ಸಿಂಧನೂರು: ಪ್ರತಿ ವರ್ಷ ಭಾರಿ ಬೇಡಿಕೆ ಇರುತ್ತಿದ್ದ ಮಣ್ಣಿನ ಮಡಿಕೆಗಳಿಗೆ ಪ್ರಸಕ್ತ ಸಾಲಿನಲ್ಲಿ ಕೋವಿಡ್ ವೈರಸ್ ದೊಣ್ಣೆ ಪೆಟ್ಟು ನೀಡಿದೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನ ಮಡಿಕೆ ವ್ಯಾಪಾರ ಮಾಡುವ ಕುಂಬಾರರ ಆರ್ಥಿಕ ಬದುಕಿಗೆ ಈ ಬಾರಿ ಕೋವಿಡ್ ಕತ್ತರಿ ಹಾಕಿದೆ.
ಪ್ರತಿ ವರ್ಷ ಬೇಸಿಗೆ ಸಮೀಪಿಸುತ್ತಿದ್ದಂತೆ ನಗರದಲ್ಲಿ ಮಣ್ಣಿನ ಮಡಿಕೆ ವ್ಯಾಪಾರ ವ್ಯಾಪಕವಾಗಿ ಜೋರಾಗಿ ನಡೆಯುತ್ತಿತ್ತು. ಈ ಬಾರಿ ಕುಂಬಾರರು ಕೋವಿಡ್ ಹೊಡೆತಕ್ಕೆ ಸಿಲುಕಿ ಕಂಗಾಲಾಗುವಂತಾಗಿದೆ. ಕುಂಬಾರನಿಗೆ ವರುಷ ದೊಣ್ಣಗೆ ನಿಮಿಷ ಎನ್ನುವಂತಾಗಿದೆ ಸದ್ಯದ ಪರಿಸ್ಥಿತಿ.
ಸಂಡೂರುನಿಂದ ಅನೇಕ ವರ್ಷಗಳಿಂದ ತಾಲೂಕಿಗೆ ಬಂದು ಮಡಿಕೆ ವ್ಯಾಪಾರ ಮಾಡುತ್ತ ಅಲ್ಪಸ್ವಲ್ಪ ಹಣ ಸಂಪಾದಿಸುತ್ತಿದ್ದರು. ಈ ಬಾರಿ ಕೊರೊನಾ ಲಾಕ್‌ಡೌನ್‌ನಿಂದಾಗಿ ಕೈಯಲ್ಲಿ ಕೆಲಸವಿಲ್ಲದೆ ತಯಾರಿಸಿದ ಮಡಿಕೆಗಳು ಅಷ್ಟಾಗಿ ಮಾರಾಟವಾಗುತ್ತಿಲ್ಲ. ಇದರಿಂದಾಗಿ ಆದಾಯಕ್ಕೆ ಖೋತಾ ಬಿದ್ದಿದೆ.
ಪ್ರತಿ ವರ್ಷ 2ರಿಂದ ಎರಡೂವರೆ ಸಾವಿರ ಮಣ್ಣಿನ ಮಡಿಕೆಗಳು ಮಾರಾಟವಾಗುತ್ತಿದ್ದವು. ಈ ಬಾರಿ ಬೇಸಿಗೆ ಕಳೆದುಹೋಗುತ್ತಿದ್ದರು ಕೇವಲ ಇಲ್ಲಿಯವರೆಗೆ 200ರಿಂದ 250 ಮಣ್ಣಿನ ಮಡಿಕೆ ಮಾತ್ರ ಮಾರಾಟ ಮಾಡಲಾಗಿದೆ. ಇದರಿಂದಾಗಿ ಕುಟುಂಬ ನಿರ್ವಹಣೆಗೆ ದುಸ್ತರವಾಗಿದೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.
ಕುಂಬಾರಿಕೆ ವೃತ್ತಿ ಮಾಡುವ ಕುಟುಂಬಗಳನ್ನು ಸರಕಾರ ಗುರುತಿ ಸಹಾಯಧನ ಒದಗಿಸಬೇಕು ಎಂಬುದು ಪ್ರಜ್ಞಾವಂತ ನಾಗರೀಕರ ಮಾತಾಗಿದೆ. ಕೋವಿಡ್ ವೈರಸ್ ಲಾಕ್ ಡೌನ್‌ನಿಂದಾಗಿ ಮಣ್ಣಿನ ಮಡಿಕೆ ವ್ಯಾಪಾರ ಕಮರಿಹೋಗಿದೆ. ನಾವು ಕಳೆದ 20 ವರ್ಷದಿಂದ ಕುಂಬಾರಿಕೆ ವೃತ್ತಿ ಮಾಡುತ್ತಿದ್ದೇವೆ. ಈ ಹಿಂದೆ ಹಳ್ಳಿಗಳಲ್ಲಿ ಜೋಳ ಹಾಗೂ ಭತ್ತಕ್ಕೆ ಮಡಿಕೆ ಮಾರುತ್ತಿದ್ದೇವು. ಆದರೆ ಈಗ ಕೋವಿಡ್ ವೈರಸ್ ಲಾಕ್‌ಡೌನ್‌ನಿಂದಾಗಿ ಕುಟುಂಬ ನಿರ್ವಹಿಸಲು ದುಸ್ತರವಾಗಿದೆ. ಬೇಸಿಗೆ ಸಮಯದಲ್ಲಿ 20ರಿಂದ 25 ಸಾವಿರ ರೂ. ಲಾಭವಾಗುತ್ತಿತ್ತು. ಈ ಬಾರಿ ನಷ್ಟ ಅನುಭವಿಸುವಂತಾಗಿದೆ.
ರಾಜಣ್ಣ ಕುಂಬಾರ,
ಮಣ್ಣಿನ ಮಡಿಕೆ ವ್ಯಾಪಾರಿ
ಚಂದ್ರಶೇಖರ ಯರದಿಹಾಳ