್ತು ಪರಿಸ್ಥಿತಿಗೆ ಸ್ಪಂದಿಸಿ, ಅವಧಿ ಮುಂದುವರಿದರೆ ಹೇಗೆ? ಆಗ ಅದೇ ಹೆಜ್ಜೆ ಪ್ರಸಕ್ತ 28 ವಿಧಾನಸಭೆಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳು “ಸಪ್ತಪದಿ’ ತುಳಿಯಬೇಕು. ಹಾಗೂ ಈ ಕೇಂದ್ರ ಮತ್ತು ರಾಜ್ಯ “ಜುಗಲ್‌ ಬಂದಿ’ ಚುನಾವಣ ಪರ್ವ ಮುಗಿಸಿ 100 ದಿನಗಳ ಒಳಗಾಗಿ ಸ್ಥಳೀಯ ಸಂಸ್ಥೆಗಳು ಚುನಾವಣೆಯ ರಂಗೇರಿಸಿಕೊಂಡು ನೂತನ ಜನತಂತ್ರೀಯ ಚೌಕಟ್ಟುಗಳನ್ನು ದೇಶದಾದ್ಯಂತ ರಚಿಸಬೇಕು ಇದೊಂದು ಸ್ವಾಗತಾರ್ಹ ಹೆಜ್ಜೆ. ಇಲ್ಲೊಂದು ಗಮನೀಯ ಅಂಶವೆಂದರೆ ಇಲ್ಲಿ ನಿಖರವಾಗಿ ಸಂವಿಧಾನ ವಿಧಿಗಳು ಸ್ಥಳೀಯ ಸಂಸ್ಥೆಯನ್ನು ಆಯಾಯ ರಾಜ್ಯ ಸರಕಾರಗಳ ಮುಷ್ಟಿಯಿಂದ ಒಂದಿನಿತು ನಿರಾಳವಾಗಿಸುತ್ತದೆ. ಏಕೆಂದರೆ ರಾಜ್ಯ ಸರಕಾರಗಳು ತಂತಮ್ಮ ಮರ್ಜಿ, ಮುತು ವರ್ಜಿಯ ಕೋಷ್ಟಕಗಳ ಅನುಸಾರ ಅನಿರ್ದಿ ಷ್ಟವಾಗಿ ಸ್ಥಳೀಯ ಸರಕಾರಗಳ ಚುನಾಯಿತ ಪ್ರತಿನಿಧಿತ್ವಕ್ಕೆ ಅಡ್ಡ ಪರದೆ ಒಡ್ಡುವಂತಿಲ್ಲ.

ಸರಿ, ಇನ್ನು 28 ರಾಜ್ಯಗಳ ವಿಧಾನಸಭೆಗಳ ಹಾಗೂ 8 ಕೇಂದ್ರಾಡಳಿತ ಪ್ರತಿನಿಧಿಗಳ “ಸಾಂವಿಧಾನಿಕ ಕಥೆ ಏನು?’ ಇಲ್ಲೇ ಮುಂದಿನ ಕಥಾನಕ ಆರಂಭಗೊಳ್ಳುವುದು. ಒಂದೊಮ್ಮೆ “ತ್ರಿಶಂಕು ಸ್ಥಿತಿಯ’ ಲೋಕಸಭೇ, ಡೋಲಾಯಮಾನ ಕೇಂದ್ರ ಸಚಿವ ಸಂಪುಟ ಪ್ರಧಾನಿ ರಾಜೀನಾಮೆ ಪರ್ವ, ಇವೆಲ್ಲ ಬರಸಿಡಿಲು ಹೊಸದಿಲ್ಲಿ ಸರಕಾರದ ಬಗೆಗೆ ಎರಗುವುದಿಲ್ಲ ಎಂದು ಹೇಳಲು ಆಗುವುದಿಲ್ಲ. ಹೀಗೆ ಒಂದೇ ವಾಕ್ಯದಲ್ಲಿ ಎರಡು “ನಕಾರ’ಗಳನ್ನು ಪೋಣಿಸಿ, ಬರಲಿರುವ ನಾಳೆಗಳ ಸಾಧ್ಯತೆಗಳಿಗೆ ದಿಡ್ಡಿಬಾಗಿಲು ತೆರೆದು ಬಿಟ್ಟರೆ ರಾಜ್ಯ ವಿಧಾನಸಭೆಗಳ ಗತಿ-ಸ್ಥಿತಿ ಏನು? 5 ಸಂವತ್ಸರಗಳ ಅವಧಿಯಲ್ಲಿ ರಾಜ್ಯದ ರಾಜಧಾನಿಯಲ್ಲಿ ಬೀಡು ಬಿಟ್ಟ ಶಾಸಕರ ಗಡಣದ ಅವಸ್ಥೆ ಏನು ? ಅಲ್ಲಿನ ಸಚಿವ ಸಂಪುಟ, ಮುಖ್ಯಮಂತ್ರಿಗಳು, ವಿವಿಧ ಸಮಿತಿಗಳು, ಹತ್ತಾರು ಕೃಪಾಪೋಷಿತ ಕಾರ್ಪೊರೇಶನ್‌ಗಳು, ಅಕಾಡೆಮಿಗಳು- ಹೀಗೆ ರಾಜ್ಯಗಳ ಸರಣಿ ವ್ಯವಸ್ಥೆಯ ಅಡಿಪಾಯವೇನು? ಹೊಸದಿಲ್ಲಿಯ “ಲೋಕಸಭಾ ಚುನಾವಣೆಯ ಜತೆಜತೆಗೇ ವಿಧಾನಸಭೆಯೂ ತತ್‌ಕ್ಷಣ ವಿಸರ್ಜಿತಗೊಂಡು ಚುನಾವಣೆಯ ಮೂಲಕ ನೂತನ ವಿಧಾನ ಸಭೆಗಳು ರೂಪುಗೊಳ್ಳತಕ್ಕದ್ದು ಎಂಬುದಾಗಿ 172ನೇ ವಿಧಿ ತಿದ್ದುಪಡಿಗೆ ಒಳಗಾಗ ಬೇಕಾಗುತ್ತದೆ. ಅದೇ ರೀತಿ ಒಂದನೇ ಶೆಡ್ನೂಲ್‌ನಲ್ಲಿ ಪಟ್ಟಿ ಮಾಡಿದ ವಿಧಾನಸಭೆಗಳನ್ನು ಹೊಂದಿದ ಹೊಸದಿಲ್ಲಿ, ಜಮ್ಮು- ಕಾಶ್ಮೀರ, ಪುದುಚೇರಿಯಂತಹ ಅಂತೆಯೇ ಉಳಿದ ಕೇಂದ್ರಾಡಳಿತ ಸಮಿತಿಗಳೂ ಯಥಾವತ್ತಾಗಿ ವಿಸರ್ಜಿತಗೊಳ್ಳಬೇಕು. ಹೀಗೆ ದಿಢೀರನೆ ಮಾನ್ಯ ಸದಸ್ಯರ ಅಂತೆಯೇ ಸರಕಾರಗಳ ಅವಧಿ ಪೂರ್ವವಿಸರ್ಜನೆ “ಪರಸ್ಪರ ಸಹಕಾರಿ ಸಂಯುಕ್ತ ರಾಜ್ಯ ಪದ್ಧತಿ’ ಯ ಕೇಂದ್ರ- ರಾಜ್ಯ ಸಾಧ್ಯತೆಗೆ ಬೃಹತ್‌ ಪ್ರಶ್ನಾರ್ಥಕ ಚಿಹ್ನೆ ಮೂಡಿಸಲಿದೆ.

Advertisement

ಅದೇ ರೀತಿ 172ನೇ ವಿಧಿಯ ಅನುಸಾರ 5 ವರ್ಷಗಳ ಹರುಷ ರಾಜ್ಯ ವಿಧಾನ ಸಭಾಂಗಣದಲ್ಲಿ ಮುದುಡಿದಾಗ, ಆಗ ಎರಡು ಆಯ್ಕೆ ಎದ್ದು ಬಿಡುತ್ತದೆ- 1) ರಾಷ್ಟçಪತಿ ಆಳ್ವಿಕೆ; ಹಾಗೂ 2) ಉಳಿದ ಅವಧಿಗೆ ಚುನಾವಣೆ ಸೀಮಿತಗೊಳಿಸಬೇಕು. ಉದಾಹರಣೆ 2 ವರ್ಷ ಅಥವಾ 3 ವರ್ಷಕ್ಕೆಂದೇ ಎಂ.ಎಲ್‌.ಎ. ಗಳ ಚುನಾವಣೆ ನಡೆಯ ಬೇಕಾಗುತ್ತದೆ. ಇಲ್ಲಿಯೂ 356ನೇ ವಿಧಿಯ ತುರ್ತು ಪರಿಸ್ಥಿತಿಯ ವರ್ಣನೆ ತುಂಬಿದ “ರಾಷ್ಟ್ರಪತಿಯವರ ಆಳ್ವಿಕೆ’ ಅಥವಾ ಸೀಮಿತ ಮರು ಚುನಾವಣಾಸ್ಪದವಾಗಿ 172ನೇ ವಿಧಿಗೆ ತಿದ್ದುಪಡಿ ಆವಶ್ಯಕ. ಏಕೆಂದರೆ, ಇಲ್ಲೆಲ್ಲ ಸಾಂವಿಧಾನಿಕ ನಿಖರತೆ ತುಂಬಿ ನಿಲ್ಲ ಬೇಕಾದುದು ಭವಿಷ್ಯದ ಆವಶ್ಯಕತೆ. ಅಂತಹ ಖಚಿತ ಶಬ್ದಗಳ ಹೊರತಾಗಿಯೂ, “ಏಕ ದೇಶ ಏಕ ಚುನಾವಣೆ’ ಲಡಾಕ್‌ನಿಂದ ರಾಮೇಶ್ವರ ದವರೆಗಿನ, ಅಂಡಮಾನ್‌ನಿಂದ ಲಕ್ಷದ್ವೀಪ ವರೆಗಿನ ವಿಶಾಲ ಭಾರತದಲ್ಲಿ ಅತ್ಯಂತ ರೋಚಕ, ಅದೇ ರೀತಿ ಸವಾಲಿನ ಸಾಂವಿಧಾನಿಕ ಪ್ರಯೋಗ ಎನಿಸಲಿದೆ.

ಕೇಂದ್ರ ಸಚಿವ ಸಂಪುಟ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗೆಗಿನ ಮಸೂದೆಗೆ ತನ್ನ ಒಪ್ಪಿಗೆಯನ್ನು ನೀಡಿದೆ. ಈ ಸಂಬಂಧ ಅವಶ್ಯವಿರುವ ಸಂವಿಧಾನ ತಿದ್ದುಪಡಿ ಮಸೂದೆಗಳನ್ನು ಸಂಸತ್‌ನ ಮುಂದಿರಿಸಲು ನಿರ್ಧರಿಸಿದೆ. ಆದರೆ ಕೋವಿಂದ್‌ ಸಮಿತಿಯ ಇನ್ನೊಂದು ಪ್ರಮುಖ ಶಿಫಾರಸಾಗಿರುವ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆ ಜತೆಜತೆಗೇ ಹಂತಹಂತಗಳಲ್ಲಿ ಸ್ಥಳೀಯಾಡಳಿತ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳಿಗೂ ಏಕಕಾಲದಲ್ಲಿ ಚುನಾವಣೆ ನಡೆಸುವ ಕುರಿತಂತೆ ಕೇಂದ್ರ ಸರಕಾರ ಇನ್ನೂ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಆದರೆ ಈ ಕುರಿತಂತೆ ಕಾನೂನು ಜಾರಿಗೊಳಿಸಲು ಶೇ. 50ರಷ್ಟು ರಾಜ್ಯಗಳ ಸಮ್ಮತಿ ಪಡೆದುಕೊಳ್ಳುವುದು ಕೇಂದ್ರ ಸರಕಾರಕ್ಕೆ ಅನಿವಾರ್ಯವಾಗಲಿದೆ.

-ಡಾ| ಪಿ.ಅನಂತಕೃಷ್ಣ ಭಟ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next