ಬೆಂಗಳೂರು: ಸೆ. 21 ಹದಿನಾಲ್ಕನೇ ಆವೃತ್ತಿಯ ಐಪಿಎಲ್ ಟೂರ್ನಿಯ ಎರಡನೇ ಅವಧಿಗೆ ರಾಯಲ್ ಚಾಲೆಂಜರ್ ತಂಡದಲ್ಲಿ ಮೂರು ಬದಲಾವಣೆ ಸಂಭವಿಸಿದೆ. ಶ್ರೀಲಂಕಾದ ವನಿಂದು ಹಸರಂಗ, ದುಷ್ಮಂತ ಚಮೀರ ಮತ್ತು ಸಿಂಗಾಪುರದ ಡೇವಿಡ್ ಟಿಮ್ ಡೇವಿಡ್ ಸೇರ್ಪಡೆಗೊಂಡಿದ್ದಾರೆ.
ಆಸ್ಟ್ರೇಲಿಯದ ಸ್ಪಿನ್ನರ್ ಆ್ಯಡಂ ಝಂಪ, ವೇಗಿಗಳಾದ ಕೇನ್ ರಿಚರ್ಡ್‌ಸನ್, ಡೇನಿಯಲ್ ಸ್ಯಾಮ್ಸ್, ನ್ಯೂಜಿಲ್ಯಾಂಡಿನ ಫಿನ್ ಅಲೆನ್ ಲಭ್ಯರಾಗದ ಕಾರಣ ಈ ಬದಲಾವಣೆ ಮಾಡಿಕೊಳ್ಳಲಾಗಿದೆ.
ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗ ಕಳೆದೊಂದು ವರ್ಷದಿಂದ ಉತ್ತಮ ಪ್ರದರ್ಶನ ತೋರುತ್ತಿದ್ದು, ಇತ್ತೀಚೆಗಷ್ಟೆ ಮುಕ್ತಾಯಗೊಂಡ ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಒಟ್ಟು 7 ವಿಕೆಟ್ ಕಬಳಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಬಿಗ್ ಹಿಟ್ಟಿಂಗ್ ಬ್ಯಾಟ್ಸ್‌ಮನ್ :
ಸಿಂಗಾಪುರದ ಬಿಗ್ ಹಿಟ್ಟಿಂಗ್ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಪಾಕಿಸ್ಥಾನ್ ಸೂಪರ್ ಲೀಗ್‌ನಲ್ಲಿ ಲಾಹೋರ್ ಖಲಂದರ್ ಪರ ಆಡಿದ್ದರು. ಇದಕ್ಕೂ ಮೊದಲು ಬಿಗ್ ಬಾಶ್‌ನಲ್ಲಿ ಹೋಬರ್ಟ್ ಹರಿಕೇನ್ಸ್ ಪರ ಆಡುತ್ತ 153.29ರ ಸರಾಸರಿಯಲ್ಲಿ 279 ರನ್ ಪೇರಿಸಿದ್ದರು. ಬಳಿಕ ಇಂಗ್ಲಿಷ್ ಕ್ರಿಕೆಟ್ ಲೀಗ್‌ನಲ್ಲಿ ಸರ್ರೆ ಪರ ಆಡಿದ 4 ಪಂದ್ಯಗಳಲ್ಲಿ 2 ಶತಕ, ಒಂದು ಅರ್ಧ ಶತಕ ಹೊಡೆದು ಮಿಂಚಿದ್ದರು.
ಆರ್‌ಸಿಬಿ ತಂಡದಲ್ಲೀಗ 7 ಮಂದಿ ವಿದೇಶಿ ಆಟಗಾರ ಕೋಟಾ ಭರ್ತಿಯಾದಂತಾಯಿತು. ಶೀಘ್ರದಲ್ಲೇ ಉಳಿದೋರ್ವ ಆಟಗಾರನನ್ನು ಸೇರಿಸಿಕೊಳ್ಳಲಾಗುವುದು ಎಂದು ನೂತನ ಕೋಚ್ ಮೈಕ್ ಹೆಸನ್ ಹೇಳಿದರು.