ಕುಣಿಗಲ್: ನಾಡುಪ್ರಭು ಕೆಂಪೇಗೌಡ ಆಳ್ವಿಕೆಯ ಕಾಲದ ಹುಲಿಯೂರುದುರ್ಗ ಪುರಾತನ ಸಿಂಗಾರಿ ಕೆರೆ 2 ಗ್ರಾಮ ಪಂಚಾಯಿತಿಗಳ ತಿಕ್ಕಾಟ, ಆಡಳಿತದ ವೈಫಲ್ಯದಿಂದ ಸಂಪೂರ್ಣ ಮಾಂಸ ತ್ಯಾಜ್ಯದ ಶೇಖರಣಾ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ.
ರಾಜ-ಮಹಾರಾಜರು, ಪಾಳೇಗಾರರು ಹಾಗೂ ಪೂರ್ವಿಕರು ನಾಡಿನ ಜನ-ಜಾನು ವಾರುಗಳ ಕುಡಿಯವ ನೀರು ಹಾಗೂ ವ್ಯವ ಸಾಯಕ್ಕೆ ಕೆರೆಕಟ್ಟೆ, ಜಲಾಶಯ ನಿರ್ಮಿಸುತ್ತಿದ್ದರು. ಆ ಕೆರೆಗಳೇ ಜನರ ಜೀವನಾಡಿಯಾಗಿದ್ದು, ಅವುಗಳನ್ನು ಉಳಿಸಬೇಕಾದ ಜನಪ್ರತಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆರೆಕಟ್ಟೆಗಳು, ಕಲ್ಯಾಣಿಗಳು ಅಳಿವಿನ ಅಂಚಿಗೆ ತಲುಪಿದೆ ಎಂಬುದಕ್ಕೆ ಸಿಂಗಾರಿ ಕೆರೆ ಉದಾಹರಣೆ.
ಕಸದ ತೊಟ್ಟಿ: ನಾಡುಪ್ರಭು ಕೆಂಪೇಗೌಡರು ತಮ್ಮ ಆಳ್ವಿಕೆ ಕಾಲದಲ್ಲಿ ತನ್ನ ಪ್ರೇಯಸಿ ಸಿಂಗಾರಮ್ಮ ಎಂಬವರಿಗೆ ಸಿಂಗಾರಿ ಕೆರೆ ಬಳುವಳಿಯಾಗಿ ನೀಡಿದ್ದರು ಎಂದು ಇತಿಹಾಸ ಹೇಳುತ್ತದೆ. ಆಗ ಸುತ್ತಮುತ್ತಲ ಗಾಮಸ್ಥರು ದಿನನಿತ್ಯದ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ಸಿಂಗಾರಿ ಕೆರೆ ಅವಲಂಬಿಸಿದ್ದರು. ಇಂತಹ ಪುರಾತನ ಇತಿಹಾಸ ಹೊಂದಿರುವ ಕೆರೆ ಹುಲಿಯೂರು ದುರ್ಗ ಹಾಗೂ ಹಳೇವೂರು ಗ್ರಾಪಂತಿಕ್ಕಾಟದಿಂದ ದುರ್ನಾತ ಬೀರುವ ಕಸದ ತೊಟ್ಟಿಯಾಗಿದೆ.
ಕೆರೆಯ ಅರ್ಧ ಭಾಗ ಹುಲಿಯೂರು ದುರ್ಗ ಗ್ರಾಪಂ, ಇನ್ನರ್ಧ ಕೆರೆ ಹಳೆವೂರು ಗ್ರಾಪಂಗೆ ಸೇರುತ್ತದೆ. ಹಾಗಾಗಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿ ಮಾಂಸ ಹಾಗೂ ಆಸ್ಪತ್ರೆ ತ್ಯಾಜ್ಯ ತಂದು ರಾಶಿ ರಾಶಿಯಾಗಿ ಸುರಿಯುತ್ತಿದ್ದಾರೆ. ಇದರ ಜೊತೆಗೆ ಹುಲಿಯೂರುದರ್ಗದ ಕೊಳಚೆ ನೀರನ್ನೂ ಕೆರೆಗೆ ಹರಿದು ಬಿಡಲಾಗಿದೆ. ಕೆರೆಯಲ್ಲಿರುವ ನೀರು ಪಾಚಿ ಕಟ್ಟಿಕೊಂಡು ಎಲ್ಲಾ ತ್ಯಾಜ್ಯಗಳು ಸೇರುತ್ತಿರುವುದರಿಂದ ಕೆರೆ ಅಕ್ಕಪಕ್ಕದ ರಸ್ತೆಯಲ್ಲಿ ಸಾರ್ವಜನಿಕರು ತೀರುಗಾಡಬೇಕಾದರೆ ಮೂಗು ಮುಚ್ಚಿ ತಿರುಗಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆರೆ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗಲೇ ವಾಕರಿಕೆ ಬರುವಷ್ಟರ ಮಟ್ಟಿಗೆ ಕೆರೆ ಸ್ಥಿತಿ ಹದಗೆಟ್ಟಿದೆ.
ಕೆರೆ ಸಮೀಪದಲ್ಲೇ ಹುಲಿಯೂರುದರ್ಗ ಪಟ್ಟಣ ಇರುವ ಕಾರಣ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಸಾರ್ವಜನಿಕರು ಕೆರೆ ಸ್ವತ್ಛತೆ ಕಾಪಾಡು ವಂತೆ ಸಾಕಷ್ಟು ಬಾರಿ 2 ಗ್ರಾಪಂಗಳ ಪಿಡಿಒ ಮತ್ತು ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಂದರೂ ಯಾರು ತಲೆಕೆಡಿಸಿಕೊಳ್ಳದೇ ಮೌನಕ್ಕೆ ಶರಣಾಗಿದ್ದಾರೆ. ಗ್ರಾಪಂ ಪಿಡಿಒಗಳು ಇದು ನಮಗೆ ಸೇರಲ್ಲ ಎಂದು ಸಬೂಬು ಹೇಳುತಿದ್ದು, ಸಮಸ್ಯೆ ಪರಿಹಾರ ಮಾಡುವವರ್ಯಾರು ಎಂಬುದೇ ಯಕ್ಷಪ್ರಶ್ನೆಯಾಗಿದೆ.
ಕೆರೆ ಸ್ವಚ್ಛತೆ ಮಾಡಿಸಿ ತ್ಯಾಜ್ಯ ತಂದು ಸರಿಯಬಾರದೆಂದು ನಾಮಫಲಕ ಹಾಕಿದ್ದರೂ ಹುಲಿ ಯೂರುದುರ್ಗದ ಜನ ಕೆರೆಗೆ ಮಾಂಸ ಹಾಗೂ ಇತರೆ ತ್ಯಾಜ್ಯ ಸುರಿದು ಕೆರೆಯ ಪರಿಸರ ಹಾಳು ಮಾಡಿ ದ್ದಾರೆ. ವರದರಾಜ ಸ್ವಾಮಿ ಜಾತ್ರಾ ಮಹೋತ್ಸವ ಇರುವ ಕಾರಣ ಈಗ ಸ್ವಚ್ಛ ಮಾಡಲು ಸಾಧ್ಯವಿಲ್ಲ. ನಂತರ ಪ್ರಯತ್ನ ಮಾಡುವೆ.
–ಮಂಜುನಾಥ್, ಪಿಡಿಒ, ಹಳೇವೂರು ಗ್ರಾಪಂ
-ಕೆ.ಎನ್.ಲೋಕೇಶ್