ಗ್ಲಾಸ್ಕೋ: ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಮತ್ತು ಭಾರತೀಯ ಬ್ಯಾಡ್ಮಿಂಟನ್ ಪ್ರತಿಭೆ ಕೆ. ಶ್ರೀಕಾಂತ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಮಹಿಳೆಯರ ಪ್ರೀ ಕ್ವಾರ್ಟರ್ ಸಿಂಗಲ್ಸ್‌ನಲ್ಲಿ ಸಿಂಧು 19-21, 23-21, 21-17ರಿಂದ ಹಾಂಕಾಂಗ್‌ನ ಚೆಯುಂಗ್ ನೈಗನ್ ಯಿ ವಿರುದ್ಧ ಹೋರಾಟದ ಜಯ ಸಾಧಿಸಿದರು. ಇಬ್ಬರು ಆಟಗಾರ್ತಿಯರ ನಡುವೆ ಭಾರೀ ಸ್ಪರ್ಧೆ ಇತ್ತು. ಅಂತಿಮವಾಗಿ ಸಿಂಧು ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.
ಪುರುಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್ 21-14, 21-18 ರಿಂದ ಡೆನ್ಮಾರ್ಕ್‌ನ ಆ್ಯಂಡರ್ಸ್ ಆಂಟೊನ್ಸನ್ ವಿರುದ್ಧ ಸುಲಭ ಜಯ ಸಾಧಿಸಿದರು.
ಪಂದ್ಯದ ಆರಂಭದಿಂದಲೇ ಶ್ರೀಕಾಂತ್ ಪ್ರಬಲ ಸ್ಮ್ಯಾಷ್ ಸಿಡಿಸುತ್ತ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು. ಇದರಿಂದಾಗಿ ಭಾರತೀಯ ಆಟಗಾರ ಮೊದಲನೇ ಗೇಮ್ ಅನ್ನು 21-14ರಿಂದ ವಶಪಡಿಸಿಕೊಂಡರು.2ನೇ ಗೇಮ್‌ನಲ್ಲಿ ಹೋರಾಟ ಕಂಡುಬಂತು. ಡೆನ್ಮಾರ್ಕ್ ಆಟಗಾರ ತೀವ್ರ ಸ್ಪರ್ಧೆ ನೀಡಿದ್ದರು. ಆದರೆ ಭರ್ಜರಿ ಫಾರ್ಮ್ನಲ್ಲಿರುವ ಶ್ರೀಕಾಂತ್ ಅಂತಿಮವಾಗಿ 21-18ರಿಂದ ಗೆದ್ದು ಕ್ವಾರ್ಟರ್‌ಗೆ ಪ್ರವೇಶಿಸಿದರು.
ಮೊದಲ ಗೇಮ್‌ನಲ್ಲಿ 34ನೇ ಶ್ರೇಯಾಂಕಿತ ಹಾಂಕಾಂಗ್ ಆಟಗಾರ್ತಿ 21-19ರಿಂದ ಸಿಂಧುಗೆ ಆಘಾತ ನೀಡಿದ್ದರು. ಆದರೆ 2ನೇ ಗೇಮ್‌ನಲ್ಲಿ ಇಬ್ಬರ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬಂತು. ಒಂದು ಹಂತದಲ್ಲಿ ಸಿಂಧು ಮುನ್ನಡೆ ಪಡೆದರೆ, ಮತ್ತೂಂದು ಹಂತದಲ್ಲಿ ಹಾಂಕಾಂಗ್ ಆಟಗಾರ್ತಿ ಮುನ್ನಡೆ ಪಡೆಯುತ್ತಿದ್ದರು. ಹೀಗಾಗಿ ಒಂದು ಹಂತದಲ್ಲಿ ಸಿಂಧು ಸೋಲುತ್ತಾರೆ ಎಂದೇ ಅಂದಾಜಿಸಲಾಗಿತ್ತು. ಆದರೆ ತನ್ನ ಹೋರಾಟವನ್ನು ಬಿಡದ ಸಿಂಧು ಅಂತಿಮವಾಗಿ 23-21ರಿಂದ ವಶಪಡಿಸಿಕೊಂಡು ಸಮಬಲ ಸಾಧಿಸಿದರು. ಇದರಿಂದಾಗಿ ಪಂದ್ಯ 3ನೇ ಗೇಮ್‌ಗೆ ಹೋಯಿತು.