Advertisement

ತುಂತುರು ಮಳೆಗೆ ನೆಲಕ್ಕೊರಗಿದ ಭತ್ತ

12:46 PM Dec 04, 2019 | Naveen |

„ಚಂದ್ರಶೇಖರ ಯರದಿಹಾಳ
ಸಿಂಧನೂರು:
ತಾಲೂಕಿನಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಮೋಡ ಮುಸುಕಿದ ವಾತಾವರಣ ಮತ್ತು ಆಗಾಗ ತುಂತುರು ಮಳೆ ಸುರಿಯುತ್ತಿದ್ದು ಭತ್ತ, ತೊಗರಿ, ಕಡ್ಲಿ ಸೇರಿ ವಿವಿಧ ಬೆಳೆ ಬೆಳೆದ ರೈತರು ಬೆಳೆ ರಕ್ಷಣೆಗಾಗಿ ಪರದಾಡುವಂತಾಗಿದೆ.

Advertisement

ತಾಲೂಕಿನ ನೀರಾವರಿ ಆಶ್ರಿತ ಪ್ರದೇಶಗಳಾದ ಜವಳಗೇರಾ, ಪಗಡದಿನ್ನಿ, ಹಂಚಿನಾಳ ಕ್ಯಾಂಪ್‌, ಸಿಂಗಾಪುರ, ಮುಕ್ಕುಂದಾ, ಆಯನೂರು, ಧಡೇಸಗೂರು, ಕೆಂಗಲ್‌, ಸಾಲಗುಂದಾ, ಹೆಡಗಿನಾಳ, ಹುಡಾ ಸೇರಿದಂತೆ ಇತರೆಡೆಗಳಲ್ಲಿ ಕಟಾವಿಗೆ ಬಂದಂತಹ ಭತ್ತವು ನೆಲಕ್ಕುರುಳುವಂತಾಗಿದ್ದು, ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ಒಣ ಬೇಸಾಯದ ಪ್ರದೇಶಗಳಾದ ಕಲ್ಮಂಗಿ, ಹತ್ತಿಗುಡ್ಡ, ಹಿರೇಬೇರ್ಗಿ, ಚಿಕ್ಕಬೇರ್ಗಿ, ಸಂಕನಾಳ, ಬಪ್ಪೂರು, ಗುಡಗಲದಿನ್ನಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಹಿಂಗಾರಿನಲ್ಲಿ ತೊಗರಿ, ಕಡ್ಲಿ, ಹತ್ತಿ, ಜೋಳ ಇತರೆ ಬೆಳೆಯಲಾಗಿದೆ. ಈಗ ಮೋಡ ಮುಸುಕಿದ ವಾತಾವರಣ ಮತ್ತು ಅಕಾಲಿಕ ಮಳೆಯಿಂದಾಗಿ ಈ ಬೆಳೆಗಳಿಗೆ ಕೀಟಬಾಧೆ ತಗಲುವಂತಾಗಿದೆ. ತುಂತುರು ಮಳೆಗೆ ಕಡ್ಲಿ, ತೊಗರಿ, ಹತ್ತಿ ಉದುರುವಂತಾಗಿದೆ.

ಕಡ್ಲಿ ಬೆಳೆ ಹುಳಿ ಕಳೆದುಕೊಳ್ಳುವಂತಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ನಾಲ್ಕೈದು ವರ್ಷಗಳಿಂದ ಮಳೆ ಇಲ್ಲದೇ ಹಾಗೂ ಕಾಲುವೆಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದರು. ಮುಂಗಾರಿನಲ್ಲಿ ತಡವಾಗಿಯಾದರೂ ಉತ್ತಮ ಮಳೆ ಆಗಿದೆ. ಜೊತೆಗೆ ಕಾಲುವೆಗೆ ನೀರು ಹರಿಬಿಡಲಾಗಿದೆ. ಈ ಬಾರಿಯಾದರೂ ಉತ್ತಮ ಬೆಳೆ ಬೆಳೆಯಬೇಕೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ಸುರಿಯುತ್ತಿರುವ ಅಕಾಲಿಕ ಮಳೆ ಸಂಕಷ್ಟ ತಂದೊಡ್ಡಿದೆ.

ಅಕಾಲಿಕ ತುಂತುರು ಮಳೆಯಿಂದಾಗಿ ಕಾಳುಕಟ್ಟಿದ ಭತ್ತದ ಬೆಳೆ ನೆಲಕ್ಕೆ ಉರುಳುತ್ತಿದೆ. ಹಿಂಗಾರು ಕಡಲೆ ಬೆಳೆಗೆ ಹುಳಿ ಕಳೆದುಕೊಳ್ಳುತ್ತಿದೆ. ಹೂವು, ಮಗ್ಗು ಉದುರುತ್ತಿದೆ. ಇದರಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ರವಿಗೌಡ ಮಲ್ಲದಗುಡ್ಡ,
ರೈತ ಮುಖಂಡ

Advertisement

ಕಳೆದ ಮೂರ್‍ನಾಲ್ಕು ದಿನಗಳಿಂದ ವಾತಾವರಣದಲ್ಲಿ ಏರುಪೇರಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಚಂಡ ಮಾರುತದ ಬಿಸಿ ತಟ್ಟಿದೆ. ಈಗಾಗಲೇ ಕೆಲವು ಕಡೆ ರೈತರು ಭತ್ತ ಕಟಾವು ಮಾಡಿದ್ದಾರೆ. ಇನ್ನೂ ಕೆಲ ರೈತರು ಈ ವಾತಾವರಣಕ್ಕೆ ಭತ್ತ ಕಟಾವು ಮಾಡದಂತಾಗಿದೆ. ಇಂತಹ ವಾತಾವರಣದಿಂದ ಯಾವುದೇ ತೊಂದರೆ ಆಗದು.
ಜಯಪ್ರಕಾಶ ದೇಸಾಯಿ,
ಕೃಷಿ ಇಲಾಖೆ ಅಧಿಕಾರಿ ಸಿಂಧನೂರು

Advertisement

Udayavani is now on Telegram. Click here to join our channel and stay updated with the latest news.

Next