ಹೊಸದಿಲ್ಲಿ: ತವರಿನ “ಇಂಡಿಯಾ ಓಪನ್’ ಬ್ಯಾಡ್ಮಿಂಟನ್ ಕೂಟದಲ್ಲಿ ಭಾರತೀಯರ ಗೆಲುವಿನ ಓಟ ಮುಂದುವರಿದೆ. ಕೆ. ಶ್ರೀಕಾಂತ್, ಪಾರುಪಳ್ಳಿ ಕಶ್ಯಪ್, ಪಿ.ವಿ. ಸಿಂಧು ತಮ್ಮ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಜಯಿಸಿ ಉಪಾಂತ್ಯ ಪ್ರವೇಶಿಸಿದ್ದಾರೆ.
ಪಿ.ವಿ. ಸಿಂಧು ಭಾರೀ ಹೋರಾಟ ನೀಡಿದ ಡೆನ್ಮಾರ್ಕ್‌ನ ಮಿಯಾ ಬ್ಲಿಶೆಟ್ ಅವರನ್ನು 21-19, 22-20ರಿಂದ ಪರಾಭವಗೊಳಿಸಿದರು.
ಪುರುಷರ ವಿಭಾಗದ ಸಿಂಗಲ್ಸ್ ವಿಭಾಗದಲ್ಲಿ ಕೆ. ಶ್ರೀಕಾಂತ್ ಭಾರತದವರೇ ಆದ ಬಿ. ಸಾಯಿ ಪ್ರಣೀತ್ ಅವರನ್ನು 21-23, 21, 11, 21-19 ಗೇಮ್‌ಗಳಿಂದ ಸೋಲಿಸಿದರು. ಸೆಮಿಫೈನಲ್‌ನಲ್ಲಿ ಶ್ರೀಕಾಂತ್ ಎದುರಾಳಿ ಚೀನದ ವಾಂಗ್ ಯುಕ್ಸಿಯಾಂಗ್. ಇನ್ನೊಂದು ಪಂದ್ಯದಲ್ಲಿ ಪಾರುಪಳ್ಳಿ ಕಶ್ಯಪ್ ಚೈನೀಸ್ ತೈಪೆಯ ವಾಂಗ್ ತ್ಸು ವೀ ವಿರುದ್ಧ 21-16, 21-11 ನೇರ ಗೇಮ್‌ಗಳಿಂದ ಜಯ ಸಾಧಿಸಿದರು. ಸೆಮಿಫೈನಲ್‌ನಲ್ಲಿ ಅವರು ಡೆನ್ಮಾರ್ಕ್ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ ಆಡಲಿದ್ದಾರೆ. ವಿಕ್ಟರ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಎಚ್.ಎಸ್. ಪ್ರಣಯ್ ವಿರುದ್ಧ 21-10, 21-16 ಗೇಮ್‌ಗಳಿಂದ ಜಯಿಸಿದರು.
ಪುರುಷರ ಡಬಲ್ಸ್ ವಿಭಾಗದಲ್ಲಿ ಮನು ಅತ್ರಿ-ಸುಮೀತ್ ಬಿ. ರೆಡ್ಡಿ ಭಾರತದ ಪ್ರಣವ್ ಜೆರ್ರಿ ಜೋಪ್ರಾ-ಶಿವಂ ಶರ್ಮ ಜೋಡಿಗೆ 21-10, 21-12 ಗೇಮ್‌ಗಳ ಸೋಲುಣಿಸಿತು.
ವನಿತಾ ಡಬಲ್ಸ್‌ನಲ್ಲಿ ನಿರಾಸೆ
ವನಿತಾ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಭಾರತದ ಎರಡೂ ಜೋಡಿಗಳೂ ನಿರಾಸೆ ಮೂಡಿಸಿವೆ. ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿ ರೆಡ್ಡಿ ಮತ್ತು ಅರ್ಪಣಾ ಬಾಲನ್-ಶ್ರುತಿ ಕೆ.ಪಿ. ಪರಾಭವಗೊಂಡು ಕೂಟದಿಂದ ನಿರ್ಗಮಿಸಿದರು.