ಸಿಂಗಾಪುರ: ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಸಿಂಗಾಪುರ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ಬುಧವಾರ ನಡೆದ ಮಹಿಳೆಯರ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.5 ಶ್ರೇಯಾಂಕಿತ ಸಿಂಧು 10-21, 21-15, 22-20 ರಿಂದ ಜಪಾನ್ ಆಟಗಾರ್ತಿ ನೊಜೊಮಿ ಒಕುಹರ ವಿರುದ್ಧ ಜಯಸಾಧಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು.
1 ಗಂಟೆ 2 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಸಿಂಧು ಭರ್ಜರಿ ಹೋರಾಟ ನಡೆಸಿ ಪಂದ್ಯವನ್ನು ವಶಪಡಿಸಿಕೊಂಡರು. ಆಲ್ ಇಂಗ್ಲೆಂಡ್ ಚಾಂಪಿಯನ್ ಜಪಾನ್ ಆಟಗಾರ್ತಿ ಮೊದಲ ಗೇಮ್ ವಶಪಡಿಸಿಕೊಂಡಿದ್ದರು. ಆದರೆ 2ನೇ ಗೇಮ್‌ನಲ್ಲಿ ಸಿಂಧು ಗೆದ್ದು ಭಾರೀ ತಿರುಗೇಟು ನೀಡಿದರು. ಹೀಗಾಗಿ ಪಂದ್ಯ 3ನೇ ಗೇಮ್‌ಗೆ ಹೋಯಿತು.
ಜಿದ್ದಾಜಿದ್ದಿನಿಂದ ನಡೆದ 3ನೇ ಗೇಮ್‌ನಲ್ಲಿ ಅಂತಿಮವಾಗಿ ಸಿಂಧು 22-20ರಿಂದ ವಶಪಡಿಸಿಕೊಂಡು ಜಯಸಾಧಿಸಿದರು. ಮುಂದಿನ ಪಂದ್ಯದಲ್ಲಿ ಸಿಂಧು ಇಂಡೋ ನೇಷ್ಯಾದ ಫಿಟ್ರಿಯಾನಿ ಫಿಟ್ರಿಯಾನಿ ವಿರುದ್ಧ ಸೆಣಸಲಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಬಿ.ಸಾಯಿ ಪ್ರಣೀತ್ 17-21, 21-7, 21-19 ರಿಂದ ಡೆನ್ಮಾರ್ಕ್‌ನ ಎಮಿಲ್‌ಹಾಸ್ಟ್ ವಿರುದ್ಧ ಹೋರಾಟದ ಜಯ ಸಾಧಿಸಿದರು. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ ಜೋಡಿ 21-19, 21-19 ರಿಂದ ಮಲೇಷ್ಯಾ ಜೋಡಿ ಯಿನ್ ಲೋ ಲಿಮ್ ಮತ್ತು ಯಪ್ ಚೆಂಗ್ ವೆನ್ ವಿರುದ್ಧ ಜಯ ಸಾಧಿಸಿ 2ನೇ ಸುತ್ತಿಗೆ ಪ್ರವೇಶಿಸಿದರು.