ಸಿಂಧನೂರು: ಬೇಸಿಗೆಯ ಆರಂಭದಲ್ಲೇ ಬಿಸಿಲಿನ ತಾಪ ಹೆಚ್ಚಿದ್ದು, ರಣ ಬಿಸಲಿಗೆ ಜನ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುವಂತಾಗಿದೆ. ಸಿಂಧನೂರು ತಾಲೂಕಿನಲ್ಲಿ ಕಳೆದ ವರ್ಷ 42-43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಆದರೆ ಈ ಬಾರಿ ಫೆಬ್ರವರಿ ಕೊನೆ ವಾರದಲ್ಲೇ 37ರಿಂದ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈಗಲೇ ಬಿಸಿಲಿನ ಶಾಖಕ್ಕೆ ಹೈರಾಣಾಗಿರುವ ಜನತೆ ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿನ ಬಿಸಿಲು ಹೇಗಿರಬಹುದು ಎಂದು ಈಗಲೇ ಆತಂಕಗೊಳ್ಳುವಂತಾಗಿದೆ.
ಬಿಸಿಲಿನ ತಾಪ ಹೆಚ್ಚಿರುವುದರಿಂದ ಜನತೆ ಮಧ್ಯಾಹ್ನದ ಒಳಗೆ ಕೆಲಸ- ಕಾರ್ಯಗಳನ್ನು ಮುಗಿಸಿ ಮನೆ ಸೇರುತ್ತಿರುವುದು ಕಂಡು ಬರುತ್ತಿದೆ. ಇನ್ನು ಬೇಸಿಗೆ ರಜೆಯಲ್ಲಿ ಕೋಚಿಂಗ್ ಕ್ಲಾಸ್‌ಗೆ ಹೋಗುವ ವಿದ್ಯಾರ್ಥಿಗಳು ಕೂಡ ಕ್ಲಾಸ್‌ಗೆ ಹೋಗಲು ಹಿಂಜರಿಯುತ್ತಿದ್ದಾರೆ.
ತಂಪು ಪಾನೀಯಕ್ಕೆ ಮೊರೆ: ಇನ್ನು ಬಿಸಲಿನ ತಾಪಕ್ಕೆ ಬಸವಳಿದ ಜನರು ಮಧ್ಯಾಹ್ನ ದಾಹ ತಣಿಸಿಕೊಳ್ಳಲು ತಂಪು ಪಾನೀಯ, ಕಲ್ಲಂಗಡಿ ಹಣ್ಣು, ಎಳನೀರು, ಕಬ್ಬಿನ ಹಾಲು, ಐಸ್ ಕ್ರೀಮ್ ಮೊರೆ ಹೋಗುತ್ತಿದ್ದಾರೆ. ಪಟ್ಟಣದ ಮಹಾವೀರ ವೃತ್ತ, ಬಡಿಬೇಸ್ ವೃತ್ತ, ಬಸವೇಶ್ವರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಅಂಬೇಡ್ಕರ್ ವೃತ್ತ ಸೇರಿ ಜನನಿಬಿಡ ರಸ್ತೆಗಳಲ್ಲಿ ಕಲ್ಲಂಗಡಿ ಹಣ್ಣು ಮಾರಾಟ ಜೋರಾಗಿ ನಡೆಯುತ್ತಿದೆ. ಹೆಚ್ಚುತ್ತಿರುವ ಬಿಸಿಲಿನ ತಾಪಕ್ಕೆ ಜನರು ಕಲ್ಲಂಗಡಿ ಹಣ್ಣು ತಿಂದು ಬಾಯಿ ತಂಪು ಮಾಡಿಕೊಳ್ಳುತ್ತಿದ್ದಾರೆ .
ಕಳೆದ ವರ್ಷಕ್ಕಿಂತ ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿದೆ. ಮನೆಯಲ್ಲೂ ಬಿಸಿಲಿನ ತಾಪ ಹೆಚ್ಚು ಕಾಣುತ್ತಿದೆ. ರಸ್ತೆ ಬದಿಯಲ್ಲಿ ಗಿಡ-ಮರಗಳಿಲ್ಲದಿರುವುದು ಬಿಸಿಲಿನ ತಾಪ ಹೆಚ್ಚಾಗಲು ಕಾರಣವಾಗಿದೆ. ದಾಹ ತಣಿಸಿಕೊಳ್ಳಲು ತಂಪು ಪಾನೀಯ ಕುಡಿಯುವುದು ಅನಿವಾರ್ಯವಾಗಿದೆ.
ನಿರುಪಾದಿ ಗೋಸ್ಲೆ,
ಸಿಂಧನೂರು
ಪ್ರತಿ ಬಾರಿ ಏಪ್ರಿಲ್‌ನಲ್ಲಿ ಬಿಸಿಲಿನ ತಾಪಮಾನ ಕಂಡು ಬರುತ್ತಿತ್ತು.ಆದರೆ ಈ ಬಾರಿ ಫೆಬ್ರವರಿ ಕೊನೆ ವಾರದಲ್ಲೇ ಬಿಸಿಲಿನ ತಾಪಮಾನ ಹೆಚ್ಚಿದ್ದರಿಂದ ಕಲ್ಲಂಗಡಿ ಹಣ್ಣಿನ ವ್ಯಾಪಾರ ಚೆನ್ನಾಗಿ ಆಗುತ್ತಿದೆ. ಆದರೆ ನಮಗೂ ಬಿಸಿಲಲ್ಲಿ ನಿಂತು ವ್ಯಾಪಾರ ಮಾಡಲಾಗುತ್ತಿಲ್ಲ.
ಬಸವರಾಜ,
ಕಲ್ಲಂಗಡಿ ಹಣ್ಣಿನ ವ್ಯಾಪಾರಿ