ಸಿಂಧನೂರು: ತಾಲೂಕಿನ ತುರ್ವಿಹಾಳ ಗ್ರಾಮದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರುರಾಯರ 348ನೇ ಆರಾಧನಾ ಮಹೋತ್ಸವ ನಿಮಿತ್ತ ರವಿವಾರ ಅದ್ಧೂರಿಯಾಗಿ ರಥೋತ್ಸವ ನಡೆಯಿತು.
ತನ್ನಿಮಿತ್ತ ಬೆಳಗ್ಗೆ ಪ್ರಾತಃ ಸಂಕಲ್ಪ ಗದ್ಯ, ಸುಪ್ರಭಾತ, ಗುರುಸ್ತ್ರೋತ್ರ ಪಾರಾಯಣ ಸಹಿತ ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ತುಳಸಿ ಅರ್ಚನೆ, ಅಲಂಕಾರ ಬ್ರಾಹ್ಮಣ ಪೂಜೆ, ಮಧ್ಯಾಹ್ನ ನೈವೇದ್ಯ ಹಸ್ತೋದಕ, ಮಂಗಳಾರತಿ, ತೀರ್ಥ-ಪ್ರಸಾದಗಳು ಜರುಗಿದವು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಎಲ್ಲ ಜಾತಿ ಜನಾಂಗದವರಿಗೆ ದಾರಿ ತೋರುವ ಗುರುವಾಗಿದ್ದಾರೆ. ಅವರ ಮಹಿಮೆಗಳನ್ನು ತಿಳಿದ ಲಕ್ಷಾಂತರ ಭಕ್ತರು ಮಂತ್ರಾಲಯದಲಲ್ಲಿ ನಡೆಯುವ ಆರಾಧನೆಯಲ್ಲಿ ಸೇರಿ ಗುರು ರಾಯರನ್ನು ಆರಾಧಿಸುತ್ತಾರೆ. ಒಂದೆಡೆ ಬರ, ಇನ್ನೊಂದೆಡೆ ನೆರೆ ಹಾವಳಿ ಮಧ್ಯೆ ಜನ ಬೆಂದು ಹೋಗಿದ್ದಾರೆ. ಆ ಕುಟುಂಬಗಳಿಗೆ ಧೈರ್ಯ ಮತ್ತು ಸ್ಥೈರ್ಯವನ್ನು ಗುರುರಾಯರು ತುಂಬಲಿ. ರೈತರ ಮುಖದಲ್ಲಿ ನಗೆಯ ಗೆರೆ ಮೂಡಿಸಲಿ ಎಂದು ಆಶಿಸಿದರು.
ಗುರುರಾಜ ಸೇವಾ ಸಮಿತಿ ಕಾರ್ಯದರ್ಶಿ ಅನಂತರಾವ್ ದಢೇಸುಗೂರು ಅವರನ್ನು ಶಾಸಕ ವೆಂಕಟರಾವ್ ನಾಡಗೌಡ ಸನ್ಮಾನಿಸಿದರು. ಕೃಷ್ಣ ಮಲಕ ಸಮುದ್ರ, ವೆಂಕಟರಾವ್ ಚೆನ್ನಳ್ಳಿ ತಂಡದಿಂದ ಸಂಗೀತ ಗಾಯನ ಹಾಗೂ ಭಜನೆ ಕಾರ್ಯಕ್ರಮಗಳು ಜರುಗಿದವು. ಅನಂದತೀರ್ಥಾಚಾರ ಅವರಿಂದ ಗುರುರಾಯರ ಮಹಿಮೆಗಳ ಕುರಿತು ವಿಶೇಷ ಉಪನ್ಯಾಸ ಜರುಗಿತು. ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಕಿಶನ್‌ರಾವ್, ನಿಕಟಪೂರ್ವ ಅಧ್ಯಕ್ಷ ಶೇಷಗಿರಿರಾವ್ ಕುಲಕರ್ಣಿ, ರಾಘವೇಂದ್ರರಾವ್ ಕೊಳಬಾಳ, ಕೃಷ್ಣ ಕಾನಿಹಾಳ, ಶ್ರೀಧರ ಕುಲಕರ್ಣಿ, ರಾಘವೇಂದ್ರರಾವ್ ಕುಲಕರ್ಣಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
ಶ್ರೀರಾಮ ಮಂದಿರದಲ್ಲಿ: ಸಿಂಧನೂರು ನಗರದ ಬ್ರಾಹ್ಮಣರ ಓಣಿಯಲ್ಲಿರುವ ಶ್ರೀರಾಮ ಮಂದಿರದಲ್ಲಿ ರಾಯರ ಉತ್ತಾರಾರಾಧನೆ ನಿಮಿತ್ತ ರವಿವಾರ ರಥೋತ್ಸವ ನಡೆಯಿತು. ಬ್ರಾಹ್ಮಣ ಸಮಾಜ ಅಧ್ಯಕ್ಷ ರಾಮರಾವ್ ಕುಲಕರ್ಣಿ, ಮುಖಂಡರಾದ ಡಾ| ಆರ್.ವಿ.ಜೋಶಿ, ಎಂ.ಕೆ.ಗೌರಕರ್, ವೆಂಕಣ್ಣ ಜೋಶಿ, ರಾಯರ ಮಠದ ವ್ಯವಸ್ಥಾಪಕರಾದ ಎಚ್. ಕೃಷ್ಟಾಚಾರ್ಯ ಹಾಗೂ ದ್ವಾರಕಾನಾಥಾಚಾರ್ಯ ಮತ್ತಿತರ ಮುಖಂಡರು ಭಾಗವಹಿಸಿದ್ದರು. ರಾತ್ರಿ ಭಜನೆ, ಪಲ್ಲಕ್ಕಿ ಸೇವೆ, ರಥೋತ್ಸವ, ಸ್ವಸ್ತಿ ವಾಚನ, ಅಷ್ಠಾವಧಾನ, ಮಹಾಮಂಗಳಾರತಿ ನಡೆದವು.