ಸಿಂಧನೂರು : ನಗರದ ವಿವಿಧ ಮಾರ್ಗ ಹಾಗೂ ಬಸ್ ನಿಲ್ದಾಣಗಳಲ್ಲಿ ಕಣ್ಣಿಗೆ ಬೀಳುತ್ತಿದ್ದ ಸಿಟಿ ಬಸ್ ಗಳು ಕಾಣೆಯಾಗಿದ್ದು, ತಾಲೂಕಿಗೆ ಲಭಿಸಿದ ಸಾರಿಗೆ ಸೌಲಭ್ಯವನ್ನೇ ಬೇರೆ ತಾಲೂಕುಗಳಿಗೆ ವರ್ಗಾಯಿಸುವ ಮೂಲಕ ಅ ಧಿಕಾರಿಗಳು ಉದಾರತೆ ಮೆರೆದ ಸಂಗತಿ ಬೆಳಕಿಗೆ ಬಂದಿದೆ.
2016-17ನೇ ಸಾಲಿನಲ್ಲಿ ಬೆಳೆಯುತ್ತಿರುವ ತಾಲೂಕಿಗೆ ಅನುಕೂಲವಾಗಲೆಂದು ನಗರದ ಸಾರಿಗೆ ಡಿಪೋಕ್ಕೆ 20 ಸಿಟಿ ಬಸ್ ಮಂಜೂರಾಗಿದ್ದವು. ಆರಂಭದ ದಿನಗಳಲ್ಲಿ ಬೇಡಿಕೆ ಆಧರಿಸಿ ಕುಷ್ಟಗಿ ರಸ್ತೆಯ ಹತ್ತಿರದ ಹಳ್ಳಿಗಳು, ಮಸ್ಕಿ ಮಾರ್ಗದ ಹಳ್ಳಿಗಳು, ಗಂಗಾವತಿ ಮಾರ್ಗದ ಹಳ್ಳಿಗಳಿಗೆ ಬಸ್‌ಗಳನ್ನು ಓಡಿಸಲಾಗುತ್ತಿತ್ತು. ಇದರಿಂದ ಜನರಿಗೆ ಅನುಕೂಲವಾಗಿತ್ತು. ಹೆಚ್ಚಿನ ಬಸ್‌ಗಳು ದೊರೆತ ಹಿನ್ನೆಲೆಯಲ್ಲಿ ಜನ ಕಾಯ್ದು ಕುಳಿತುಕೊಳ್ಳಬೇಕಾದ ತೊಂದರೆ ತಪ್ಪಿತ್ತು. ಕೆಲ ವರ್ಷಗಳ ನಂತರ ಹಂತ-ಹಂತವಾಗಿ ಬಸ್‌ಗಳನ್ನೇ ಬೇರೆ ತಾಲೂಕುಗಳಿಗೆ ಕಳಿಸಲಾಗಿದೆ.
ಹೋಗಿದ್ದು ಎಲ್ಲಿಗೆ?: ಇಲ್ಲಿನ ಡಿಪೋದಲ್ಲಿ ಲಭ್ಯವಿದ್ದ 20 ಸಿಟಿ ಬಸ್‌ಗಳ ಪೈಕಿ 2 ಬಸ್‌ಗಳನ್ನು ಸೆಪ್ಟೆಂಬರ್ 3, 2019ರಂದು ಲಿಂಗಸುಗೂರು ಸಾರಿಗೆ ಘಟಕಕ್ಕೆ ವರ್ಗಾಯಿಸಲಾಗಿದೆ. ಆಗಸ್ಟ್ 11 ಹಾಗೂ ಸೆಪ್ಟೆಂಬರ್ 27, 2017ರಂದು 4 ಬಸ್‌ಗಳನ್ನು ಮಸ್ಕಿಗೆ ಕಳಿಸಲಾಗಿದೆ. ಇದೇ ವೇಳೆ ಕಲಬುರಗಿ ಡಿಪೋಗೆ 6 ಬಸ್‌ಗಳನ್ನು ವರ್ಗಾಯಿಸಲಾಗಿದೆ. ಮಾರ್ಚ್ 1, 2019ರಂದು ರಾಯಚೂರು ಘಟಕಕ್ಕೆ 1, ಯಾದಗಿರಿ ಘಟಕಕ್ಕೆ 1 ಬಸ್‌ನ್ನು ಕಳಿಸಲಾಗಿದೆ. ಕೊನೆಯಲ್ಲಿ 6 ಸಿಟಿ ಬಸ್ ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಮಾರ್ಚ್ 20, 2015ರವರೆಗೆ ಸ್ಥಳೀಯ ಡಿಪೋದ ವಶದಲ್ಲಿ ಬಸ್ ಗಳನ್ನು ಹಂತ-ಹಂತವಾಗಿ ಬೇರೆಡೆ ರವಾನಿಸಲಾಗಿದೆ.
ತಾಲೂಕು ಕಡೆಗಣನೆ: ಜಿಲ್ಲೆಯ ಬೇರೆ ಡಿಪೋಗಳಲ್ಲಿ ಸಿಟಿ ಬಸ್‌ಗಳಿಗೆ ಭಾರಿ ಬೇಡಿಕೆ ಇದೆ ಎಂಬುದನ್ನು ಸಾರಿಗೆ ಇಲಾಖೆ ಅ ಧಿಕಾರಿಗಳೇ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಮಸ್ಕಿ, ಲಿಂಗಸುಗೂರು, ರಾಯಚೂರು, ಯಾದಗಿರಿ, ಕಲಬರುಗಿಯಲ್ಲಿ ಸಿಟಿ ಬಸ್‌ಗಳು ಸೇವೆಗೆ ಬೇಕಾಗಿವೆ. ಅಲ್ಲಿನ ಅಧಿ ಕಾರಿಗಳು ಇಲ್ಲಿನ ಸಿಬ್ಬಂದಿಯ ಮೇಲೆ ಒತ್ತಡ ತಂದು ಬಸ್ ಗಳನ್ನು ವರ್ಗಾಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಿತ್ಯ ವಿದ್ಯಾರ್ಥಿಗಳು ಸಾರಿಗೆ ಬಸ್ ಸೌಕರ್ಯವಿಲ್ಲದ ಕಾರಣಕ್ಕೆ ನಿಲ್ದಾಣದಲ್ಲಿ ಕಾದು ಕುಳಿತುಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಇರುವ ಬಸ್‌ಗಳನ್ನೇ ಬೇರೆ ತಾಲೂಕುಗಳಿಗೆ ಕಳಿಸಿ, ಇಲ್ಲಿನ ಜನರಿಗೆ ಸಿಗಬೇಕಾದ ಸೌಲಭ್ಯ ಕಡಿತಗೊಳಿಸಿದ ಅಧಿ ಕಾರಿಗಳ ನಡೆ ಅಚ್ಚರಿಗೆ ಕಾರಣವಾಗಿದೆ.