ಬೆಂಗಳೂರು : ಕಳೆದ 2 ತಿಂಗಳಿನಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕನ್ನಡದ ಖ್ಯಾತ ಗಾಯಕ , ಸಂಗೀತ ಚಿತ್ರ ನಿರ್ದೇಶಕ ಎಲ್.ಎನ್.ಶಾಸ್ತ್ರಿ ಅವರು ಬುಧವಾರ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 46 ವರ್ಷ ಪ್ರಾಯವಾಗಿತ್ತು.
ಕಳೆದ ಜೂನ್‌ನಿಂದ ಕರುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಎಲ್.ಎನ್.ಶಾಸ್ತ್ರಿ ಮೊದಲು ಎಚ್‌ಸಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಆ ಬಳಿಕ ಮಲ್ಲಿಗೆ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದಿದ್ದರು. ಜೈನ್ ಆಸ್ಪತ್ರೆಯ ವೈದ್ಯರೊಬ್ಬರಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಅವರಿಗೆ ಮನೆಯಲ್ಲೇ ಪತ್ನಿ ಸುಮಾ ಶಾಸ್ತ್ರಿ ಅವರು ಆರೈಕೆ ಮಾಡುತ್ತಿದ್ದರು.
ಅಜಗಜಾಂತರ ಸಿನಿಮಾದಲ್ಲಿ ಮೊದಲ ಬಾರಿಗೆ ಹಾಡಿದ್ದ ಎಲ್.ಎನ್.ಶಾಸ್ತ್ರಿ ಕನ್ನಡದ ಬಹುತೇಕ ಸಿನಿಮಾಗಳಿಗೆ ಹಾಡಿದ್ದರು. “ಎ’, “ಜನುಮದ ಜೋಡಿ’, “ಸಿಪಾಯಿ'”ಜೋಡಿಹಕ್ಕಿ’ಸೇರಿದಂತೆ ನೂರಾರು ಚಿತ್ರಗಳಿಗೆ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ.
ಸಂಗೀತ ನಿರ್ದೇಶಕರಾಗಿ ಸುಮಾರು 15 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. “ಜನುಮದ ಜೋಡಿ’ ಚಿತ್ರದ “ಕೋಲು ಮಂಡೆ ಜಂಗಮದೇವ …’ ಗಾಯನಕ್ಕಾಗಿ ರಾಜ್ಯಪ್ರಶಸ್ತಿ ಕೂಡ ಪಡೆದಿದ್ದಾರೆ.
ನಿಧನಕ್ಕೆ ಚಿತ್ರರಂಗದ ಮತ್ತು ಸಂಗೀತ ಲೋಕದ ಅಪಾರ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.