ಹೊಸದಿಲ್ಲಿ: ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌ನಲ್ಲಿ ಪಿ.ವಿ. ಸಿಂಧು 5 ಸ್ಥಾನಗಳ ತೀವ್ರ ಕುಸಿತ ಅನುಭವಿಸಿದ್ದಾರೆ. ಮಾಜಿ ವಿಶ್ವ ನಂ.2 ಸಿಂಧು ಈಗ 17ನೇ ಸ್ಥಾನಕ್ಕೆ ಇಳಿದಿದ್ದಾರೆ. ಇದು ಕಳೆದೊಂದು ದಶಕದಲ್ಲೇ ಸಿಂಧು ಕಂಡ ಅತ್ಯಂತ ಕೆಳಮಟ್ಟದ ರ್‍ಯಾಂಕಿಂಗ್ ಆಗಿದೆ. 2013ರ ಜನವರಿಯಲ್ಲೂ ಸಿಂಧು 17ನೇ ಸ್ಥಾನಿಯಾಗಿದ್ದರು.
2016ರ ಬಳಿಕ ಸಿಂಧು ಬಹುತೇಕ ಟಾಪ್-10 ಯಾದಿಯಲ್ಲೇ ಉಳಿದಿ ದ್ದರು. ಅದೇ ವರ್ಷ ಜೀವನಶ್ರೇಷ್ಠ 2ನೇ ರ್‍ಯಾಂಕಿಂಗ್ ಪಡೆದಿದ್ದರು.
ಗಾಯ ಹಾಗೂ ಫಿಟ್‌ನೆಸ್ ಸಮಸ್ಯೆಯಿಂದ 5 ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದ ಸಿಂಧು, ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ಗೆ ಮರಳಿದ ಬಳಿಕ ಪ್ರಸಕ್ತ ಸೀಸನ್‌ನಲ್ಲಿ ಒಂದೂ ಪ್ರಶಸ್ತಿ ಗೆದ್ದಿಲ್ಲ. ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ನಲ್ಲಿ ಫೈನಲ್ ತಲುಪಿದ್ದೇ “ಬೆಸ್ಟ್ ಫಿನಿಶ್’ ಆಗಿದೆ. ಅನಂತರ ಮಲೇಷ್ಯಾ ಮಾಸ್ಟರ್ ಮತ್ತು ಕೆನಡಾ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಎಡವಿದರು. ಯುಎಸ್ ಓಪನ್ ಕೂಟದಲ್ಲಿ ಕ್ವಾರ್ಟರ್ ಫೈನಲ್‌ನಲ್ಲೇ ಮುಗ್ಗರಿಸಿದರು.
ಸೈನಾ ನೆಹ್ವಾಲ್ ಅವರದೂ 5 ಸ್ಥಾನಗಳ ಕುಸಿತ. ಇವರದ್ದೀಗ 36ನೇ ರ್‍ಯಾಂಕಿಂಗ್.
ಪುರುಷರ ವಿಭಾಗದಲ್ಲಿ ಎಚ್.ಎಸ್. ಪ್ರಣಯ್ ಒಂದು ಸ್ಥಾನದ ಕುಸಿತ ಅನುಭವಿಸಿದ್ದಾರೆ (10). ಲಕ್ಷ್ಯ ಸೇನ್ ಮತ್ತ ಕೆ. ಶ್ರೀಕಾಂತ್ ಕ್ರಮವಾಗಿ 12ನೇ ಹಾಗೂ 20ನೇ ರ್‍ಯಾಂಕಿಂಗ್ ಕಾಯ್ದುಕೊಂಡಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ 3ನೇ ರ್‍ಯಾಂಕಿಂಗ್ ಗಟ್ಟಿಗೊಳಿಸಿದ್ದಾರೆ. ಆದರೆ ವನಿತಾ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಒಂದು ಮೆಟ್ಟಿಲು ಕೆಳಗಿಳಿದಿದ್ದಾರೆ (19).