ಚೆನ್ನೈ: ಇತ್ತೀಚೆಗೆ ತಾನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ಪ್ರಧಾನಿ ನಿವಾಸದಲ್ಲಿ ಭೇಟಿಯಾಗಿ ಬಂದ ದಕ್ಷಿಣ ಭಾರತದ ಖ್ಯಾತ ಗಾಯಕ ಮತ್ತು ನಟ ಎಸ್.ಪಿ. ಬಾಲಸುಬ್ರಮಣ್ಯಂ ಅವರು ಅಲ್ಲಿ ತಮಗಾದ ಅನುಭವದ ಕುರಿತಾಗಿ ತಮ್ಮ ಬೇಸರವನ್ನು ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.
ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಿರ್ಮಾಪಕ, ಉದ್ಯಮಿ ರಾಮೋಜಿ ರಾವ್ ಅವರ ಜೊತೆ ಎಸ್.ಪಿ.ಬಿ. ಅವರು ಇತ್ತೀಚೆಗೆ ಪ್ರಧಾನ ಮಂತ್ರಿ ಆಯೋಜಿಸಿದ್ದ ಔತಣಕೂಟ ಒಂದರಲ್ಲಿ ಭಾಗವಹಿಸಲು ಹೋಗಿದ್ದರು. ಆದರೆ ಅಲ್ಲಿಗೆ ಹೋಗುವ ಸಂದರ್ಭದಲ್ಲಿ ಪ್ರಧಾನಿ ಅವರ ನಿವಾಸದಲ್ಲಿ ಇವರೆಲ್ಲರ ಮೊಬೈಲನ್ನು ಭದ್ರತಾ ಸಿಬ್ಬಂದಿ ಪಡೆದುಕೊಂಡು ಪ್ರತಿಯಾಗಿ ಟೋಕನ್ ಗಳನ್ನು ನೀಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆಯೊಂದನ್ನು ಎತ್ತಿರುವ ಎಸ್.ಪಿ.ಬಿ., ಹಾಗಾದರೆ ಮೊನ್ನೆ ತಾನೆ ಬಾಲಿವುಡ್ ನಟರಾದ ಆಮೀರ್ ಖಾನ್, ಶಾರುಖ್ ಖಾನ್ ಮತ್ತು ಬಾಲಿವುಡ್ ಚಿತ್ರರಂಗದ ಇತರೇ ಗಣ್ಯರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಅವರ ಜೊತೆ ಸೆಲ್ಫೀ ತೆಗೆಸಿಕೊಂಡಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.
‘ಪ್ರಧಾನ ಮಂತ್ರಿ ಅವರು ಗಣ್ಯರನ್ನು ಭೇಟಿಯಾಗುವ ವಿಚಾರದಲ್ಲಿಯೂ ತಾರತಮ್ಯವನ್ನು ಅನುಸರಿಸುತ್ತಿದ್ದಾರೆಯೇ ಎಂಬುದು ನನ್ನನ್ನು ಕಾಡುವ ಗೊಂದಲವಾಗಿದೆ’ ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ಶತಮಾನೋತ್ಸವದ ನೆನಪಿಗಾಗಿ ‘ಚೇಂಜ್ ವಿದಿನ್’ ಎಂಬ ಕಾರ್ಯಕರ್ಮದಲ್ಲಿ ಚಿತ್ರರಂಗದ ಗಣ್ಯರನ್ನು ಪ್ರಧಾನಿ ಮೋದಿ ಅವರು ತಮ್ಮ ನಿವಾಸಕ್ಕೆ ಕರೆಯಿಸಿಕೊಂಡಿದ್ದರು ಮತ್ತು ಅವರ ಜೊತೆ ವಿಚಾರ ವಿನಿಮಯವನ್ನೂ ಸಹ ನಡೆಸಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಗೆ ಮಾತ್ರ ಆದ್ಯತೆ ನೀಡಲಾಗಿತ್ತು ಎಂದು ದಕ್ಷಿಣ ಭಾರತ ಚಿತ್ರರಂಗದ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಮತ್ತು ಪ್ರಧಾನಿ ಅವರ ಈ ನಡೆಗೆ ಅವರದ್ದೇ ಪಕ್ಷದವರಾಗಿರುವ ಚಿತ್ರನಟ ಜಗ್ಗೇಶ್ ಸಹ ಟ್ವಿಟ್ಟರ್ ನಲ್ಲಿ ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದ್ದರು.
ಇನ್ನು ಎಸ್.ಪಿ.ಬಿ. ಅವರ ಈ ಪೋಸ್ಟ್ ಗೆ ಹಲವರು ಕಮೆಂಟ್ ಮಾಡಿದ್ದು ಪ್ರಧಾನಿಯವರ ಈ ನಡೆಯನ್ನು ಖಂಡಿಸಿದ್ದಾರೆ ಮತ್ತು ಈ ವಿಚಾರದಲ್ಲಿ ಬಾಲಸುಬ್ರಮಣ್ಯ ಅವರಿಗೆ ಹಲವು ಅಭಿಮಾನಿಗಳು ತಮ್ಮ ನೈತಿಕ ಬೆಂಬಲವನ್ನು ಸೂಚಿಸಿದ್ದಾರೆ.
‘ನೀವು ಉತ್ತರ ಭಾರತದ ಕಡೆಯ ಗಾಯಕರಾಗಿದ್ದಿದ್ದರೆ ನಿಮಗೆ ರಾಜ ಮರ್ಯಾದೆ ಸಿಗುತ್ತಿತ್ತು ಮತ್ತು ಅವರೇ ಬಂದು ನಿಮ್ಮ ಜೊತೆ ಫೊಟೋ ತೆಗೆಸಿಕೊಳ್ತಾ ಇದ್ರು. ಆದ್ರೆ ನೀವು ದಕ್ಷಿಣದವರು’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
‘ಆಸ್ಕರ್ ವಿಜೇತ ನಟನೊಂದಿಗೆ (ಮೋದಿ!) ನಟರಿಗೆ ಮಾತ್ರವೇ ಸೆಲ್ಫೀ ತೆಗೆಸಿಕೊಳ್ಳಲು ಅವಕಾಶ. ನಿಮ್ಮ ವ್ಯಕ್ತಿತ್ವ ದೊಡ್ಡದು ಸರ್, ಇದನ್ನು ಮರೆತುಬಿಡಿ’ ಎಂದು ಇನ್ನೊಬ್ಬರು ತಮ್ಮ ಕಮೆಂಟ್ ನಲ್ಲಿ ಹೇಳಿದ್ದಾರೆ.