ಬಾಲಿ (ಇಂಡೋನೇಷ್ಯಾ): ಇಂಡೋನೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಭರವಸೆಯ ಆಟಗಾರರಾದ ಪಿ.ವಿ. ಸಿಂಧು, ಕೆ. ಶ್ರೀಕಾಂತ್ ಅವರ ಓಟ ಕೊನೆಗೊಂಡಿದೆ. ಇಬ್ಬರೂ ಸೆಮಿಫೈನಲ್‌ನಲ್ಲಿ ಸೋತು ಕೂಟದಿಂದ ನಿರ್ಗಮಿಸಿದರು.
ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ಜಪಾನಿನ ಅಕಾನೆ ಯಮಾಗುಚಿಗೆ ಸುಲಭದಲ್ಲಿ ಶರಣಾದರು. ಕೇವಲ 32 ನಿಮಿಷದಲ್ಲಿ ಮುಗಿದ ಈ ಪಂದ್ಯದಲ್ಲಿ ಯಮಾಗುಚಿ 21-13, 21-9 ಅಂತರದಿಂದ ಭಾರತೀಯಳಿಗೆ ಸೋಲುಣಿಸಿದರು.
ಯಮಾಗುಚಿ ವಿರುದ್ಧ ಸಿಂಧು ಅವರೇ ನೆಚ್ಚಿನ ಆಟಗಾರ್ತಿಯಾಗಿದ್ದರು. ಇವರೆದುರಿನ ಹಿಂದಿನ 19 ಪಂದ್ಯಗಳ ಪೈಕಿ 12ರಲ್ಲಿ ಜಯ ಸಾಧಿಸಿದ ಹೆಗ್ಗಳಿಕೆ ಸಿಂಧು ಅವರದಾಗಿತ್ತು. ಅಲ್ಲದೇ ಈ ವರ್ಷದ ಎರಡೂ ಪಂದ್ಯಗಳಲ್ಲಿ ಯಮಾಗುಚಿಗೆ ಸೋಲುಣಿಸಿದ್ದರು. ಆದರೆ ಇಲ್ಲಿ ಜಪಾನಿ ಆಟಗಾರ್ತಿಗೆ ಸುಲಭದಲ್ಲಿ ಶರಣಾಗಿ ಅಚ್ಚರಿ ಹುಟ್ಟಿಸಿದರು.
ಶ್ರೀಕಾಂತ್ ನಿರ್ಗಮನ:
ಕೆ. ಶ್ರೀಕಾಂತ್ ಅವರನ್ನು ಡೆನ್ಮಾರ್ಕ್‌ನ 3ನೇ ಶ್ರೇಯಾಂಕಿತ ಆಟಗಾರ ಆ್ಯಂಡ್ರೆಸ್ ಅಂಟೋನ್ಸೆನ್ 21-14, 21-9 ಅಂತರದಿಂದ ಪರಾಭವಗೊಳಿಸಿದರು. ಮೊದಲ ಗೇಮ್ ವೇಳೆ 3-3, 4-4, 5-5 ಸಮಬಲ ಸಾಧಿಸಿದ್ದಷ್ಟೇ ಶ್ರೀಕಾಂತ್ ಸಾಧನೆ ಎನಿಸಿತು. ಶ್ರೀಕಾಂತ್ ಕ್ವಾರ್ಟರ್ ಫೈನಲ್‌ನಲ್ಲಿ ಎಚ್.ಎಸ್. ಪ್ರಣಯ್ ಅವರನ್ನು ಸೋಲಿಸಿದ್ದರು.