Advertisement

ಲಂಬಾಣಿ ಮತ ಸೆಳೆಯಲು ತೆಲುಗು ಸಿಂಗರ್‌ ಮಂಗ್ಲಿ ಮೋಡಿ!

01:30 PM Apr 13, 2021 | Team Udayavani |

ಮಸ್ಕಿ: ಉಪಚುನಾವಣೆ ಅಖಾಡದಲ್ಲಿ ಇದುವರೆಗೂ ರಾಜಕೀಯ ಸ್ಟಾರ್‌ ಕ್ಯಾಂಪೇನರ್‌ಗಳನ್ನು ಬಳಸಿಕೊಂಡು ಮತಕೊಯ್ಲು ನಡೆಸಿದ ಬಿಜೆಪಿ ಈಗ ಮತ್ತೂಂದು ಪ್ಲ್ಯಾನ್‌ ಮಾಡಿದೆ. ಕ್ಷೇತ್ರದಲ್ಲಿರುವ ಲಂಬಾಣಿ ಮತಗಳ ಸೆಳೆಯುವುದಕ್ಕಾಗಿ ತೆಲುಗು ಗಾಯಕಿ ಮಂಗ್ಲಿ ಮೂಲಕ ಪ್ರಚಾರ ನಡೆಸಲು ಮುಂದಾಗಿದೆ.

Advertisement

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಕಳೆದ ಮೂರು ಅವಧಿಯಿಂದಲೂ ಮಸ್ಕಿ ಕ್ಷೇತ್ರದ ಶಾಸಕರಾಗಿದ್ದಾರೆ. 2008ರಲ್ಲಿ ಬಿಜೆಪಿಯಿಂದ, 2013ರಲ್ಲಿ ಕಾಂಗ್ರೆಸ್‌ ಮತ್ತು 2018ರಲ್ಲೂ ಕಾಂಗ್ರೆಸ್‌ ಪಕ್ಷದಿಂದ ಚುನಾಯಿತರಾಗಿದ್ದಾರೆ. ಆದರೆ, 2018ರಲ್ಲಿ ವಿಜಯ ಸಾಧಿಸಿದ ಕೆಲವೇ ದಿನಗಳಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರಿದ್ದಾರೆ.

ಹೀಗಾಗಿ ತೆರವಾಗಿದ್ದ ಈ ಶಾಸಕ ಸ್ಥಾನಕ್ಕೆ ಉಪ ಚುನಾವಣೆ ನಡೆದಿದೆ. ಕ್ಷೇತ್ರದಲ್ಲಿ ಪ್ರತಾಪಗೌಡ ಪಾಟೀಲ್‌ ವಿರುದ್ಧ ಅಲೆ ಹೆಚ್ಚಾಗಿದ್ದು ಇದನ್ನು ಶಮನ ಮಾಡುವುದಕ್ಕಾಗಿ ಮತ್ತು ಶತಾಯ ಗತಾಯ ಪ್ರತಾಪಗೌಡ ಪಾಟೀಲ್‌ ಗೆಲುವಿಗಾಗಿ ಬಿಜೆಪಿಯಲ್ಲಿ ರಾಜ್ಯ ಸ್ಟಾರ್‌ ಪ್ರಚಾರಕರೆಲ್ಲ ಆಗಮಿಸಿ ಮತಯಾಚನೆ ಮಾಡಿ ಹೋಗಿದ್ದಾರೆ. ಇನ್ನು ಹಲವರು ಇಲ್ಲಿಯೇ ಠಿಕಾಣಿ ಹೂಡಿ ಪ್ರಚಾರ ನಡೆಸಿದ್ದಾರೆ. ಜಾತಿವಾರು, ಸಮುದಾಯವಾರು ಎಲ್ಲ ಬಗೆಯ ಸ್ಟ್ರಾಟರ್ಜಿಗಳನ್ನು ಪ್ರಯೋಗಿಸಿ ಮತಯಾಚನೆ ಮಾಡಿದ್ದಾರೆ. ಆದರೆ,ಈಗ ತೆಲುಗು ಗಾಯಕಿ ಪದ್ಮಾವತಿ ರಾಠೊಡ ಅಲಿಯಾಸ್‌ ಮಂಗ್ಲಿ ಮೂಲಕ ಮತದಾರರನ್ನು ಸೆಳೆಯುವ ಕಸರತ್ತು ನಡೆಸಿದೆ. ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾದ ರಾಬರ್ಟ್‌ ಸಿನಮಾದ “ಕಣ್ಣು ಹೊಡೆಯಾಕ ಮೊನ್ನೆ ಕಲಿತೇನಿ….’ ಹಾಡಿನ ತೆಲುಗು ಅನುವಾದ “ಕಣ್ಣೇ ಅದಿರಿಂದಿ ಪೈಟೆ ಚದರಿಂದ’ಹಾಡು ಹಾಡುವ ಮೂಲಕ ಫೇಮಸ್‌ ಆಗಿದ್ದಾರೆ.

ಇವರು ಹಾಡಿದ್ದ ಹಾಡು ಎಲ್ಲ ವರ್ಗದ ಸೀನಿಪ್ರೀಯರನ್ನು ಆಕರ್ಷಿಸಿದ್ದು, ಇದೇ ಉಮೇದಿಗೆ ಮಸ್ಕಿ ಅಖಾಡದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲು ಬಳಸಿಕೊಳ್ಳಲಾಗುತ್ತಿದೆ.

ಲಂಬಾಣಿ ಮತಗಳ ಗಳಿಕೆ ಯತ್ನ: ಮಸ್ಕಿ ಕ್ಷೇತ್ರದಲ್ಲಿ ಹಳ್ಳಿ, ಕ್ಯಾಂಪ್‌ಗಳಂತೆ ತಾಂಡಗಳ ಸಂಖ್ಯೆಯೂ ಹೆಚ್ಚಿದೆ. ಸುಮಾರು 8-10 ಸಾವಿರ ಮತಗಳು ಲಂಬಾಣಿ ಮತಗಳ ಮಸ್ಕಿ ಕ್ಷೇತ್ರದಲ್ಲಿವೆ. ಹೀಗಾಗಿ ಈ ಮತ ಗಳಿಕೆಲೆಕ್ಕಚಾರವೇ ಸಿಂಗರ್‌ ಮಂಗ್ಲಿಯನ್ನು ಕರೆಸಿಕೊಳ್ಳುವಪ್ರಯತ್ನವಾಗಿದೆ. ಕಣ್ಣೇ ಅದಿರಿಂದ ಹಾಡಿನ ಮುಂಚೆ ಗಾಯಕಿ ಮಂಗ್ಲಿ ಹಲವು ಲಂಬಾಣಿ ಸಂಸ್ಕೃತಿಯಹಾಡುಗಳನ್ನು ಗಾಡಿ ಪ್ರಸಿದ್ದಿಯಾಗಿದ್ದರು. ಹಾಡು, ನೃತ್ಯದ ಮೂಲಕ ಆಲ್ಬಂ ಸಾಂಗ್‌ಗಳನ್ನು ರಚನೆಮಾಡಿ ಎಲ್ಲರ ಗಮನ ಸೆಳೆದಿದ್ದರು. ಈಗ ಇಂತಹದ್ದೆಮೋಡಿ ಬರುವ ಹಾಡಿನ ಮೂಲಕ ಮಸ್ಕಿ ಕ್ಷೇತ್ರದಮತಗಳನ್ನು ಬಿಜೆಪಿಯತ್ತ ಸೆಳೆಯಲು ಎ.13ರಂದುಮಸ್ಕಿಗೆ ಆಗಮಿಸುತ್ತಿದ್ದಾರೆ.

Advertisement

ಏಲ್ಲೆಲ್ಲಿ ಕಾರ್ಯಕ್ರಮ: ತಮ್ಮ ಕಂಚಿನ ಕಂಠದ ಮೂಲಕವೇ ಪ್ರಸಿದ್ಧಿಯಾಗಿರುವ ಮಂಗ್ಲಿ ಎ.13ರಂದು ಮಸ್ಕಿಗೆ ಆಗಮಿಸಲಿದ್ದು ಮಧ್ಯಾಹ್ನ 3ಗಂಟೆಗೆ ಮಸ್ಕಿ ತಾಲೂಕಿನ ಅಡವಿಭಾವಿ ತಾಂಡಾದಲ್ಲಿ ಪ್ರಚಾರ ನಡೆಸಲಿದ್ದಾರೆ. ಬಳಿಕ 4:30ಕ್ಕೆಹಡಗಲಿ ತಾಂಡಾದಲ್ಲಿ ಪ್ರಚಾರ ಮಾಡಲಿದ್ದು ಸಂಜೆ 5:30ಕ್ಕೆ ಮಸ್ಕಿಯಲ್ಲಿ ಪ್ರತಾಪಗೌಡ ಪಾಟೀಲ್‌ ಪರ ಮತಯಾಚನೆ ಮಾಡಲಿದ್ದಾರೆ.

ಒಟ್ಟಿನಲ್ಲಿ ಪಕ್ಷದಲ್ಲಿನ ಎಲ್ಲ ಸ್ಟಾರ್‌ ಕ್ಯಾಂಪೇನರ್‌ಬಳಿಕ ಈಗ ತೆಲಗು ಗಾಯಕಿ ಮಂಗ್ಲಿ ಆಗಮಿಸುತ್ತಿದ್ದು ಮತದಾರರ ಮೇಲೆ ಹೇಗೆ ಪರಿಣಾಮ ಬೀರಲಿದೆ ಕಾದು ನೋಡಬೇಕಿದೆ.

 

ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next